ಸುರಪುರ: 2019-20ನೇ ಸಾಲಿನ ನರೇಗಾ ಯೋಜನೆಯಡಿ ಕೆಲಸ ಮಾಡಿದ ಕೂಲಿ ಹಣ ಪಾವತಿಸುವಂತೆ ಒತ್ತಾಯಿಸಿ ನಗನೂರ ಗ್ರಾಪಂ ವ್ಯಾಪ್ತಿಯ ನೂರಾರು ಕೂಲಿ ಕಾರ್ಮಿಕರು ಸೋಮವಾರ ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಯೋಜನೆಯಡಿ 2015-16ನೇ ಸಾಲಿನಲ್ಲಿ ಮಾಡಿದ ಕೆಲಸದ ಕೂಲಿ ಹಣ ಇದುವರೆಗೂ ಪಾವತಿಸಿಲ್ಲ. 2019-20ನೇ ಸಾಲಿನ ಯೋಜನೆಯಲ್ಲಿ ಕೆಲಸ ಮಾಡಿದ 500 ಕಾರ್ಮಿಕರಿಗೆ ಪ್ರತಿ ದಿನ ಕೂಲಿಯಲ್ಲಿ 40 ರೂ.ನಂತೆ ಕಡಿತ ಮಾಡಿ ಪಾವತಿಸಿ ಉಳಿದ ಹಣ ಇದುವರೆಗೂ ನೀಡುತ್ತಿಲ್ಲ ಮತ್ತು ಕೆಲ ಕಾರ್ಮಿಕರಿಗೆ ಒಂದೆರಡು ದಿನಗಳ ಗೈರು ಹಾಜರಿ ಹಾಕಿ ಕೂಲಿ ಕಡಿತ ಮಾಡಿ ಪಾವತಿಸಿದ್ದಾರೆ ಎಂದು ಪಿಡಿಒ ಮತ್ತು ತಾಪಂ ಇಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಗೆ ನಿಯಮವಿದ್ದು, ಈ ರೀತಿ ಕಚೇರಿ ಒಳಗೆ ನುಗ್ಗಿ ದಾಂದಲೆ ಮಾಡುವುದಲ್ಲ. ಮೊದಲು ಕಚೇರಿ ಬಿಟ್ಟು ಹೊರ ಹೋಗಿ. ಇಲ್ಲವಾದರೆ ನಿಮ್ಮ ವಿರುದ್ಧ ದೂರು ಸಲ್ಲಿಸಬೇಕಾಗುತ್ತದೆ ಎಂದು ತಾಪಂ ಇಒ ಅಮರೇಶ ಬೆದರಿಕೆ ಕಾರ್ಮಿಕರನ್ನು ಇನ್ನಷ್ಟು ಕೆರಳಿಸಿತು. ಇದರಿಂದ ಕೋಪಗೊಂಡ ಕಾರ್ಮಿಕರು ಇಒ ಅವರನ್ನು ತರಾಟೆಗೆ ತೆಗೆದುಕೊಂಡರು. ಇಒ ಮತ್ತು ಕಾರ್ಮಿಕರ ನಡುವೆ ಮಾತಿನ ಜಟಾಪಡಿ ನಡೆದು ನೂಕುನುಗ್ಗಲು ಉಂಟಾಯಿತು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಕಾರ್ಮಿಕ ಅರ್ಜುನ ಮಾತನಾಡಿ, ನರೇಗಾದಡಿ ಗ್ರಾಪಂ ವ್ಯಾಪ್ತಿಯ 500 ಕಾರ್ಮಿಕರು ಕೆಲಸ ಮಾಡಿದ್ದಾರೆ. ಕೆಲಸ ಮುಗಿದು ವರ್ಷವಾಗಿದೆ. ಆದರೆ ಸಂಬಂಧಿಸಿದ ಅಧಿ ಕಾರಿಗಳು ಕಾರ್ಮಿಕರಿಗೆ ನಿಯಮಿತವಾಗಿ ಕೂಲಿ ಪಾವತಿಸಿಲ್ಲ. ಪ್ರತಿ ಕಾರ್ಮಿಕರಿಂದ ದಿನಕ್ಕೆ 40 ರೂ.ನಂತೆ ಕೂಲಿ ಕಡಿತ ಮಾಡಿದ್ದಾರೆಂದು ಆರೋಪಿಸಿದರು. ಈ ಬಗ್ಗೆ ಸಾಕಷ್ಟು ಬಾರಿ ಪ್ರತಿಭಟನೆ ಮಾಡಿದ್ದೇವೆ. ಆದರೆ ಎಲ್ಲ ಅಧಿ ಕಾರಿಗಳು ಕೇವಲ ಭರವಸೆ ನೀಡಿದ್ದಾರೆಯೇ ಹೊರತು ಹಣ ಪಾವತಿಸುತ್ತಿಲ್ಲ ಎಂದು ದೂರಿದರು.
ಕಾರ್ಮಿಕರಿಗೆ ದುಡಿತಕ್ಕೆ ತಕ್ಕಷ್ಟು ಹಣ ಪಾವತಿಸಲಾಗಿದ್ದು, ಯಾವುದೇ ಲೋಪದೋಷವಾಗಿಲ್ಲ ಎಂದು ಇಒ ಸಮಜಾಯಿಸಿದರು. ಇದಕ್ಕೊಪ್ಪದ ಕಾರ್ಮಿಕರು
ಅಂತಿಮವಾಗಿ ಕಾಮಗಾರಿ ಕುರಿತು ಪುನಃ ಪರಿಶೀಲಿಸಿ ಬಾಕಿ ಕೂಲಿ ಹಣ ಪಾವತಿಸುವುದಾಗಿ ಮತ್ತು 100 ಕೆಲಸದ ಮಾನವ ದಿನ ನೀಡುವುದು ಸೇರಿದಂತೆ
ಉಳಿದ ಎಲ್ಲ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯಲ್ಲಿ ಸುಮಾರು 500ಕ್ಕೂ ಮೇಲ್ಪಟ್ಟು ಕಾರ್ಮಿಕರು ಭಾಗವಹಿಸಿದ್ದರು.