Advertisement

ಹೆಚ್ಚುತ್ತಿರುವ ಕೋವಿಡ್ ಎರಡನೇ ಅಲೆ : ಜಿ.ಪಂ., ತಾ.ಪಂ. ಚುನಾವಣೆ ಮುಂದೂಡಿಕೆ?

01:26 AM Apr 19, 2021 | Team Udayavani |

ಉಡುಪಿ: ಮಾಸಾಂತ್ಯದೊಳಗೆ ಅವಧಿ ಮುಗಿಯುವ ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ಗಳಿಗೆ ಸದ್ಯ ನಿರೀಕ್ಷಿಸಿದ ಚುನಾವಣೆ ಕೊರೊನಾ ಕಾರಣದಿಂದ ನಡೆಯುವ ಸಾಧ್ಯತೆಯಿಲ್ಲ. ಸರಕಾರವೂ ಚುನಾವಣೆಯನ್ನು ಸದ್ಯ ಮುಂದೂಡುವ ಚಿಂತನೆಯಲ್ಲಿದೆ.

Advertisement

ರಾಜ್ಯದ 31 ಜಿಲ್ಲೆಗಳಲ್ಲಿ ಒಟ್ಟು 1,190 ಜಿ.ಪಂ. ಕ್ಷೇತ್ರಗಳು, 3,273 ತಾ.ಪಂ. ಕ್ಷೇತ್ರಗಳಿಗೆ ಅಧಿಸೂಚನೆಯನ್ನು ರಾಜ್ಯ ಚುನಾವಣ ಆಯೋಗ ಹೊರಡಿಸಿದೆ. ಇದಕ್ಕೆ ಇನ್ನಷ್ಟೇ ಮೀಸಲಾತಿ ಪ್ರಕಟವಾಗಬೇಕಿದೆ. ಈ ಬಾರಿ ಎಲ್ಲ ಜಿಲ್ಲೆಗಳಲ್ಲೂ ಜನಸಂಖ್ಯೆ ಆಧಾರ
ದಲ್ಲಿ ಜಿ.ಪಂ.ಗಳು ಹಿಂದಿಗಿಂತ ಹೆಚ್ಚಿಗೆಯಾಗಿದ್ದು, ತಾ.ಪಂ.ಗಳು ಹಿಂದಿಗಿಂತ ಕಡಿಮೆಯಾಗಿದೆ. ಇದಕ್ಕೆ ದ.ಕ., ಉಡುಪಿ ಜಿಲ್ಲೆಗಳೂ ಹೊರತಲ್ಲ. ಚುನಾವಣ ಆಯೋಗ ಮತದಾರರ ಪಟ್ಟಿ ಸಿದ್ಧಪಡಿಸಲು ಸಿದ್ಧತೆ ಮಾಡಿದೆ. ಆದರೆ ಈಗ ಸೋಂಕಿನ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡುವ ಎಲ್ಲ ಲಕ್ಷಣಗಳಿವೆ.

ಈಗಷ್ಟೇ ಮುಗಿದ ಉಪಚುನಾವಣೆಯಿಂದ ಕೊರೊನಾ ಪ್ರಕರಣ ಜಾಸ್ತಿಯಾಗಿದೆ ಎಂಬ ವರದಿ ಇರುವುದರಿಂದ ಸರಕಾರ ಜಿ.ಪಂ., ತಾ.ಪಂ. ಚುನಾವಣೆಯನ್ನು ಮುಂದೂಡಲು ಒಲವು ತೋರಿದೆ.

ವಿವಿಧ ರಾಜಕೀಯ ಪಕ್ಷಗಳ ಮುಖಂಡರೂ ಈ ವಿಷಯದಲ್ಲಿ ಏಕ ಅಭಿಪ್ರಾಯವನ್ನು ಹೊಂದಿರುವಂತಿದೆ. ಇದಕ್ಕೆ ಪೂರಕವಾಗಿ ಸಚಿವರೂ ಚುನಾವಣೆಯನ್ನು ಸದ್ಯ ಮುಂದೂಡಲು ಒಲವು ಹೊಂದಿದ್ದಾರೆ. ಹೀಗಾಗಿ ಚುನಾವಣೆ ಮುಂದಕ್ಕೆ ಹೋದರೆ ಅಚ್ಚರಿ ಇಲ್ಲ.

ಆಡಳಿತಾಧಿಕಾರಿಗಳ ನೇಮಕ
ಎಪ್ರಿಲ್‌ ತಿಂಗಳ ಕೊನೆಯೊಳಗೆ ಬಹುತೇಕ ಎಲ್ಲ ಜಿ.ಪಂ. ಮತ್ತು ತಾ.ಪಂ.ಗಳ ಹಾಲಿ ಆಡಳಿತ ಮಂಡಳಿ ಅವಧಿ ಮುಗಿಯಲಿದೆ. ಕಾನೂನು ಪ್ರಕಾರ ಜಿ.ಪಂ.ಗೆ ವಿಭಾಗೀಯ ಅಧಿಕಾರಿಗಳು ಮತ್ತು ತಾ.ಪಂ.ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಆಡಳಿತಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಬೇಕು. ಹೀಗೆ ಆಡಳಿತಾಧಿಕಾರಿಗಳ ಅವಧಿ ಆರು ತಿಂಗಳು. ಇನ್ನು ಆರು ತಿಂಗಳೊಳಗೆ ಚುನಾವಣೆ ನಡೆಸಬೇಕು. ವಿಶೇಷ ಕಾರಣಕ್ಕಾಗಿ ಚುನಾವಣೆ ನಡೆಸಲು ಆಗದಿದ್ದರೆ ಮತ್ತೆ ಆಡಳಿತಾಧಿಕಾರಿಗಳ ಅವಧಿ ವಿಸ್ತರಿಸುವ ಅವಕಾಶವೂ ಇದೆ.

Advertisement

ಸದ್ಯದಲ್ಲಿಯೇ ಮಳೆಗಾಲ ಆರಂಭ
ವಾಗುವುದರಿಂದ ಮುಂದಿನ ನವೆಂಬರ್‌- ಡಿಸೆಂಬರ್‌ ವೇಳೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದರೆ ಚುನಾವಣೆ ನಡೆಸಬಹುದು.

ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಚುನಾವಣೆಯನ್ನು ಮುಂದೂಡಬಹುದು ಎಂದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಸರಕಾರ ಸಚಿವ ಸಂಪುಟದಲ್ಲಿ ವಿಷಯವನ್ನು ಮಂಡಿಸಿ ನಿರ್ಧಾರ ತೆಗೆದುಕೊಳ್ಳಬಹುದು. ರಾಜ್ಯ ಚುನಾವಣ ಆಯೋಗಕ್ಕೂ ನಮ್ಮ ಅಭಿಪ್ರಾಯ ತಿಳಿಸುತ್ತೇವೆ. ಆಯೋಗವೂ ಪೂರಕವಾಗ ಸ್ಪಂದಿಸುವ ಸಾಧ್ಯತೆಯಿದೆ.
– ಕೆ.ಎಸ್‌. ಈಶ್ವರಪ್ಪ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next