Advertisement

ಕಾಂಚಿಗೂ ಸ್ವರ್ಣವಲ್ಲಿಗೂ ಬಿಡಿಸಲಾಗದ ಬಾಂಧವ್ಯ

06:15 AM Mar 01, 2018 | |

ಶಿರಸಿ: ಕಾಂಚಿ ಮಠದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿಗಳ ಅಗಲಿಕೆಯ ಸುದ್ದಿ ಕೇಳುತ್ತಿದ್ದಂತೆ ಸ್ವರ್ಣವಲ್ಲಿ ಮಠದಲ್ಲಿ ಶೋಕತಪ್ತ  ವಾತಾವರಣ ಸೃಷ್ಟಿಯಾಗಿತ್ತು. ಶಾಲ್ಮಲೆ ತಟದ ಸ್ವರ್ಣವಲ್ಲಿಗೂ ಹಾಗೂ ತಮಿಳುನಾಡಿನ ಕಾಂಚಿಗೂ ಅವ್ಯಕ್ತ ಸಂಬಂಧ ಬೆಸೆದುಕೊಂಡಿತ್ತು. 25 ವರ್ಷಗಳಿಂದ ಈ ಸಂಬಂಧ ಇನ್ನಷ್ಟು ಬಲವೂ ಆಗಿತ್ತು. ವರ್ಷಕ್ಕೊಮ್ಮೆ ಸ್ವರ್ಣವಲ್ಲಿ ಸ್ವಾಮೀಜಿಗಳೂ ಕಾಂಚಿಗೆ ಭೇಟಿ ಕೊಡುವುದು ಹಾಗೂ ಅವಕಾಶ ಇದ್ದಾಗಲೆಲ್ಲ ಕಾಂಚಿಯ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿಗಳೂ ಸ್ವರ್ಣವಲ್ಲಿಗೆ ಆಗಮಿಸುವುದು ಸಾಮಾನ್ಯವಾಗಿತ್ತು.

Advertisement

ಸ್ವರ್ಣವಲ್ಲಿಗೂ ಕಾಂಚಿಗೂ ನಂಟು ಬೆಸೆಯಲು ಪರಮಾಚಾರ್ಯ ಚಂದ್ರಶೇಖರ ಸ್ವಾಮೀಜಿಗಳು ಕಾರಣ. ಸ್ವರ್ಣವಲ್ಲಿಯ ಈಗಿನ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳ ಆಯ್ಕೆ ಹಾಗೂ ನಂತರ ನಡೆದ ಪೀಠಾರೋಹಣ ಕಾರ್ಯದಲ್ಲಿ ಅವರ ಮಾರ್ಗದರ್ಶನ ಇತ್ತು. ಕಳೆದ ವರ್ಷದ ಫೆ.14ರಂದು ಸ್ವರ್ಣವಲ್ಲಿಯಲ್ಲಿ ನಡೆದ ಅತಿರುದ್ರ ಮಹಾಯಾಗದ ಸಮಾರೋಪದಲ್ಲಿ ಪಾಲ್ಗೊಂಡಿದ್ದ ಜಯೇಂದ್ರ ಸರಸ್ವತಿ ಸ್ವಾಮೀಜಿಗಳೂ ಈ ಮಾತನ್ನು ಉಲ್ಲೇಖೀಸಿದ್ದರು.

ಪರಮಾಚಾರ್ಯರರಿಗೆ ಪೀಠಾರೋಹಣ ದೀಕ್ಷೆ ಕೊಡಿಸಲು ಆಗದೇ ಇದ್ದಾಗ ಜಯೇಂದ್ರ ಸರಸ್ವತಿ ಸ್ವಾಮೀಜಿಗಳನ್ನು 26 ವರ್ಷದ ಹಿಂದೆ ಕಳಿಸಿಕೊಟ್ಟಿದ್ದರು. ಈಗಿನ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳಿಗೆ ಕಾವಿ ವಸ್ತ್ರ ಕೊಟ್ಟು ಹರಸಿದವರು ಪರಮಾಚಾರ್ಯರು. ಈ ಕಾರಣದಿಂದ ನಮ್ಮ ಸ್ವಾಮೀಜಿಗಳಿಗೂ ಕಾಂಚಿ ಎಂದರೆ ಅಭಿಮಾನ ಎನ್ನುತ್ತಾರೆ ಮಠದ ಆಸ್ಥಾನ ವಿದ್ವಾಂಸ ಬಾಲಚಂದ್ರ ಭಟ್ಟರು.

1991ರಲ್ಲಿ ಸ್ವರ್ಣವಲ್ಲಿಗೆ ಆಗಮಿಸಿ ಈಗಿನ ಯತಿಗಳಿಗೆ ದೀಕ್ಷೆ ಕೊಟ್ಟ ಜಯೇಂದ್ರ ಸರಸ್ವತಿ ಸ್ವಾಮೀಜಿಗಳು ನಂತರ ಮೂರು ಸಲ ಭೇಟಿ ನೀಡಿದ್ದರು. ಗಾಯತ್ರಿ ಜಪ ಯಜ್ಞ, ಜಯೇಂದ್ರರಿಗೆ 75ರ ಸಂಭ್ರಮದಲ್ಲಿ ಹಾಗೂ ಈಚೆಗೆ ನಡೆದ ಅತಿರುದ್ರ ಮಹಾಯಾಗದ ಸಂಭ್ರಮದಲ್ಲಿ, ಸ್ವರ್ಣವಲ್ಲಿ ಶ್ರೀಗಳು ಈವರೆಗೆ ಕಾಂಚಿಯ ಪರಾಮಾಚಾರ್ಯರ ಆರಾಧನಾ ಮಹೋತ್ಸವಕ್ಕೆ ತಪ್ಪದೇ ಪಾಲ್ಗೊಳ್ಳುವುದು ರೂಢಿ ಆಗಿತ್ತು. ಸ್ವರ್ಣವಲ್ಲಿ ಮಠದವರು ಎಂದರೆ ಕಾಂಚಿ ಮಠದಲ್ಲೂ ಆತ್ಮೀಯ ಭಾವ. ಕಾಂಚಿ ಅವರು ಸ್ವರ್ಣವಲ್ಲಿಗೆ ಬರುತ್ತಾರೆ, ಮಠದ ಪ್ರತಿನಿಧಿಗಳನ್ನಾದರೂ ಕಳಿಸುತ್ತಾರೆ ಎಂದರೆ ಇಲ್ಲೂ ಪುಳಕ. ಸ್ವರ್ಣವಲ್ಲಿ ಶ್ರೀಗಳಂತೂ ಜಯೇಂದ್ರ ಸರಸ್ವತಿ ಸ್ವಾಮೀಜಿ ಮಠಕ್ಕೆ ಬರುತ್ತಾರೆ ಎಂದರೆ ಆಯಾಸವನ್ನೂ ಮರೆಯುತ್ತಾರೆ. ಅವರ ಮೊಗದಲ್ಲಿ ಆಪ್ತ ಭಕ್ತಿಭಾವ ತುಳುಕುತ್ತದೆ.

ಈ ಹಿಂದೆ ಮಠಕ್ಕೆ ಬಂದಾಗ ಬೆಳ್ಳಿ ನಾಣ್ಯದ ಅಭಿಷೇಕವನ್ನೂ ಜಯೇಂದ್ರ ಸರಸ್ವತಿ ಸ್ವಾಮೀಜಿಗಳಿಗೆ ಮಾಡಿದ್ದರು. ಅತಿರುದ್ರ ಮಹಾಯಾಗದ ಸಮಾರೋಪದಲ್ಲಿ ರಾಜರಾಜೇಶ್ವರಿಯ ಬೆಳ್ಳಿ ಮೂರ್ತಿ ಕೊಟ್ಟು ಸನ್ಮಾನಿಸಿದ್ದರು. ಜಯೇಂದ್ರರು ಮಠಕ್ಕೆ ಬರುತ್ತಾರೆ ಎಂದರೆ ಸಂಸ್ಕೃತದಲ್ಲೇ ಆಹ್ವಾನ ಪತ್ರಿಕೆ ಮುದ್ರಿಸಿ ಶ್ರೀಗಳಿಗೆ ಅರ್ಪಿಸುತ್ತಿದ್ದರು. ಈ ಎರಡೂ ಮಠಗಳ ನಡುವೆ ಗುರು ಶಿಷ್ಯ ಪರಂಪರೆ ಮನೆ ಮಾಡಿತ್ತು. ಗುರುಗಳಿದ್ದಂತೆ ಶಿಷ್ಯರಲ್ಲೂ ಜಯೇಂದ್ರ ಸರಸ್ವತಿ ಸ್ವಾಮೀಜಿಗಳು ಬರುತ್ತಾರೆ ಎಂದರೆ ಪುಳಕ. ಜಯೇಂದ್ರರ ಮೇಲೆ ಕೊಲೆ ಆರೋಪ ಬಂದಾಗಲೂ ಈ ಮಠದ ಶಿಷ್ಯರು ರಾಜಕೀಯ ಷಡ್ಯಂತ್ರವನ್ನು ವಿರೋಧಿಸಿದ್ದರು. ಆರೋಪದಿಂದ ಮುಕ್ತರಾದಾಗ ಸಂಭ್ರಮಿಸಿದ್ದರು.

Advertisement

ಎರಡೂ ಇಂದ್ರ ಪರಂಪರೆ ಹೊಂದಿವೆ
ಈ ಮಠಕ್ಕೂ ಕಾಂಚಿಗೂ ಸಂಬಂಧ ಗಟ್ಟಿಗೊಳ್ಳಲು ಇನ್ನೊಂದು ಅಂಶವೂ ಇದೆ. ಎರಡೂ ಇಂದ್ರ ಪರಂಪರೆಯನ್ನು ಹೊಂದಿವೆ. ಅಲ್ಲಿ ಜಯೇಂದ್ರ ಸರಸ್ವತಿಗಳಿದ್ದರೆ ಇಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳು. ಹಿಂದಿನ ಗುರುಗಳಿಗೂ ಹೀಗೇ ಹೆಸರು ಹಾಗೂ ಅನುಷ್ಠಾನ ಇತ್ತು. ಕಾವಿ ವಸ್ತ್ರದಿಂದ ದಂಡ ಹಿಡಿದು ಸಂಚರಿಸುವ ತನಕ. ಶಂಕರರ ಆರಾಧನೆಯಿಂದ ಹಿಡಿದು ಸಮಾಜಮುಖೀ ಕಾರ್ಯಗಳ ತನಕ ಅಲ್ಲಿಗೂ ಇಲ್ಲಿಗೂ ಬಿಡಿಸಲಾಗದ ನಂಟಿದೆ. ಈಗಿನ ಯತಿಗಳ ಪೀಠಾರೋಹಣದ ಬಳಿಕ ಆ ಮಠಕ್ಕೂ ಇಲ್ಲಿಗೂ ಸಂಬಂಧ ಮಾಧುರ್ಯವಾಗಿತ್ತು. ಆ ನಂಟಿನ ಒಂದು ಪ್ರಮುಖ ಕೊಂಡಿ ಕಳಚಿದ್ದು ಸ್ವರ್ಣವಲ್ಲಿ ಮಠದ ಶಿಷ್ಯರ ವಲಯದಲ್ಲೂ ನೋವು ಕಾಣಿಸಿದೆ. ಸ್ವರ್ಣವಲ್ಲಿ ಶ್ರೀಗಳು ಕೂಡ ಬುಧವಾರ ಶಿಷ್ಯರ ಜತೆ ಕಾಂಚಿಗೆ ತೆರಳಿದ್ದು, ಗುರುವಾರ ನಡೆಯುವ ಅಂತಿಮ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.

– ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next