Advertisement

ಚಿನ್ನಮ್ಮಗೆ ಗೇಟ್‌ಪಾಸ್‌ : ಪಕ್ಷದಲ್ಲಿ ದಿನಕರನ್‌ ಮೂಲೆಗುಂಪಿಗೆ

02:46 AM Apr 19, 2017 | Karthik A |

ಚೆನ್ನೈ/ಹೊಸದಿಲ್ಲಿ: ಚಿನ್ನಮ್ಮ ಎಂದು ಕೊಂಡಾಡುತ್ತಿದ್ದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಮತ್ತು ಉಪ ಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ. ದಿನಕರನ್‌ರನ್ನು ಪಕ್ಷದಿಂದ ಹೊರಹಾಕಲು ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಮಾಜಿ ಸಿಎಂ ಪನ್ನೀರ್‌ ಸೆಲ್ವಂ ಬಣಗಳು ನಿರ್ಧರಿಸಿವೆ. ಚೆನ್ನೈಯಲ್ಲಿ ಮಂಗಳವಾರ ರಾತ್ರಿ ನಡೆದ ಮೂರು ತಾಸುಗಳ ಬಿರುಸಿನ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಶಶಿಕಲಾ ಕುಟುಂಬ ಸದಸ್ಯರು ಪಕ್ಷದ ವ್ಯವಹಾರಕ್ಕೆ ಬರಲೇಬಾರದು ಎಂಬ ನಿರ್ಣಯವನ್ನೂ ಕೈಗೊಳ್ಳಲಾಗಿದೆ. ಜತೆಗೆ ಮಾಜಿ ಸಿಎಂ ಒ. ಪನ್ನೀರ್‌ ಸೆಲ್ವಂ ಬಣ ಮತ್ತು ಶಶಿಕಲಾ ಬೆಂಬಲಿಗರು ವಿಲೀನಗೊಳ್ಳುವ ಬಗ್ಗೆ ಮಾತುಕತೆಗಳು ಅಂತಿಮ ಹಂತದಲ್ಲಿವೆ. ಶಶಿಕಲಾ ಕುಟುಂಬವನ್ನು ಪಕ್ಷದಿಂದ ಹೊರ ಹಾಕಿದರಷ್ಟೇ ವಿಲೀನ ಸಾಧ್ಯ ಎಂಬ ಷರತ್ತು ಹಾಕಿದ್ದ ಮಾಜಿ ಸಿಎಂ ಒ. ಪನ್ನೀರ್‌ ಸೆಲ್ವಂ ಮೇಲುಗೈ ಸಾಧಿಸಿದ್ದಾರೆ.  ಇನ್ನು ಟಿ.ಟಿ.ವಿ. ದಿನಕರನ್‌ ಅವರಿಗೆ ಸಮನ್ಸ್‌ ಜಾರಿ ಮಾಡುವ ನಿಟ್ಟಿನಲ್ಲಿ ದಿಲ್ಲಿ ಪೊಲೀಸ್‌ ಇಲಾಖೆ ವಿಶೇಷ ತಂಡವನ್ನು ಕಳುಹಿಸಲಿದೆ.

Advertisement

ಎರಡೆಲೆ ಚಿಹ್ನೆಗಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ 50 ಕೋಟಿ ರೂ. ಲಂಚದ ಆಮಿಷ ನೀಡಿದ ಆರೋಪಕ್ಕೆ ಗುರಿಯಾದ ಬಳಿಕ ಎಐಎಡಿಎಂಕೆ ಯಲ್ಲಿ ಸೋಮವಾರ ಭಾರೀ ಬದಲಾವಣೆ ಕಂಡು ಬಂದಿತ್ತು. ದಿನಕರನ್‌ ಹಾಗೂ ಶಶಿಕಲಾ ವಿರುದ್ಧ ಎರಡೂ ಬಣಗಳ ನಾಯಕರು ಸಿಡಿದೆದ್ದಿದ್ದರು. ಅದಕ್ಕೆ ಪೂರಕವಾಗಿ ಮಂಗಳವಾರ ಚೆನ್ನೈಯಲ್ಲಿ ಬಿರುಸಿನ ಸಮಾಲೋಚನೆ ನಡೆಯಿತು. ಪಕ್ಷದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿ ಸ್ವಾಮಿ ನೇತೃತ್ವದಲ್ಲಿ ಎಲ್ಲ ಸಚಿವರೂ ಶಶಿಕಲಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಸಂದರ್ಭ ವಿ.ಕೆ. ಶಶಿಕಲಾ, ಟಿ.ಟಿ.ವಿ. ದಿನಕರನ್‌ ಮತ್ತು ಅವರ ಕುಟುಂಬ ಸದಸ್ಯರನ್ನು ಸದ್ಯ ಪಕ್ಷದಲ್ಲಿ ಮೂಲೆಗುಂಪು ಮಾಡುವುದು, ಬಳಿಕ ಅವರನ್ನು ಪಕ್ಷದಿಂದಲೇ ಹೊರಹಾಕುವ ನಿರ್ಧಾರಕ್ಕೆ ಬರಲಾಯಿತು ಎಂದು ತಮಿಳುನಾಡು ಹಣಕಾಸು ಸಚಿವ ಡಿ. ಜಯಕುಮಾರ್‌ ಸಭೆಯ ಬಳಿಕ ತಿಳಿಸಿದರು. 

‘ಪಕ್ಷದ ಎಲ್ಲ ಶಾಸಕರು, ಸಂಸದರು, ನಾಯಕರ ಆಗ್ರಹ ಒಂದೇ ಆಗಿದೆ. ಎಐಎಡಿಎಂಕೆಯ ನಿತ್ಯದ ವಹಿವಾಟಿಗಾಗಿ ಸಮಿತಿ ರಚಿಸಲಾಗುತ್ತದೆ’ ಎಂದು ಹೇಳಿದ್ದಾರೆ. ‘ನಮ್ಮ ಗುಂಪು ಮಾಜಿ ಸಿಎಂ ಪನ್ನೀರ್‌ ಸೆಲ್ವಂ ಬಣದ ಜತೆಗೆ ಮಾತುಕತೆಗೆ ಸಿದ್ಧವಾಗಿದೆ. ಅದನ್ನು ನಾವು ಸ್ವಾಗತಿಸುತ್ತೇವೆ. ಪಕ್ಷದ ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯಕ್ಕೂ ಗೌರವ ಕೊಡುತ್ತೇವೆ’ ಎಂದರು ಜಯಕುಮಾರ್‌.

ಸದ್ಯ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿರುವ ವಿ.ಕೆ. ಶಶಿಕಲಾ ಹೆಸ ರಿಗೆ ಮಾತ್ರ ಆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ಮುಂದೆ ಅವರ ನೇಮಕ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಗೆ ಬಾಕಿ ಇದೆ. ಅದು ಇತ್ಯರ್ಥವಾದ ಬಳಿಕ ಉಚ್ಚಾಟನೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಎಐಎಡಿಎಂಕೆ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next