Advertisement
ಹೌದು. ಆಲ್ಫೋನ್ಸೋ ಮಾವು ಮತ್ತು ನವಲೂರು ಪೇರಲ ಹಣ್ಣಿಗೆ ಕಳೆದ ಮೂರು ವರ್ಷಗಳಿಂದ ಬಿಟ್ಟು ಬಿಡದೇ ಕಾಡುತ್ತಿರುವ ಕೀಟಗಳ ಕಾಟ ಇದೀಗ ಈ ಭಾಗದ ಹುಣಸೆ ಹಣ್ಣಿಗೂ ಶುರುವಾಗಿದ್ದು, ರೈತರು-ದಲ್ಲಾಳಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅತಿವೃಷ್ಟಿಯಾಗಿ ಬೆಳೆನಾಶವಾದರೆ, ಅಲ್ಲಲ್ಲಿ ಇರುವ ಆಲ್ಫೋನ್ಸೋ ಮಾವಿನ ತೋಟಗಳು ಶೇ.78 ಉತ್ಪಾದನೆ ಕುಸಿತಗೊಂಡಿವೆ. ಇದೀಗ ಬೇಸಿಗೆಯಲ್ಲಿ ಯಾವುದೇ ಖರ್ಚು ಕಂದಾಯವಿಲ್ಲದೇ ಕೈಗೆ ಕಾಂಚಾಣ ನೀಡಬೇಕಿದ್ದ ಹುಣಸೆಯ ಶೇ.50 ಉತ್ಪಾದನೆಯನ್ನು ಪತಂಗ ಹುಳಗಳೇ ತಿಂದು ಹಾಕಿವೆ.
Related Articles
Advertisement
ಬೇಡಿಕೆಗೆ ತಕ್ಕಂತಿಲ್ಲ ಉತ್ಪಾದನೆ: ಹೆಸರು ಹೇಳಿದರೆ ಬಾಯಲ್ಲಿ ನೀರೊರೆಸುವ ಉತ್ತರ ಕರ್ನಾಟಕ ಭಾಗದ ಹುಣಸೆ ಹಣ್ಣಿಗೆ ರಾಜ್ಯ ಸೇರಿದಂತೆ ಹೊರರಾಜ್ಯಗಳಲ್ಲಿಯೂ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಹುಣಸೆ ಆಹಾರ ಪದಾರ್ಥಗಳ ತಯಾರಿಕೆಗೆ ಬಳಕೆಯಾದರೆ ಹುಣಸೆ ಬೀಜ ಆರೋಗ್ಯವರ್ಧಕ ಪಾನೀಯ ಕೈಗಾರಿಕೆಗಳಿಗೆ ಪ್ರಮುಖ ಕಚ್ಚಾವಸ್ತುವಾಗಿದೆ. ಇದರಲ್ಲಿ ವಿಟಾಮಿನ್‌ಗಳು, ಕಾರ್ಬೋಹೈಡ್ರೆಟ್ಸ್‌ಗಳು, ಪ್ರೋಟೀನ್ ಅಧಿಕವಾಗಿರುವುದರಿಂದ ಬೂಸ್ಟ್, ಹಾರ್ಲಿಕ್ಸ್ ಸೇರಿದಂತೆ ಔಷಧಿಯ ಕಂಪನಿಗಳು ಇದನ್ನು ಖರೀದಿಸುತ್ತವೆ. ಅದೂ ಅಲ್ಲದೇ ಹುಣಸೆ ಹಣ್ಣು ಚಿಗಳಿ ಮಾಡಿ ಖಾಸಗಿ ಕಂಪನಿಗಳು ಮಾಲ್‌ಗಳಲ್ಲಿ ಇಂದು ಮಾರಾಟ ಮಾಡುತ್ತವೆ. ಹೀಗಾಗಿ ಕಳೆದ ಒಂದು ದಶಕದಿಂದ ರೈತರಿಗೆ ಅತ್ಯಧಿಕ ಲಾಭ ತಂದು ಕೊಡುತ್ತಿದೆ.ಧಾರವಾಡ ಜಿಲ್ಲೆಯಲ್ಲಿ ಪ್ರತಿವರ್ಷ ಅಂದಾಜು 760 ಮೆಟ್ರಿಕ್ ಟನ್ ಹುಣಸೆ ಹಣ್ಣು 850 ಮೆಟ್ರಿಕ್ ಟನ್ ಹುಣಸೆ ಬೀಜ ಉತ್ಪಾದನೆಯಾಗುತ್ತಿದೆ. ಅಣ್ಣಿಗೇರಿ, ಅಳ್ನಾವರ, ಧಾರವಾಡ, ಕಲಘಟಗಿ, ಕುಂದಗೋಳ, ನವಲಗುಂದ ಹೀಗೆ ಎಲ್ಲಾ ತಾಲೂಕುಗಳಲ್ಲಿಯೂ ಹುಣಸೆ ಹಣ್ಣಿನ ಗಿಡಗಳಿವೆ. ಇಟ್ಟಿಗೆ ಉದ್ಯಮ ಹುಣಸೆ ಬಲಿ ಪಡೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಹುಣಸೆ ಉತ್ಪಾದನೆ ಕುಸಿಯುತ್ತಿದೆ. ಹೀಗಾಗಿ ಬೇಡಿಕೆಗೆ ತಕ್ಕಂತೆ ಹುಣಸೆ ಉತ್ಪಾದನೆಯಾಗುತ್ತಿಲ್ಲ.
ತೋಟಗಳತ್ತ ಚಿತ್ತ: ಕಳೆದ ನಾಲ್ಕು ವರ್ಷಗಳಿಂದ ಹುಣಸೆ ಹಣ್ಣಿಗೆ ಕರ್ನಾಟಕ ಸೇರಿ ಇತರೆ ರಾಜ್ಯಗಳಲ್ಲಿಯೂ ಬೇಡಿಕೆ ಅತ್ಯಧಿಕವಾಗಿದೆ. ಹೀಗಾಗಿ ರೈತರು ಇದೀಗ ತೋಟಗಾರಿಕೆ ಬೆಳೆಗಳಲ್ಲಿಯೇ ಅತಿ ಹೆಚ್ಚು ಆಕರ್ಷಿತರಾಗಿರುವುದು ಹುಣಸೆ ಕೃಷಿಗೆ. ಧಾರವಾಡದ ತೋಟಗಾರಿಕೆ ವಿವಿ ಕ್ಯಾಂಪಸ್‌ನ ನರ್ಸರಿಯಲ್ಲಿ ದಾಖಲೆ ಪ್ರಮಾಣದಲ್ಲಿ ಹುಣಸೆ ಸಸಿಗಳನ್ನು ರೈತರು ಕೊಂಡು ತಮ್ಮ ಹೊಲಗಳಲ್ಲಿ ನೆಡುತ್ತಿದ್ದಾರೆ. ಹುಣಸೆ ಹಣ್ಣಿಗೆ ಪರ್ಯಾಯವಾಗಿ ಇತ್ತೀಚಿನ ವರ್ಷಗಳಲ್ಲಿ ನೀರಾವರಿಯಲ್ಲೂ ಬೆಳೆಯುತ್ತಿರುವ ಟೋಮ್ಯಾಟೋ ಹಣ್ಣಿನ ಬಳಕೆ ಹೆಚ್ಚಾಗಿದೆ. ಈ ವರ್ಷ ಹುಣಸೆ ಹಣ್ಣಿಗೆ ಪರ್ಯಾಯವಾಗಿ ಇನ್ನಷ್ಟು ಚಪ್ಪರ ಹಣ್ಣೇ ಸಾರಿನ ರುಚಿ ಹೆಚ್ಚಿಸುವ ಸಾಧ್ಯತೆ ಇದೆ
ಮುಪ್ಪಾಗದ ಹುಳಿ: ಧಾರವಾಡ ಸೀಮೆ ಹುಣಸೆ ರುಚಿಕರವಾಗಿದ್ದು, ಹುಳಿಸಾರು, ಕಾರಬೆಳೆ, ತಂಬುಳಿ, ಹುಳಪಲ್ಲೆಗೆ ಹೇಳಿ ಮಾಡಿಸಿದ್ದು. ನಮ್ಮ ರಾಜ್ಯದ ಹುಣಸೆ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗುತ್ತಿರುವುದು ಇದೇ ಕಾರಣಕ್ಕೆ. ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಪ್ರತಿದಿನ ಅಡುಗೆಮನೆಯಲ್ಲಿ ಸಿದ್ಧಗೊಳ್ಳುವ ಪೀಟ್ಲ (ಹಿಟ್ಟಿನಪಲ್ಯ)ಕ್ಕೆ ಹುಣಸೆ ಬೇಕೆ ಬೇಕು. ಆಹಾರ ಕ್ರಮ ಬದಲಾದರೂ ಉತ್ತರ ಭಾರತೀಯ ಆಹಾರಗಳಿಗೂ ಹುಣಸೆ ಬೇಕಾಗಿದ್ದು, ಬೇಡಿಕೆ ಮಾತ್ರ ತಗ್ಗಿಲ್ಲ.
ಹವಾಮಾನದ ವೈಪರಿತ್ಯದಿಂದ ಮತ್ತು ಪತಂಗ ಕೀಟದ ಹಾವಳಿಯಿಂದ ವರ್ಷ ಹುಣಸೆ ಬೆಳೆ ನಲುಗಿ ಹೋಗಿದೆ. ಮುಂದಿನ ಬೆಳೆ ಸಂದರ್ಭದಲ್ಲಿ ರೈತರು ಅದರ ಆರೈಕೆ ಕ್ರಮಗಳಿಗೆ ಒತ್ತು ನೀಡುವುದು ಅನಿವಾರ್ಯ. -ಡಾ| ಜ್ಞಾನೇಶ್ವರ ಗೋಪಾಲೆ,ಕೀಟ ತಜ್ಞರು,ತೋಟಗಾರಿಕೆ ವಿವಿ ಘಟಕ, ಧಾರವಾಡ.
ಗೋವಾ, ತೆಲಂಗಾಣ, ಮಹಾರಾಷ್ಟ್ರದಿಂದ ಹುಣಸೆ ಹಣ್ಣು ಮತ್ತು ಬೀಜಕ್ಕೆ ಬೇಡಿಕೆ ಇದೆ. ಆದರೆ ಗುಣಮಟ್ಟದ ಹುಣಸೆ ಹಣ್ಣು ಸಿಕ್ಕುತ್ತಿಲ್ಲ. ಹುಳದ ಕಾಟದಿಂದ ಅದನ್ನು ಪರಿಷ್ಕರಿಸುವ ಖರ್ಚು ಅಧಿಕವಾಗಿದೆ. ಹೀಗಾಗಿ ಗಿಡಕ್ಕೆ ಹಣ ಕೊಟ್ಟರೂ ಹಣ್ಣು ತರಲು ಹೋಗಿಲ್ಲ. –ಭೀಮಣ್ಣ ತಳವಾರ, ಹುಣಸೆ ವ್ಯಾಪಾರಿ.
ಇಟ್ಟಿಗೆ ಉದ್ಯಮಕ್ಕೆ ಹುಣಸೆ ಬಲಿ: ಉತ್ತರ ಕರ್ನಾಟಕ ಭಾಗದಲ್ಲಿನ ಇಟ್ಟಿಗೆ ತಯಾರಿಕೆ ಭಟ್ಟಿಗಳಲ್ಲಿ ಇಟ್ಟಿಗೆ ಸುಡಲು ಅತ್ಯಧಿಕ ಪ್ರಮಾಣದಲ್ಲಿ ಹುಣಸೆಗಿಡದ ಕಟ್ಟಿಗೆ ಬಳಕೆಯಾಗುತ್ತಿದೆ. ಹೀಗಾಗಿ ನೂರು ವರ್ಷಗಳಷ್ಟು ಹಳೆಯದಾದ ದೊಡ್ಡ ದೊಡ್ಡ ಹುಣಸೆ ಗಿಡಗಳೆ ಕಣ್ಮರೆಯಾಗುತ್ತಿದ್ದು, ಹಣದ ಅಡಚಣೆಗೆ ಕಟಿ ಬಿದ್ದು ರೈತರು ಗಿಡಗಳನ್ನೇ ಮಾರಾಟ ಮಾಡಿದ್ದಾರೆ. ಹೀಗಾಗಿ ಹುಣಸೆ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ಬೇಡಿಕೆ ಮಾತ್ರ ಹೆಚ್ಚುತ್ತಿದೆ.ಇದನ್ನರಿತ ರೈತರು ಇದೀಗ ಹೊಲದಲ್ಲಿ ಹುಣಸೆ ತೋಟ ಬೆಳೆಸಲು ಸಜ್ಜಾಗುತ್ತಿದ್ದಾರೆ.
–ಡಾ|ಬಸವರಾಜ ಹೊಂಗಲ್