Advertisement

ರಸ್ತೆ ದುರಸ್ತಿ ಮಾಡಿದ್ದರೆ ದಾಖಲೆ ಕೊಡಿ : ಸಭೆಯಲ್ಲಿ ಅಧಿಕಾರಿಗಳಿಗೆ ತಾಪಂ ಸದಸ್ಯರ ಒತ್ತಾಯ

03:26 PM Jan 14, 2021 | Team Udayavani |

ಹಾವೇರಿ: 2020ನೇ ಸಾಲಿನ ಆರ್ಥಿಕ ವರ್ಷ ಮಾರ್ಚ್‌ಗೆ ಅಂತ್ಯವಾಗಲಿದ್ದು, ಲೋಕೋಪಯೋಗಿ ಇಲಾಖೆಯಿಂದ ತಾಲೂಕಿನಲ್ಲಿ ಯಾವುದೇ ರಸ್ತೆ ದುರಸ್ತಿ ಸೇರಿ ಹೊಸ ರಸ್ತೆ ನಿರ್ಮಾಣವಾಗಿಲ್ಲ. ಆಗಿದ್ದರೆ, ಅಧಿಕಾರಿಗಳು ಅದಕ್ಕೆ ಸಂಬಂಧಿಸಿದ ದಾಖಲೆ ಕೊಡುವಂತೆ ತಾಪಂ ಸದಸ್ಯರು ಆಗ್ರಹಿಸಿದ ಘಟನೆ ಸಾಮಾನ್ಯ ಸಭೆಯಲ್ಲಿ ನಡೆಯಿತು. ನಗರದ ತಾಪಂ ಸಭಾಭವನದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಸತೀಶ ಸಂದಿಮನಿ, ಮಾಲತೇಶ ಬನ್ನಿಮಟ್ಟಿ, ಅಶೋಕ
ಯಲಿಗಾರ ಇತರರು ಮಾತನಾಡಿ, ನೆರೆಯಿಂದ ರಸ್ತೆಗಳು ಹಾಳಾಗಿವೆ. ಬೈಕ್‌ಗಳ ಸಂಚಾರವೂ ದುರಸ್ತವಾಗಿದೆ. ಸರ್ಕಾರ ಬಿಡುಗಡೆ ಮಾಡಿದ ಅನುದಾನ ಏನಾಗಿದೆ. ಯಾವ ಭಾಗದಲ್ಲಿ ರಸ್ತೆ ದುರಸ್ತಿ ಹಾಗೂ ಹೊಸ ರಸ್ತೆ ನಿರ್ಮಿಸಿದ್ದೀರಿ ಎಂಬ ಮಾಹಿತಿ ನೀಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.

Advertisement

ಸಭೆಯಲ್ಲಿದ್ದ ಸಹಾಯಕ ಎಂಜಿನಿಯರ್‌ ಎಸ್‌.ಎನ್‌.ಮೆಡ್ಲೆರಿ ಮಾತನಾಡಿ, ನನಗೆ ಮಾಹಿತಿಯಿಲ್ಲ. ಎಇಇ ಅವರು ಕೋರ್ಟ್ ಗೆ ಹೋಗಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಅವರನ್ನೇ ಕೇಳಿ ಎಂದರು. ಮಾಹಿತಿಯಿಲ್ಲದೇ ಸಭೆಗೆ ಏಕೆ ಬರುತ್ತೀರಿ. ನಿಮ್ಮ ಎಇಇ ಅವರು ಉದ್ದೇಶಪೂರ್ವಕವಾಗಿಯೇ ಸಭೆಗೆ ಬಂದಿಲ್ಲ. ಮಂಗಳವಾರದೊಳಗೆ ಎಲ್ಲ ಮಾಹಿತಿಯನ್ನು ಸದಸ್ಯರಿಗೆ ನೀಡಬೇಕು ಎಂದು ತಾಕೀತು ಮಾಡಿದರು.

ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಜೋಳ ಸೇರಿ ಅನೇಕ ಬೆಳೆಗಳು ಹಾಳಾಗಿವೆ. ಈ ಕುರಿತು ಈವರೆಗೆ ಎಷ್ಟು ಸಮೀಕ್ಷೆ ಮಾಡಿದ್ದೀರಿ. ಎಷ್ಟು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂಬ ಮಾಹಿತಿ ನೀಡಿ ಎಂದು ಸತೀಶ ಸಂದಿಮನಿ ಕೃಷಿ ಅಧಿಕಾರಿಗೆ ಸೂಚಿಸಿದರು. ಸಹಾಯಕ ಕೃಷಿ ನಿರ್ದೇಶಕ ಕೆ.ಆರ್‌. ಕುಡುಪಲಿ ಮಾತನಾಡಿ, ಸದ್ಯ ಬೆಳೆ ಸಮೀಕ್ಷೆ ನಡೆಯುತ್ತಿದೆ. ಅದು ಮುಗಿದ ಕೂಡಲೇ ಎಷ್ಟು ಹಾನಿಯಾಗಿದೆ ಎಂಬ ಮಾಹಿತಿಯನ್ನು ಸರ್ಕಾರಕ್ಕೆ ಕಳಿಸಲಾಗುವುದು ಎಂದರು.

ಇದನ್ನೂ ಓದಿ:ಸಸ್ಯ ಸಂಪತ್ತು-ವನ್ಯಜೀವಿ ರಕ್ಷಣೆಗೆ ಮುಂದಾಗಿ : ಶ್ರೀ ಶಿವಕುಮಾರ ಮಹಾ ಸ್ವಾಮೀಜಿ ಸಲಹೆ

ಇಒ ಡಾ|ಬಸವರಾಜ ಡಿ.ಸಿ. ಮಾತನಾಡಿ, ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ತಾಂಡವವಾಡುತ್ತಿದೆ. ಜನರ
ಕಷ್ಟಗಳಿಗೆ ಮೊದಲು ಸ್ಪಂದಿಸುವುದನ್ನು ರೂಢಿಸಿಕೊಳ್ಳಿ. ಕಾಲಕಾಲಕ್ಕೆ ಸಂಬಂಧಿಸಿದ ಇಲಾಖೆವಾರು ಸಮರ್ಪಕ ಮಾಹಿತಿ ಒದಗಿಸಿ ಎಂದು ಸೂಚಿಸಿದರು.

Advertisement

ಕೋವಿಡ್‌ ಲಸಿಕೆ ಕುರಿತು ಟಿಎಚ್‌ಒ ಡಾ|ಪ್ರಭಾಕರ ಕುಂದೂರ ಮಾಹಿತಿ ನೀಡಿ, ಕೊರೊನಾಕ್ಕೆ ಲಸಿಕೆ ವಿತರಣೆ ಇನ್ನೊಂದು ವಾರದಲ್ಲಿ ವಿತರಣೆಯಾಗಲಿದೆ. ವ್ಯವಸ್ಥಿತವಾಗಿ ವ್ಯಾಕ್ಸಿನ್‌ ಚಟುವಟಿಕೆಗಳನ್ನು ದಾಖಲಿಸಿಕೊಂಡು ವಿತರಿಸಲಾಗುವುದು.
ಮೊದಲ ಹಂತದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಿಬ್ಬಂದಿ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗುವುದು. 2ನೇ ಹಂತದಲ್ಲಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಕೊರೊನಾ ವಾರಿಯರ್ಗಳಿಗೆ ಲಸಿಕೆ ನೀಡಲಾಗುವುದು. 3ನೇ ಹಂತದಲ್ಲಿ ಸರ್ಕಾರ ನಿಗದಿಪಡಿಸಿದ 50ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುವುದು ಎಂದರು.

ಸಭೆಯಲ್ಲಿ ತಾಪಂ ಅಧ್ಯಕ್ಷೆ ಕಮಲಮ್ಮ ಪಾಟೀಲ, ಉಪಾಧ್ಯಕ್ಷೆ ಸುವರ್ಣ ಸುಕಳಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶಿಲ್ಪಾ
ಗೋಟನವರ, ಸದಸ್ಯರಾದ ವಿರುಪಾಕ್ಷಪ್ಪ ಹುಲ್ಲೂರ, ಮೃತ್ಯುಂಜಯ ವಗ್ಗಣ್ಣನವರ, ಯಲ್ಲಪ್ಪ ಮಣ್ಣೂರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next