Advertisement

ತಮಿಳುನಾಡು ಹೋರಾಟ ನಿರರ್ಥಕ

12:33 PM Apr 03, 2018 | Team Udayavani |

ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗಾಗಿ ಪಟ್ಟು ಹಿಡಿದಿರುವ ತಮಿಳು ನಾಡು ಒಂದೆಡೆ ಕೇಂದ್ರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಮೂಲಕ ಕಾನೂನು ಹೋರಾಟ ನಡೆಸುತ್ತಿರುವ ಜತೆಗೆ, ಸ್ಥಳೀಯವಾಗಿ ಪ್ರತಿಭಟನೆ, ಬಂದ್‌ ಕರೆ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಆದರೆ, ಇದರಿಂದ ತಮಿಳುನಾಡಿಗೆ ತಕ್ಷಣಕ್ಕೆ ಯಾವುದೇ ಲಾಭವಾಗುವುದಿಲ್ಲ ಎಂಬ ಅಭಿಪ್ರಾಯ ತಜ್ಞರ ವಲಯದಲ್ಲಿ ವ್ಯಕ್ತವಾಗಿದೆ.

Advertisement

ತಮಿಳುನಾಡು ಸರ್ಕಾರ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಏ.9ಕ್ಕೆ ಮುಂದೂಡಿದೆ. ಆದರೆ, ಅಂತಾರಾಜ್ಯ ನದಿ ನೀರು ಹಂಚಿಕೆ ವಿವಾದ ಬಗೆಹರಿಸುವ ಸಂದರ್ಭದಲ್ಲಿ ಕಾನೂನಿನ ಜತೆಗೆ ಭಾವನಾತ್ಮಕ ವಿಚಾರಗಳನ್ನೂ ಪರಿಗಣಿಸಬೇಕಾಗುತ್ತದೆ.

ಹೀಗಾಗಿ ಕೇಂದ್ರ ಸರ್ಕಾರ ಸೂಕ್ತ ಯೋಜನೆ ರೂಪಿಸುವಾಗ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕಿದ್ದು, ಅಲ್ಪಕಾಲದಲ್ಲಿ ಯೋಜನೆ ರೂಪಿಸುವುದು ಕಷ್ಟಸಾಧ್ಯ. ಹೀಗಾಗಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಯಾವುದಾದರೂ ಸೂಚನೆಗಳನ್ನು ನೀಡಬಹುದೇ ಹೊರತು ಕಠಿಣ ನಿರ್ದೇಶನ ನೀಡುವುದು ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆ.

ನೀರು ನಿರ್ವಹಣಾ ಮಂಡಳಿ ರಚಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ. ಆದರೆ, ನ್ಯಾಯಾಂಗ ನಿಂದನೆ ಎನ್ನುವುದು ಉದ್ದೇಶಪೂರ್ವಕವಾಗಿ ಅಥವಾ ಯಾವುದೇ ಸಕಾರಣವಿಲ್ಲದೆ ನ್ಯಾಯಾಲಯದ ಆದೇಶ ಪಾಲಿಸದೇ ಇದ್ದಾಗ ಮಾತ್ರ ಅನ್ವಯವಾಗುತ್ತದೆ.

ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ನದಿ ನೀರು ಹಂಚಿಕೆಗಾಗಿ ಸೂಕ್ತ ಯೋಜನೆ (ಸ್ಕೀಮ್‌) ರೂಪಿಸಲು ಮುಂದಾಗಿ ಕಾಲಾವಕಾಶ ಕೇಳಿದೆ. ಜತೆಗೆ ಆದೇಶ ಪಾಲನೆ ಕುರಿತಂತೆ ಕರ್ನಾಟಕ ಸರ್ಕಾರವೂ ಮೂರು ತಿಂಗಳ ಕಾಲಾವಕಾಶ ಕೇಳಿದೆ. ಹೀಗಾಗಿ ಇದು ಉದ್ದೇಶಪೂರ್ವಕ ವಿಳಂಬ ಅಲ್ಲದೇ ಇರುವುದರಿಂದ ನ್ಯಾಯಾಂಗ ನಿಂದನೆ ಅನ್ವಯವಾಗುವುದಿಲ್ಲ ಎನ್ನುತ್ತಾರೆ ಮಾಜಿ ಅಡ್ವೋಕೇಟ್‌ ಜನರಲ್‌ ಬಿ.ವಿ.ಆಚಾರ್ಯ.

Advertisement

ಹೋರಾಟದ ಹಿಂದೆ ರಾಜಕೀಯದ ಆರೋಪ: ಈ ಮಧ್ಯೆ ಮಂಡಳಿ ರಚನೆಗಾಗಿ ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಪ್ರತಿಪಕ್ಷಗಳು ಪ್ರತಿಭಟನೆ, ಧರಣಿಗಳನ್ನು ಮುಂದುವರಿ ಸಿರುವ ಜತೆಗೆ ಏ.5ರಂದು ರಾಜ್ಯ ಬಂದ್‌ಗೆ ಕರೆ ನೀಡಿರುವುದರ ಹಿಂದೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ರಾಜಕೀಯವೂ ಇದೆ ಎಂಬ ಆರೋಪ ಕೇಳಿಬಂದಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಕನಸು ಕಾಣುತ್ತಿದೆ. ತಮಿಳುನಾಡಿನ ಡಿಎಂಕೆ ಮತ್ತು ಕಾಂಗ್ರೆಸ್‌ ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿದ್ದು, ಒತ್ತಡಕ್ಕೆ ಮಣಿದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಂಡಳಿ ರಚನೆ ಬಗ್ಗೆ ನಿರ್ಧಾರ ಕೈಗೊಂಡರೆ ಆಗ ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂಬ ಲೆಕ್ಕಾಚಾರ ಈ ಹೋರಾಟದ ಹಿಂದಿದೆ ಎಂಬ ಮಾತು ಕೇಳಿಬರುತ್ತಿದೆ.

ಮಂಡಳಿ ರಚನೆ ವಿಚಾರದಲ್ಲಿ ತಮಿಳುನಾಡು ನಡೆಸುತ್ತಿರುವ ಕಾನೂನು ಹೋರಾಟ ಅಥವಾ ರಾಜಕೀಯ ಹೋರಾಟಕ್ಕೆ ಯಾವುದೇ ಅರ್ಥವಿಲ್ಲ. ಏಕೆಂದರೆ, ಕೇಂದ್ರ ಸರ್ಕಾರ ನೀರು ನಿರ್ವಹಣಾ ಮಂಡಳಿಯನ್ನೇ ರಚಿಸಲಿ ಅಥವಾ ಸೂಕ್ತ ಯೋಜನೆ (ಸ್ಕೀಮ್‌) ರೂಪಿಸಲಿ, ಅದರಿಂದ ಹೆಚ್ಚಿನ ವ್ಯತ್ಯಾಸವೇನೂ ಆಗುವುದಿಲ್ಲ. ಎರಡರಲ್ಲೂ ಕೇಂದ್ರ ಮತ್ತು ರಾಜ್ಯಗಳ ಅಧಿಕಾರಿಗಳಿರುತ್ತಾರೆ.

ಅವರು ಯಾವದೇ ತೀರ್ಮಾನ ಕೈಗೊಳ್ಳುವುದಿದ್ದರೂ ಕಾವೇರಿ ನ್ಯಾಯಾಧಿಕರಣದ ಆದೇಶದಂತೆ ಮತ್ತು ಸುಪ್ರೀಂ ಕೋರ್ಟ್‌ ನೀರು ಹಂಚಿಕೆ ಮಾಡಿದಂತೆ ಆಯಾ ತಿಂಗಳು ಇಂತಿಷ್ಟು ನೀರು ಕೊಡಿಸಬಹುದೇ ಹೊರತು ಅದಕ್ಕಿಂತ ಹೆಚ್ಚು ನೀರು ಕೊಡಿಸಲು ಸಾಧ್ಯವಿಲ್ಲ. ಹೀಗಾಗಿ ಈ ವಿಚಾರದಲ್ಲಿ ತಮಿಳುನಾಡಿಗೆ ಅನ್ಯಾಯವಾಗಿವ ಪ್ರಶ್ನೆ ಉದ್ಭವವಾಗುವುದಿಲ್ಲ ಎನ್ನುತ್ತಾರೆ ನೀರಾವರಿ ತಜ್ಞ ಪ್ರೊ.ಸಿ.ನಂರಸಿಂಹಪ್ಪ.

ಮಂಡಳಿಯೇ ಇರಲಿ, ಸ್ಕೀಮ್‌ ರೂಪಿಸಲಿ, ನ್ಯಾಯಾಧಿಕರಣದ ಆದೇಶದಂತೆ ಪ್ರತಿ ತಿಂಗಳು ಇಂತಿಷ್ಟು ಕಾವೇರಿ ನೀರು ಕರ್ನಾಟಕದಿಂದ ತಮಿಳುನಾಡಿಗೆ ಹರಿಸಲೇ ಬೇಕು. ಹೀಗಾಗಿ ಈ ವಿಚಾರದಲ್ಲಿ ತಮಿಳುನಾಡು ಹೋರಾಟ ಮಾಡುವುದರಲ್ಲಿ ಅರ್ಥವಿಲ್ಲ.
-ಪ್ರೊ.ಸಿ.ನರಸಿಂಹಪ್ಪ, ನೀರಾವರಿ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next