ಚೆನ್ನೈ: ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಮತ್ತು ಹಿರಿಯ ನಾಯಕಿ ತಮಿಳಿಸೈ ಸೌಂದರ್ ರಾಜನ್ ವಿರುದ್ದ ಟೀಕೆ ಮಾಡಿದ ಕಾರಣಕ್ಕೆ ತಮಿಳುನಾಡು ಬಿಜೆಪಿ ಘಟಕ ಇಬ್ಬರು ನಾಯಕರನ್ನು ಪಕ್ಷದಿಂದ ತೆಗೆದು ಹಾಕಿದೆ. ಪಕ್ಷದ ನಾಯಕರ ವಿರುದ್ದ ಬಹಿರಂಗವಾಗಿ ಟೀಕೆ ಮಾಡಿದವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ತಮಿಳುನಾಡು ಬಿಜೆಪಿಯ ಬೌದ್ಧಿಕ ವಿಭಾಗದ ಭಾಗವಾಗಿದ್ದ ಕಲ್ಯಾಣ್ ರಾಮನ್ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಒಂದು ವರ್ಷದ ಅವಧಿಗೆ ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಅದೇ ರೀತಿ ತಮಿಳುನಾಡು ಬಿಜೆಪಿಯ ಒಬಿಸಿ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿದ್ದ ತಿರುಚ್ಚಿ ಸೂರ್ಯ ಅವರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ.
ಈ ಇಬ್ಬರು ನಾಯಕರು ಶಿಸ್ತು ಕ್ರಮ ಉಲ್ಲಂಘಿಸಿ, ಪಕ್ಷಕ್ಕೆ ಅವಮಾನ ಮಾಡಿದ್ದಾರೆ ಎಂದು ಪಕ್ಷ ತಿಳಿಸಿದೆ.
ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಕಲ್ಯಾಣ್ ರಾಮನ್ ಅವರು ಅಣ್ಣಾಮಲೈ ಮತ್ತು ಅವರ ವಾರ್ ರೂಮನ್ನು ಬಹಿರಂಗವಾಗಿ ಟೀಕೆ ಮಾಡಿದ್ದರು. ಅಲ್ಲದೆ ಅವರ ಕೆಲಸ ಮಾಡುವ ವಿಧಾನವನ್ನು ಕೂಡಾ ಟೀಕೆ ಮಾಡಿದ್ದರು.
ತಿರುಚ್ಚಿ ಸೂರ್ಯ ಅವರು ತಮ್ಮ ಇತ್ತೀಚಿನ ಕೆಲವು ಸಂದರ್ಶನಗಳಲ್ಲಿ ಬಿಜೆಪಿಯ ಹಿರಿಯ ನಾಯಕಿ ತಮಿಳಿಸೈ ಸೌಂದರರಾಜನ್ ಅವರನ್ನು ಟೀಕಿಸಿದ್ದರು.