Advertisement

ಬಿಇಒಗೆ ತಾಪಂ ಉಪಾಧ್ಯಕ್ಷರಿಂದ ತರಾಟೆ

03:06 PM Jun 27, 2018 | Team Udayavani |

ಚಿಂಚೋಳಿ: ತಾಲೂಕಿನ ಯಾಕಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿರ್ವಹಣೆಗಾಗಿ ನೀಡಿದ ಅನುದಾನವನ್ನು ಪ್ರಭಾರ ಮುಖ್ಯಶಿಕ್ಷಕರು ದುರುಪಯೋಗ ಮಾಡಿಕೊಂಡರೂ ಅವರ ವಿರುದ್ಧ ಶಿಕ್ಷಣ ಇಲಾಖೆಯಿಂದ ಯಾವುದೇ ಕ್ರಮ ಕೈಕೊಂಡಿಲ್ಲ ಎಂದು ತಾಪಂ ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ ಬಿಇಒ ಅವರನ್ನು ತರಾಟೆಗೆ ತೆಗೆದುಕೊಂಡರು.

Advertisement

ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ಯಾಕಾಪುರ ಸ.ಹಿ.ಪ್ರಾಥಮಿಕ ಶಾಲೆಗೆ ಎಸ್‌.ಡಿ.ಎಂ.ಸಿ ರಚಿಸಿಲ್ಲ. ಆದರೆ ಇಲ್ಲಿನ ಪ್ರಭಾರ ಮುಖ್ಯಶಿಕ್ಷಕ ನಾಗಣ್ಣ ಅಧ್ಯಕ್ಷರ ನಕಲಿ ಸಹಿ ಮಾಡಿ ಕಳೆದ ಎರಡು ವರ್ಷಗಳಿಂದ 2.25ಲಕ್ಷ ರೂ.ಎತ್ತಿ ಹಾಕಿದ್ದಾರೆ. ಅಲ್ಲದೇ 30 ಮಕ್ಕಳ ಹಾಜರಾತಿ ಇದ್ದರೂ 100 ವಿದ್ಯಾರ್ಥಿಗಳ ಹೆಸರಿನಲ್ಲಿ ಅಕ್ಕಿ ಸೇರಿದಂತೆ ಆಹಾರ ಧಾನ್ಯ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಬಗ್ಗೆ ಇಲಾಖೆ ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಬಿಇಒ ಅವರನ್ನು ಸಭೆಯಲ್ಲಿ ಪ್ರಶ್ನಿಸಿದರು.

ಹಣ ವಸೂಲಿ ಮಾಡುವಂತೆ ಶಿಕ್ಷಣ ಇಲಾಖೆಯಿಂದ ನೋಟಿಸ್‌ ಜಾರಿ ಮಾಡಲಾಗಿತ್ತು. ಆದರೆ ವರ್ಗಾವಣೆಗೊಂಡಿರುವ ಬಿಇಒ ದತ್ತಪ್ಪ ಅದನ್ನು ರದ್ದುಗೊಳಿಸಿದ್ದಾರೆ ಎಂದು ಆರೋಪಿಸಿದರು. ಬಿಇಒ ನಿಂಗಪ್ಪ ಸಿಂಪಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ವರ್ಗಾವಣೆಗೊಂಡು ಇಲ್ಲಿಗೆ ಬಂದಿದ್ದೇನೆ. ನನಗೆ ಈ ವಿಷಯ ತಿಳಿದಿಲ್ಲ ಎಂದರು. ಬಿಸಿಯೂಟ ಯೋಜನಾಧಿಕಾರಿ ಜಯಪ್ಪ ಚಾಪೆಲ್‌ ಈ ಹಿಂದೆ ಕೈಯಿಂದ ನಮೂದಿಸುವಾಗ ಕಡಿಮೆ ಸಂಖ್ಯೆಯಲ್ಲಿ ಮಕ್ಕಳಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ನಮೂದು ಮಾಡಬಹುದಾಗಿತ್ತು. ಈಗ ಬರುವುದಿಲ್ಲವೆಂದು ಸಭೆಗೆ ವಿವರಿಸಿದರು.

ತಾಲೂಕು ವೈದ್ಯಾಧಿಕಾರಿ ಡಾ| ಮಹಮ್ಮದ ಗಫಾರ ಮಾತನಾಡಿ, ಮೋಘಾ ಮತ್ತು ಯಲಮಡಗಿ ಗ್ರಾಮದಲ್ಲಿ ಡೆಂಘೀ ಜ್ವರ ಇಬ್ಬರಲ್ಲಿ ಕಂಡು ಬಂದಿತ್ತು. ಈಗ ಗುಣಮುಖವಾಗಿದೆ. ಗ್ರಾಮದಲ್ಲಿ ರಕ್ತ ಪರೀಕ್ಷೆ ನಡೆಸಲಾಗಿದ್ದು ಇತರರಲ್ಲಿ ಕಂಡು ಬಂದಿಲ್ಲ. ಚಿಂಚೋಳಿ ಸರಕಾರಿ ದವಾಖಾನೆಯಲ್ಲಿ ಐಸಿಯೂ, ಡಯಾಲಿಸಿಸ್‌ ಪ್ರಾರಂಭಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಶಾಲೆ ಪ್ರಾರಂಭಗೊಂಡಿವೆ.

ಆದರೆ ಶಾಲೆಯಲ್ಲಿ ಮಕ್ಕಳಿಗೆ ಪಾಠ ಭೋಧನೆ ಮಾಡುವವರೇ ಇನ್ನು ತನಕ ಬಂದಿಲ್ಲ. ಗೌರವ ಶಿಕ್ಷಕರ ನೇಮಕಾತಿ ಇನ್ನು ಆಗಿಲ್ಲ. ಹೀಗಾದರೆ ಮಕ್ಕಳ ಶಿಕ್ಷಣ ಗತಿ ಏನು ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹ್ಮದ ಹುಸೇನ
ನಾಯಕೋಡಿ ಬಿಇಒ ಅವರಿಗೆ ಪ್ರಶ್ನಿಸಿದರು.

ತಾಲೂಕಿನಲ್ಲಿ ವ್ಯಾಪಕ ಮಳೆ ಆಗಿರುವುದರಿಂದ ಮಳೆಯಿಂದ ಬೆಳೆಗಳು ಸ್ವಲ್ಪಮಟ್ಟಿಗೆ ಚೇತರಿಕೆ ಆಗುತ್ತಿವೆ. ಈಗಾಗಲೇ ಶೇ. 50ರಷ್ಟು ಬಿತ್ತನೆ ಆಗಿದೆ. ಸದ್ಯ ಮಳೆ 208 ಮಿಮೀ ಮಳೆ ಆಗಿದ್ದು, ಶೇ. 27 ಹೆಚ್ಚಿಗೆ ಆಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್‌. ಹೆಚ್‌. ಗಡಿಗಿಮನಿ ತಿಳಿಸಿದರು.

Advertisement

ತಾಲೂಕಿನ ಎಲ್ಲ ಜನಪ್ರತಿನಿಧಿಗಳ ಆಸ್ತಿಘೋಷಣೆ ವಿವರ ಸಲ್ಲಿಸುವಂತೆ ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದರೂ ಇಲ್ಲಿಯವವರೆಗೆ ಯಾರೂ ಆಸ್ತಿಘೋಷಣೆ ನೀಡಿಲ್ಲ. ಜೂನ್‌ 30ರೊಳಗೆ ಆಸ್ತಿ ವಿವರ ಸಲ್ಲಿಸಬೇಕೆಂದು ತಾಪಂ ಇಒ ಮಹಮ್ಮದ ಮೈನೋದ್ದೀನ್‌ ಪಿಡಿಒಗೆ ಸೂಚಿಸಿದರು.

ಎಇಇ ವೀರಣ್ಣ ಕುಣಕೇರಿ, ಜಿಪಂ ಎಇಇ ಅಶೋಕ ತಳವಾಡೆ, ಜೆಸ್ಕಾಂ ಎಇಇ ಮಹೇಂದ್ರಕುಮಾರ ಸಿಂಧೆ, ಎಇ ಅನೀಲ ಕಳಸ್ಕರ, ಎಇಇ ಕೈಲಾಶ, ಜೆಇ ಚೇತನ ಕಳಸ್ಕರ ತಮ್ಮ ಇಲಾಖೆಗಳ ಮಾಹಿತಿ ವಿವರಿಸಿದರು. ವ್ಯವಸ್ಥಾಪಕ ಅಣ್ಣಾರಾವ ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next