ಈಗಾಗಲೇ “ಕಾದಲ್’ ಎಂಬ ಸಿನಿಮಾವೊಂದು ಸದ್ದಿಲ್ಲದೆಯೇ ಶುರುವಾಗಿ, ಚಿತ್ರೀಕರಣವನ್ನೂ ಪೂರ್ಣಗೊಳಿಸಿ ಇದೀಗ ಪ್ರೇಕ್ಷಕರ ಎದುರು ಬರಲು ಸಿದ್ದವಾಗಿದೆ. ಮೊದಲ ಹಂತವಾಗಿ ಚಿತ್ರದ ಆಡಿಯೋ ಸಿಡಿಯನ್ನು ಹೊರತಂದಿದೆ ಚಿತ್ರತಂಡ. ಇಲ್ಲಿ “ಕಾದಲ್’ ಅನ್ನೋದು ಯಾವ ಪದ ಎಂಬ ಗೊಂದಲ ಉಂಟಾಗಬಹುದು. ಆ ಗೊಂದಲ ವಾಣಿಜ್ಯ ಮಂಡಳಿಯಲ್ಲೂ ಇತ್ತು. ಶೀರ್ಷಿಕೆ ನೋಂದಣಿ ಮಾಡಿಸಲು ಹೋದ ನಿರ್ದೇಶಕರಿಗೆ “ಕಾದಲ್’ ಕನ್ನಡ ಪದವಲ್ಲ ಎಂಬ ಬಗ್ಗೆ ತಕರಾರು ಇತ್ತು. ಕೊನೆಗೆ ನಿರ್ದೇಶಕರು, ಇದು ನಿಘಂಟುವಿನಲ್ಲಿ “ಕಾದಲ್’ ಪದ ಇರುವ ಬಗ್ಗೆ ವಿವರಿಸಿದಾಗಲಷ್ಟೇ ಶೀರ್ಷಿಕೆ ಪಕ್ಕಾ ಆಗಿದೆ. ಆಮೇಲೆ ಸಿನಿಮಾ ಶುರುವಾಗಿ, ಈಗ ಬಿಡುಗಡೆಯ ಹಂತಕ್ಕೆ ಬಂದಿದೆ.
ಮುರಳಿ ಈ ಸಿನಿಮಾದ ನಿರ್ದೇಶಕರು. ಈ ಹಿಂದೆ “ಮುಮ್ತಾಜ್’ ಚಿತ್ರ ಮಾಡಿದ್ದ ಮುರಳಿ ಈ ಸಿನಿಮಾ ಮೂಲಕ ಮುಮ್ತಾಜ್ ಮುರಳಿಯಾಗಿದ್ದಾರೆ. ಇದೊಂದು ಅಪ್ಪಟ ಪ್ರೇಮಕಥೆ ಎಂಬುದು ನಿರ್ದೇಶಕರ ಮಾತು. “ಸಹಾಯಕ ನಿರ್ದೇಶಕನೊಬ್ಬ ತನಗೆ ಗೊತ್ತಿಲ್ಲದೆಯೇ ಕ್ಯಾನ್ಸರ್ ಪೀಡಿತ ಹುಡುಗಿಯನ್ನು ಪ್ರೀತಿ ಮಾಡುತ್ತಾನೆ. ಆ ವಿಷಯ ಗೊತ್ತಾದಾಗ, ಅವನು ನಿರ್ದೇಶಕನಾಗುತ್ತಾನೋ ಅಥವಾ ತನ್ನ ಪ್ರೀತಿ ಉಳಿಸಿಕೊಳ್ಳಲು ಹೋರಾಡಿ, ಸಫಲನಾಗುತ್ತಾನೋ ಎಂಬುದೇ ಕಥೆಯ ಒನ್‌ಲೈನ್’ ಎನ್ನುತ್ತಾರೆ ನಿರ್ದೇಶಕ ಮುರಳಿ.
ಈ ಸಿನಿಮಾವನ್ನು ಎಸ್.ಸುರೇಶ್ ನಿರ್ಮಿಸಿದ್ದಾರೆ. ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಹೊಸ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಅಡಿಷನ್‌ಗೆ ಹೋಗಿದ್ದ ಎಸ್.ಸುರೇಶ್ ಅವರ ನಟನೆಯ ಕನಸು ನನಸಾಗಲಿಲ್ಲವಂತೆ. ಎಸ್.ಐ.ಟಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಸುರೇಶ್, ಆ ಕನಸನ್ನು ಮಗನ ಮೂಲಕ ನನಸು ಮಾಡಲು ಹೊರಟಿದ್ದಾರೆ. ಮಗನನ್ನು ನಾಯಕನನ್ನಾಗಿಸಿ, ಖುಷಿಯಿಂದ “ಕಾದಲ್’ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ ಅವರು.
ಇನ್ನು, ಸಿವಿಲ್ ಎಂಜನಿಯರ್ ಆಗಿರುವ ತುಮಕೂರಿನ ಆಕಾಶ್ ಈ ಚಿತ್ರದ ಹೀರೋ. ಅವರಿಗೆ ಇದು ಮೊದಲ ಸಿನಿಮಾ. ಇನ್ನು, ಇವರಿಗೆ ಮೈಸೂರಿನ ರಂಗಭೂಮಿ ನಟಿ ಧರಣಿ ನಾಯಕಿಯಾಗಿದ್ದಾರೆ. ಇವರಿಗೆ ಇದು ನಾಲ್ಕನೆ ಚಿತ್ರ. ಚಿತ್ರದಲ್ಲಿ ಸುಧಾಕರ್, ಮಂಜುನಾಥ್, ಕುಮಾರಿ ಭಾವನ ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳು ಇಲ್ಲಿ ಕಾಣಿಸಿಕೊಳ್ಳುತ್ತಿವೆ. ಸಹೋದರ ಪವನ್ ಬರೆದಿರುವ ಗೀತೆಗೆ ಪ್ರವೀಣ್ ಸಂಗೀತ ನೀಡದ್ದಾರೆ. ಪದ್ಮಪ್ರಸಾದ್ ಜೈನ್ ಕೂಡ ಒಂದು ಗೀತೆ ರಚಿಸಿದ್ದಾರೆ. ಹರಿಕೃಷ್ಣ ಅವರ ನೃತ್ಯ ನಿರ್ದೇಶನವಿದೆ. ಅಲ್ಟಿಮೇಟ್ ಶಿವು ಅವರ ಸಾಹಸವಿದೆ. ಪೂರ್ಣ ಚಂದ್ರ ಭಕಾಟೆ ಕ್ಯಾಮೆರಾ ಹಿಡಿದರೆ, ಕಾರ್ತಿಕ್ ಸಂಕಲನ ಮಾಡಿದ್ದಾರೆ.
ಅಂದಹಾಗೆ, ಅಜೇಯ್ ರಾವ್ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದರು. ಸಿ ಮ್ಯೂಸಿಕ್ ಕಂಪನಿಯ ಈ ಚಿತ್ರದ ಹಾಡುಗಳನ್ನು ಹೊರ ತಂದಿದೆ. ಜೂನ್‌ನಲ್ಲಿ ಚಿತ್ರ ರಿಲೀಸ್ ಮಾಡಲು ನಿರ್ಮಾಪಕರು ತಯಾರಿ ನಡೆಸಿದ್ದಾರೆ.