ಚೆನ್ನೈ: ತಮಿಳುನಾಡಿನ ಕಲ್ಲಕುರುಚಿಯ ಖಾಸಗಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ವಿದ್ಯಾರ್ಥಿನಿ ಶವದ ಮರಣೋತ್ತರ ಪರೀಕ್ಷೆ ನಡೆಸುವಂತೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.
ಇದನ್ನೂ ಓದಿ:ಭಾರತ ವಿರುದ್ಧದ ಏಕದಿನ ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ವೆಸ್ಟ್ ಇಂಡೀಸ್
ವಿದ್ಯಾರ್ಥಿನಿ ಆತ್ಮಹತ್ಯೆ ಘಟನೆ ನಂತರ ಸಾರ್ವಜನಿಕರು ಖಾಸಗಿ ಶಾಲೆಯ ಆವರಣದೊಳಕ್ಕೆ ನುಗ್ಗಿ ಹಿಂಸಾಚಾರ ನಡೆಸಿದ ನಂತರ ಕೋರ್ಟ್ ಈ ಆದೇಶ ನೀಡಿದೆ. ಯಾರು ಗಲಭೆಗೆ ಕಾರಣರಾಗಿದ್ದಾರೋ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ತೀವ್ರ ಹಿಂಸಾಚಾರ, ಪ್ರತಿಭಟನೆಗೆ ಎಡೆಮಾಡಿಕೊಟ್ಟ ನಂತರ ಘಟನೆಗೆ ಸಂಬಂಧಿಸಿದಂತೆ ಶಿಕ್ಷಕಿಯರು ಹಾಗೂ ಪ್ರಿನ್ಸಿಪಾಲ್ ಸೆಕ್ರಟರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 13ರಂದು ವಿದ್ಯಾರ್ಥಿನಿ ಮೂರನೇ ಅಂತಸ್ತಿನಿಂದ ಕೆಳಕ್ಕೆ ಹಾರಿ, ಆತ್ಮಹತ್ಯೆ ಮಾಡಿಕೊಂಡಿದ್ದಳು. ತನ್ನ ಮಗಳಿಗೆ ಇಬ್ಬರು ಶಿಕ್ಷಕಿಯರು ಯಾವಾಗಲು ಕಿರುಕುಳ ಕೊಡುತ್ತಿದ್ದರು ಎಂದು ಪೋಷಕರು ಆರೋಪಿಸಿದ್ದರು.
ಭಾನುವಾರ (ಜುಲೈ 17) ಶಾಲಾ ಆವರಣದೊಳಗೆ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, 15 ಶಾಲಾ ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿತ್ತು. ಹಲವಾರು ಜನರು, ಪೊಲೀಸರು ಗಾಯಗೊಂಡಿದ್ದರು.