Advertisement

ಈ ಶಾಲೆಗೆ ದಾರಿ ಯಾವುದಯ್ನಾ?

01:08 PM Nov 15, 2019 | Naveen |

„ಲಕ್ಷ್ಮಣ ಹಿರೇಕುರುಬರ
ತಾಂಬಾ:
ಅಸರ್ಮಪಕ ಚರಂಡಿ ವ್ಯವಸ್ಥೆ ಮತ್ತು ಸಾಮೂಹಿಕ ಶೌಚಾಲಯದ ಕಲುಷಿತ ನೀರು ರಸ್ತೆತುಂಬ ಹರಿಯುತ್ತಿರುವುದರಿಂದ ಇಲ್ಲಿನ ಇಂದಿರಾ ನಗರದ ಸರ್ಕಾರಿ ಪ್ರೌಢಶಾಲೆಗೆ ಹೋಗಲು ದಾರಿ ಇಲ್ಲದಂತಾಗಿದೆ.!

Advertisement

ಗ್ರಾಮದ ಇಂದಿರಾ ನಗರದಲ್ಲಿ ಸುಮಾರು 2000 ಜನರು ವಾಸಿಸುತ್ತಿದ್ದು, ಇಲ್ಲಿ ಮೂಲ ಸೌಲಭ್ಯಗಳು ಮರೀಚಿಕೆಯಾಗಿವೆ. ಗ್ರಾಪಂ ಸದಸ್ಯರು, ಅಧಿಕಾರಿಗಳು ಸಮರ್ಪಕ ಚರಂಡಿ ನಿರ್ಮಿಸದ ಕಾರಣ ರಸ್ತೆಗುಂಟ ಚರಂಡಿ ನೀರು ಹರಿದು ಶಾಲೆ ಕಟ್ಟಡಕ್ಕೆ ಹತ್ತಿಕೊಂಡಿರುವ ಶೌಚಾಲಯದಲ್ಲಿ ಸಂಗ್ರಹಗೊಂಡಿದೆ. ಇದು ಈಗ ಗಬ್ಬೆದ್ದು ನಾರುತ್ತಿದ್ದು, ಸರ್ಕಾರಿ ಪ್ರೌಢಶಾಲೆಗೆ ತೆರಳುವ ಮಕ್ಕಳಿಗೆ ತೊಂದರೆಯಾಗಿದೆ. ಇಲ್ಲಿ ಜ್ಞಾನ ದೇಗುಲವಿದ್ದು, ಮೂಗು ಮುಚ್ಚಿಕೊಂಡು ಬಾ ಎನ್ನುವಂತಾಗಿದೆ.

ಶಾಲೆ ಪಕ್ಕವೇ ಸಾಮೂಹಿಕ ಶೌಚಾಲಯ: ಶಾಲೆಯೆಂದರೆ ಜೀವಂತ ದೇವರ ದೇಗುಲ. ಆದರೆ, ಶಾಲೆ ಪಕ್ಕವೇ ಸಾಮೂಹಿಕ ಶೌಚಾಲಯ ನಿರ್ಮಿಸಲಾಗಿದೆ. ಗ್ರಾಮದ ಬಚ್ಚಲ ನೀರು ಮತ್ತು ಇಡೀ ಗ್ರಾಮದ ತ್ಯಾಜ್ಯವನ್ನು ಇಲ್ಲಿಯೇ ಎಸೆಯಲಾಗುತ್ತಿದೆ. ಹೀಗಾಗಿ ಮಕ್ಕಳು ನಿತ್ಯ ಪಾಠ, ಆಟ, ಬಿಸಿಯೂಟವನ್ನು ದುರ್ವಾಸನೆಯಲ್ಲಿಯೇ ಮಾಡಬೇಕಿದೆ. ಶಾಲೆಯ ಪಕ್ಕದಲ್ಲಿರುವ ಸಾಮೂಹಿಕ ಶೌಚಾಲಯದ ದುರ್ವಾಸನೆಗೆ ಶಾಲಾ ಶಿಕ್ಷಕರು ಬೇಸತ್ತಿದ್ದಾರೆ. ಅವರು ಕೂಡ ಮೂಗು ಮುಚ್ಚಿಕೊಂಡೆ ಶಾಲೆಗೆ ಬರುವಂತಾಗಿದೆ.

ಸಾಂಕ್ರಾಮಿಕ ರೋಗ ಭೀತಿ: ಗ್ರಾಮದಲ್ಲಿನ ಕಲುಷಿತ ವಾತಾವರಣದಿಂದ ಚಿಕ್ಯೂನ್‌ ಗುನ್ಯಾ, ಮಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗ ಭೀತಿ ಇಲ್ಲಿಯ ಜನರ ಹಾಗೂ ಶಾಲಾ ಮಕ್ಕಳನ್ನು ಕಾಡುತ್ತಿದೆ. ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಬಹಿರ್ದೆಸೆಗೆ ಬಯಲೆ
ಗತಿ ಎನ್ನುವಂತಾಗಿದೆ. ಯಾವೊಬ್ಬ ಅಧಿಕಾರಿಗಳು ಇಲ್ಲಿಯ ಪರಿಸ್ಥಿತಿ ಅರಿತು ಜನರಿಗೆ ವೈಯಕ್ತಿಕ ಶೌಚಾಲಯಗಳನ್ನು ಕಟ್ಟಿಸಿಕೊಳ್ಳಲು ತಿಳಿವಳಿಕೆ ನೀಡುತ್ತಿಲ್ಲ. ಶಾಲೆಯ ಪಕ್ಕದಲ್ಲಿರುವ ಶೌಚಾಲಯ ತೆರವು ಗೊಳಿಸುವ ಪ್ರಯತ್ನ ಮಾಡಿಲ್ಲ.

ಶಾಲೆಯ ಮುಖ್ಯಗುರುಗಳು 2013ರಲ್ಲಿ ಸಾರ್ವಜನಿಕ ಶೌಚಾಲಯ ತೆರವುಗೊಳಿಸಿ ಶಾಲೆಗೆ ಹೋಗಲು ರಸ್ತೆಯನ್ನು ಡಾಂಬರೀಕರಣಗೊಳಿಸಬೇಕೆಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಇಲ್ಲಿಯವರೆಗೆ ಏನು ಪ್ರಯೊಜನವಾಗಿಲ್ಲ. ಜನಪ್ರತಿನಿಧಿ ಗಳಿಗೆ ಮನವಿ ಸಲ್ಲಿಸಿದರೂ ಮಕ್ಕಳಿಗೆ ರಸ್ತೆ ಇಲ್ಲದಂತಾಗಿದೆ. ಶಾಲೆಗೆ ತಾಲೂಕು ಶಿಕ್ಷಣಾಧಿಕಾರಿಗಳು ಭೇಟಿ ನೀಡಿದ ವೇಳೆ ಈ ದುಸ್ಥಿತಿಯನ್ನು ಕಂಡು ಕಾಣದಂತೆ ಇದ್ದರು ಎನ್ನಲಾಗಿದೆ.

Advertisement

ಗ್ರಾಪಂ ನಿರ್ಲಕ್ಷ್ಯ :ಈ ಶಾಲೆ ಆವರಣದ ಅಕ್ಕ-ಪಕ್ಕ, ಮುಳ್ಳು-ಕಂಟಿ, ಸಗಣಿ ತಿಪ್ಪೆಗಳು ಇವೆ. ಮಲೀನವಾದ ನೀರು ಹೊರ ಹೋಗಲು ಚರಂಡಿಯ ವ್ಯವಸ್ಥೆ ಇದ್ದೂ ಇಲ್ಲದಂತಿದೆ. ಚರಂಡಿ ನೀರು ರಸ್ತೆಯ ಮೇಲೆ ಹರಿದಾಡಿ ಗಬ್ಬುವಾಸನೆ ಇದ್ದರೂ ಸಹಿಸಿಕೊಂಡು ಇಲ್ಲಿಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಗೆ ಸುಗಮವಾಗಿ ತೆರಳು ರಸ್ತೆಯೇ ಇಲ್ಲದಂತಾಗಿದೆ. ಹೀಗಾಗಿ ಶಾಲೆಗೆ ಬರುವುದೇ ಬೇಸರವಾಗಿದೆ. ಇಲ್ಲಿರುವ ಅವ್ಯವಸ್ಥೆ ಕಂಡರೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾಗಲಿ, ಜನರಿಂದ ಚುನಾಯಿತರಾದ ಜನಪ್ರತಿನಿಧಿಗಳಾಗಲಿ, ಇದಕ್ಕೆ ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ.

ಇನ್ನಾದರೂ ಸಂಬಂಧಿಸಿದ ಅ ಧಿಕಾರಿಗಳು ಅಥವಾ ಗ್ರಾಪಂ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮತ್ತು ಶಾಲೆ ಮುಖ್ಯಗುರು ಎ.ಆರ್‌. ದರ್ಗಾ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next