ಚೆನ್ನೈ: ದೀರ್ಘಕಾಲದಿಂದ ನೀಟ್ (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ವಿರುದ್ಧ ಹೋರಾಟ ನಡೆಸುತ್ತ ಬಂದಿರುವ ತಮಿಳುನಾಡು ಈಗ ನೀಟ್‌ಗೆ ಗುಡ್‌ಬೈ ಹೇಳುವತ್ತ ಹೆಜ್ಜೆಯಿರಿಸಿದೆ.
ವೈದ್ಯಕೀಯ, ದಂತ ವೈದ್ಯಕೀಯ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಇಚ್ಛಿಸುವ ರಾಜ್ಯದ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಬರೆಯುವುದರಿಂದ ವಿನಾಯಿತಿ ನೀಡುವ ಮಸೂದೆಯನ್ನು ತಮಿಳುನಾಡು ವಿಧಾನಸಭೆ ಅಂಗೀಕರಿಸಿದೆ.
ಇನ್ನು ಮುಂದೆ ಎಲ್ಲ ವೈದ್ಯಕೀಯ ಕೋರ್ಸ್‌ಗಳಿಗೂ ವಿದ್ಯಾರ್ಥಿಗಳ 12ನೇ ತರಗತಿಯ ಅಂಕಗಳ ಆಧಾರದಲ್ಲಿ ಪ್ರವೇಶ ನೀಡಲು ನಿರ್ಧರಿಸಲಾಗಿದೆ. ಬಿಜೆಪಿ ಬಿಟ್ಟು ಉಳಿದೆಲ್ಲ ಪಕ್ಷಗಳು ಮಸೂದೆಗೆ ಬೆಂಬಲ ಸೂಚಿಸಿವೆ. ಆದರೆ ಈ ಮಸೂದೆಯು ಕೇಂದ್ರ ಕಾನೂನಿಗೆ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಗಳ ಅಂಕಿತ ಬಿದ್ದರಷ್ಟೇ ಅನುಷ್ಠಾನ ಸಾಧ್ಯ. ಈ ಹಿಂದೆ ಎಐಎಡಿಎಂಕೆ ಸರಕಾರ ಕೂಡ ಇದೇ ರೀತಿಯ ಮಸೂದೆ ಅಂಗೀಕರಿಸಿತ್ತಾದರೂ ರಾಷ್ಟ್ರಪತಿಗಳು ಅದನ್ನು ತಿರಸ್ಕರಿಸಿದ್ದರು.
ಸಮಿತಿ ವರದಿ ಆಧರಿಸಿ ಕ್ರಮ:
ನೀಟ್ ಪರೀಕ್ಷೆಯ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ನಿವೃತ್ತ ನ್ಯಾ| ಎ.ಕೆ. ರಾಜನ್ ನೇತೃತ್ವ ದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ಜೂ. 5ರಂದು ಸಿಎಂ ಎಂ.ಕೆ. ಸ್ಟಾಲಿನ್ ರಚಿಸಿದ್ದರು. ಸಮಿತಿಯು ತನ್ನ ವರದಿಯಲ್ಲಿ ನೀಟ್‌ನಿಂದ ಶ್ರೀಮಂತ ಮತ್ತು ಸಮಾಜದ ಮೇಲ್ವರ್ಗಕ್ಕೆ ಮಾತ್ರ ಅನುಕೂಲವಾಗುತ್ತದೆ. ವೈದ್ಯಕೀಯ ಶಿಕ್ಷಣ ಪಡೆಯುವ ಬಡ, ಮಧ್ಯಮ ವರ್ಗದ ಕನಸು ನುಚ್ಚು ನೂರಾಗುತ್ತದೆ. ನೀಟ್ ಮುಂದುವರಿದರೆ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಉಂಟಾಗಲಿದೆ ಎಂದು ವರದಿ ನೀಡಿತ್ತು. ಈ ವರದಿಯನ್ನು ಆಧರಿಸಿ ನೀಟ್ ರದ್ದು ಮಾಡಲು ಸರಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ.