ಚೆನ್ನೈ: ತಮಿಳುನಾಡಿನಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ತಗ್ಗುಪ್ರದೇಶ, ರಸ್ತೆಗಳೆಲ್ಲಾ ನೀರಿನಿಂದ ಆವೃತ್ತವಾಗಿದ್ದು, ಮತ್ತೊಂದೆಡೆ ಮತ್ತೆ ಭಾರೀ ಗಾಳಿ, ಮಳೆ ಸುರಿಯಲಿದೆ ಎಂಬ ಹವಾಮಾನ ಇಲಾಖೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಗುರುವಾರ ಸಂಜೆ 6ಗಂಟೆವರೆಗೆ ವಿಮಾನಗಳ ಆಗಮನಕ್ಕೆ ಚೆನ್ನೈ ವಿಮಾನ ನಿಲ್ದಾಣ ನಿರ್ಬಂಧ ವಿಧಿಸಿರುವುದಾಗಿ ಘೋಷಿಸಿದೆ.
ಇದನ್ನೂ ಓದಿ:ನೂತನ ಶಾಸಕರ ಪ್ರಮಾಣ ವಚನ: ರಮೇಶ್ ಭೂಸನೂರ್ ಭಾಗಿ, ಗೈರಾದ ಶ್ರೀನಿವಾಸ ಮಾನೆ; ಸ್ಪೀಕರ್ ಬೇಸರ
ಚೆನ್ನೈ ನಗರ ಸೇರಿದಂತೆ ತಮಿಳುನಾಡಿನ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಬುಧವಾರ ರಾತ್ರಿಯೂ ಭಾರೀ ಮಳೆಯಾದ ಪರಿಣಾಮ ತಗ್ಗು ಪ್ರದೇಶ ಜಲಾವೃತಗೊಂಡಿದೆ.
ಚೆನ್ನೈನ ಟಿ ನಗರ್ ಪ್ರದೇಶದ ಸುತ್ತಮುತ್ತಲಿನ ಮನೆಗಳ ಮುಂಭಾಗದಲ್ಲಿ ಮೂರು ಅಡಿಗಳಷ್ಟು ನೀರು ತುಂಬಿಕೊಂಡಿದೆ. ಕೆಲವು ಮನೆಯ ಬೆಡ್ ರೂಂ ಒಳಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ. ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗಿದೆ ಎಂದು ಸ್ಥಳೀಯರು ಆರೋಪಿಸಿರುವುದಾಗಿ ವರದಿ ತಿಳಿಸಿದೆ.
2015ರಲ್ಲಿ ಭಾರೀ ಮಳೆಯಾದ ಸಂದರ್ಭದಲ್ಲಿನ ಪರಿಸ್ಥಿತಿಯೇ ಇಂದು ಆಗಿದೆ. ಮನೆಯೊಳಗೆ ತುಂಬಿಕೊಂಡಿರುವ ನೀರನ್ನು ಖಾಲಿ ಮಾಡಲು ಹಲವರು ಪಂಪ್ ಗಳನ್ನು ಉಪಯೋಗಿಸುತ್ತಿದ್ದಾರೆ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಹಲವು ಮಾರ್ಗಗಳನ್ನು ಬಂದ್ ಮಾಡಲಾಗಿದೆ ಎಂದು ವರದಿ ವಿವರಿಸಿದೆ.
ಮಳೆ, ಪ್ರವಾಹ ಪರಿಸ್ಥಿತಿಗೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿರುವುದಾಗಿ ವರದಿ ತಿಳಿಸಿದೆ.