ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಮಿಳುನಾಡು ಭೇಟಿ ವೇಳೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ “ರಾಜಕೀಯ ನಾಟಕ’ವಾಡಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕಿಡಿಕಾರಿದ್ದಾರೆ.
“ವೇದಿಕೆಯಲ್ಲಿ ಸ್ಟಾಲಿನ್ ಆಡಿರುವ ಮಾತುಗಳು ಹೇಗೆ ರಾಜಕೀಯವಾಗಿ ನಾಟಕವಾಡಬಹುದು ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆ. ಕತ್ಛಥೀವು ದ್ವೀಪವನ್ನು ಶ್ರೀಲಂಕಾಗೆ ಉಡುಗೊರೆಯಾಗಿ ನೀಡಿದ್ದು ಇಂದಿರಾಗಾಂಧಿ ಮತ್ತು ಡಿಎಂಕೆ ನಾಯಕ ಕರುಣಾನಿಧಿ. 1976ರಲ್ಲಿ ಒಪ್ಪಂದ ಉಲ್ಲಂಘಿಸಿ ಅದನ್ನು ಸಂಪೂರ್ಣವಾಗಿ ಲಂಕಾಗೆ ಕೊಟ್ಟುಬಿಟ್ಟರು. ಈಗ ಆ ದ್ವೀಪವನ್ನು ಮರಳಿ ಕೊಡಿಸಿ ಎಂದು ಮೋದಿಯವರನ್ನು ಕೇಳಲು ಸಿಎಂ ಸ್ಟಾಲಿನ್‌ಗೆ ಎಷ್ಟು ಧೈರ್ಯವಿರಬೇಕು? ನೀವು ನಮಗೆ ಪಾಠ ಕಲಿಸಬೇಕಾಗಿಲ್ಲ. ಕತ್ಛಥೀವುವನ್ನು ಹೇಗೆ ಮರಳಿ ಪಡೆಯಬೇಕು ಎಂಬುದು ನಮಗೆ ಗೊತ್ತು.
ಸ್ಟಾಲಿನ್ ಕುಟುಂಬವೊಂದನ್ನು ಬಿಟ್ಟು ಪ್ರತಿಯೊಬ್ಬ ತಮಿಳನಿಗೂ ಈ ದ್ವೀಪವನ್ನು ವಾಪಸ್ ಪಡೆಯುವ ಬಗ್ಗೆ ಮಾತನಾಡುವ ಅಧಿಕಾರವಿದೆ’ ಎಂದು ಅಣ್ಣಾಮಲೈ ಆಕ್ರೋಶಭರಿತರಾಗಿ ನುಡಿದಿದ್ದಾರೆ.
ಅಷ್ಟೇ ಅಲ್ಲ, ಜಿಎಸ್ಟಿ ಪ್ರಕ್ರಿಯೆಯ ಬಗ್ಗೆ ಮಾಹಿತಿಯೇ ಇಲ್ಲದ ಸ್ಟಾಲಿನ್ ಅವರು, ಜಿಎಸ್ಟಿ ಬಗ್ಗೆ ಮಾತಾಡುತ್ತಾರೆ. ಆ ಮೂಲಕ ತಮಿಳುನಾಡಿನ ಜನರ ಮರ್ಯಾದೆ ತೆಗೆಯುತ್ತಾರೆ. ಜಿಎಸ್ಟಿ ಬಾಕಿಯನ್ನು ಪಾವತಿಸಬೇಕಾದದ್ದು ಜಿಎಸ್ಟಿ ಮಂಡಳಿಯೇ ಹೊರತು ವಿತ್ತ ಸಚಿವರಲ್ಲ. ಇದಕ್ಕೂ ಸಚಿವರಿಗೂ ಸಂಬಂಧವೇ ಇಲ್ಲ ಎಂದೂ ಅಣ್ಣಾಮಲೈ ಹೇಳಿದ್ದಾರೆ.
ಜತೆಗೆ, ಸ್ಟಾಲಿನ್ ಅವರ ನಡವಳಿಕೆಯು ತಮಿಳುನಾಡಿವ ರಾಜಕೀಯ ಇತಿಹಾಸದಲ್ಲೇ ಕಪ್ಪುಚುಕ್ಕೆ ಎಂದೂ ಬಣ್ಣಿಸಿದ್ದಾರೆ.