ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಿಲ್ಕಿ ಬ್ಯೂಟಿ ಎಂದೇ ಕರೆಸಿಕೊಳ್ಳುವ ಚೆಲುವೆ ತಮನ್ನಾ ಭಾಟಿಯಾ. ತೆಲುಗು, ತಮಿಳು, ಮಲೆಯಾಳ, ಅಷ್ಟೇ ಯಾಕೆ, ಹಿಂದಿ ಚಿತ್ರರಂಗದಲ್ಲೂ ತನ್ನದೇ ಆದ ಅಭಿಮಾನಿಗಳನ್ನು ಹೊಂದಿರುವ ತಮನ್ನಾ, ಸದ್ಯ ಸೌತ್ ಸಿನಿದುನಿಯಾದ ಬಹು ಬೇಡಿಕೆಯ ನಟಿಮಣಿಯರಲ್ಲಿ ಒಬ್ಬಳು.
ದಕ್ಷಿಣಭಾರತದ ವಿವಿಧ ಭಾಷೆಗಳ ಬಹುತೇಕ ಸೂಪರ್ ಸ್ಟಾರ್ ನಟರ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ತಮನ್ನಾ, ಕನ್ನಡದ ಸ್ಟಾರ್ ನಟರಿಗೆ ನಾಯಕಿಯಾಗಿ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದು ಯಾವಾಗ? ಎಂಬ ಅಭಿಮಾನಿಗಳ ಪ್ರಶ್ನೆಗಳಿಗೆ ಶೀಘ್ರದಲ್ಲಿಯೇ ಉತ್ತರ ಸಿಗಲಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಹೌದು, ತಮನ್ನಾ ಭಾಟಿಯಾ ಈಗಾಗಲೇ ನಿಖೀಲ್ ಕುಮಾರ್ ನಾಯಕನಾಗಿದ್ದ ಜಾಗ್ವಾರ್, ಯಶ್ ನಾಯಕನಾಗಿರುವ ಕೆ.ಜಿ.ಎಫ್ ಚಿತ್ರಗಳಲ್ಲಿ ವಿಶೇಷ ಹಾಡುಗಳಿಗೆ ಹೆಜ್ಜೆ ಹಾಕಿ ಹೋಗಿದ್ದಾರೆ. ಇದಲ್ಲದೆ ಕನ್ನಡದ ಕೆಲ ಜಾಹೀರಾತುಗಳಲ್ಲೂ ತಮನ್ನಾ ಆಗಾಗ್ಗೆ ಮುಖ ತೋರಿಸುವುದುಂಟು. ಹಾಗಾಗಿ ತಮನ್ನಾಗೆ ಕನ್ನಡ ಚಿತ್ರರಂಗ ತೀರಾ ಹೊಸದೇನಲ್ಲ. ಈ ಹಿಂದೆ ಕೂಡ ಹಲವು ಬಾರಿ ಒಳ್ಳೆಯ ಕಥೆ ಮತ್ತು ಅವಕಾಶಗಳು ಸಿಕ್ಕರೆ ಕನ್ನಡ ಚಿತ್ರಗಳಲ್ಲೂ ಖಂಡಿತ ನಟಿಸುತ್ತೇನೆ ಎಂದು ತಮನ್ನಾ ಹೇಳಿಕೊಂಡಿದ್ದರು.
ಇದರ ನಡುವೆಯೇ ತಮನ್ನಾ, ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಬರಲಿದ್ದಾರೆ ಎಂಬ ಸುದ್ದಿಗೆ ಇದೀಗ ಮತ್ತೆ ರೆಕ್ಕೆ-ಪುಕ್ಕ ಬಂದಿದೆ. ಇತ್ತೀಚೆಗೆ ನಿರ್ದೇಶಕ ಸಂತೋಷ್ ಆನಂದರಾಮ್ ಮತ್ತು ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಕಾಂಬಿನೇಷನ್‌ನ ಹೊಸಚಿತ್ರಕ್ಕೆ ಯುವರತ್ನ ಎಂಬ ಶೀರ್ಷಿಕೆ ಇಡಲಾಗಿದ್ದು, ಈ ಚಿತ್ರದಲ್ಲಿ ನಟ ಪುನೀತ್ ರಾಜಕುಮಾರ್ ಅವರಿಗೆ ನಾಯಕಿಯಾಗಿ ಜನಪ್ರಿಯ ನಟಿಯೊಬ್ಬರು ಜೋಡಿಯಾಗಲಿದ್ದಾರೆ ಎಂದು ನಿರ್ದೇಶಕ ಸಂತೋಷ್ ಆನಂದರಾಮ್ ತಿಳಿಸಿದ್ದರು. ಇದಾದ ಬಳಿಕ ಆ ನಾಯಕಿ ಯಾರು? ಎಂಬ ಚರ್ಚೆ ಶುರುವಾಗಿದ್ದು, ತಮನ್ನಾ ಈ ಚಿತ್ರದಲ್ಲಿ ನಾಯಕಿಯಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಜೋರಾಗುತ್ತಿದೆ.
ಅಂದ ಹಾಗೆ, ಈ ಸುದ್ದಿ ಜೋರಾಗಲು ಕಾರಣವೂ ಇದೆ. ತಮನ್ನಾ ಈ ಹಿಂದೆ ಕೆ.ಜಿ.ಎಫ್ ಚಿತ್ರದ ವಿಶೇಷ ಹಾಡೊಂದಲ್ಲಿ ಕಾಣಿಸಿಕೊಂಡಿದ್ದರು, ಈ ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿಯೇ ಯುವರತ್ನ ಚಿತ್ರ ಕೂಡ ನಿರ್ಮಾಣವಾಗುತ್ತಿದೆ. ಅಲ್ಲದೆ ತಮನ್ನಾ, ಪುನೀತ್ ರಾಜಕುಮಾರ್ ಅವರೊಂದಿಗೆ ಕೆಲ ಜಾಹೀರಾತುಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದರು. ಈ ಜಾಹೀರಾತುಗಳು ಸಾಕಷ್ಟು ಜನಪ್ರಿಯವಾಗಿದ್ದವು. ಹೀಗಾಗಿ ಯುವರತ್ನ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನಾಯಕಿಯಾಗಿ ತಮನ್ನಾ ಭಾಟಿಯಾ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಅನ್ನೋದು ಚಿತ್ರರಂಗದ ಪಂಡಿತರ ಅಭಿಪ್ರಾಯ.
ಆದರೆ, ಯುವರತ್ನ ಚಿತ್ರತಂಡ ಮಾತ್ರ ಈ ಸುದ್ದಿಯನ್ನು ಖಚಿತಪಡಿಸಿಲ್ಲ. ಹಾಗಂತ ಈ ವದಂತಿಯನ್ನು ತಳ್ಳಿ ಹಾಕಿಲ್ಲ! ಹಾಗಾಗಿ ದಕ್ಷಿಣ ಭಾರತದ ಕ್ಷೀರ ಕನ್ಯೆ ತಮ್ಮನ್ನಾ ಭಾಟಿಯಾ, ಯುವರತ್ನನಿಗೆ ಜೋಡಿಯಾಗಿ ರತ್ನನ ಪದ ಹಾಡುತ್ತಾಳಾ? ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಚಿತ್ರರಂಗದ ಮೂಲಗಳ ಪ್ರಕಾರ ಶೀಘ್ರದಲ್ಲಿಯೇ ತಮನ್ನಾ ಎಂಟ್ರಿಯ ಬಗ್ಗೆ ಖಾತ್ರಿಯಾಗಲಿದ್ದು, ಹಾಗೇನಾದರೂ ತಮನ್ನಾ ಕನ್ನಡಕ್ಕೆ ಬಂದರೆ ಪಂಚಭಾಷಾ ತಾರೆಗಳ ಪಟ್ಟಿಗೆ ಮತ್ತೂಂದು ಹೆಸರು ಸೇರ್ಪಡೆಯಾಗುದರಲ್ಲಿ ಅನುಮಾನವಿಲ್ಲ.