ಚೆನ್ನೈ: ನೀಟ್ ಪರೀಕ್ಷೆಯ ದಿನವೇ(ಭಾನುವಾರ) ವಿದ್ಯಾರ್ಥಿ ಧನುಷ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೆ ಮತ್ತೋರ್ವ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಘಟನೆ ತಮಿಳುನಾಡಿನಲ್ಲಿ ಜರುಗಿದೆ.
‘ನೀಟ್ ‘ ಪರೀಕ್ಷೆ ಬರೆದ ಒಂದು ದಿನದ ಬಳಿಕ ಕನಿಮೋಳಿ (17) ಹೆಸರಿನ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೋಷಕರಿಲ್ಲದ ವೇಳೆಯಲ್ಲಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಹೆತ್ತವರು ಮನೆಗೆ ವಾಪಸ್ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಕೀಲರ ಪುತ್ರಿಯಾಗಿದ್ದ ಕನಿಮೋಳಿ ವೈದ್ಯಕೀಯ ಪ್ರವೇಶಕ್ಕಾಗಿ ಭಾನುವಾರ ‘ನೀಟ್’ ಪರೀಕ್ಷೆ ಬರೆದಿದ್ದರು. ಆದರೆ, ಫಲಿತಾಂಶದ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.ಪರೀಕ್ಷೆ ಬರೆದು ಮನೆಗೆ ಹಿಂತಿರುಗಿದ ಬಳಿಕ ಕನಿಮೋಳಿ, ಪರೀಕ್ಷೆ ಕಠಿಣವಾಗಿತ್ತು ಎಂದು ಪೋಷಕರ ಬಳಿ ಆತಂಕ ವ್ಯಕ್ತಪಡಿಸಿದ್ದರು. ಘಟನೆಯ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೀಟ್ ಪರೀಕ್ಷೆ ರದ್ದತಿಗೆ ಮಸೂದೆ ಪಾಸ್ :
ಇನ್ನು ತಮಿಳುನಾಡಿನಲ್ಲಿ ‘ನೀಟ್ ಪರೀಕ್ಷೆ ರದ್ದತಿಯ ಮಸೂದೆಯನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸೋಮವಾರ ಸದನದಲ್ಲಿ ಮಂಡಿಸಿದ್ದಾರೆ. ಇದಕ್ಕೆ ಎಲ್ಲ ಪಕ್ಷಗಳು ಬೆಂಬಲ ಸೂಚಿಸುವ ಮೂಲಕ ಮಸೂದೆ ಪಾಸ್ ಆಗಿದೆ.