ಗಂಗಾವತಿ (ಎಸ್.ಬಿ.ಗೊಂಡಬಾಳ ವೇದಿಕೆ): ರಾಜಕೀಯ ಹಿತಾಸಕ್ತಿಗಾಗಿ ಕಾರಟಗಿ, ಕನಕಗಿರಿ ಪ್ರತೇಕ ತಾಲೂಕು ರಚನೆ ಮಾಡುವ ಮೂಲಕ ಗಂಗಾವತಿಯ ಅಂಗಾಂಗಗಳನ್ನು ಕತ್ತರಿಸಲಾಗಿದ್ದು ಇದಕ್ಕೆ ಪರಿಹಾರವಾಗಿ ಗಂಗಾವತಿಯ ಹೆಸರು ಬದಲಿಸಿ ಪ್ರತೇಕ ಕಿಷ್ಕಿಂಧಾ ಜಿಲ್ಲೆ ರಚನೆಯೊಂದೇ ಮಾರ್ಗವಾಗಿದ್ದು ಕೂಡಲೇ ಜಿಲ್ಲಾ ರಚನಾ ಹೋರಾಟ ಸಮಿತಿ ಅಸ್ತಿತ್ವಕ್ಕೆ ತರಬೇಕಿದೆ ಎಂದು ವಕೀಲರ ಸಂಘದ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಎಚ್.ಎಂ.ಮಂಜುನಾಥ ಹೇಳಿದರು.
ಅವರು 8 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಭಿವೃದ್ಧಿ ಚಿಂತನಾಗೋಷ್ಠಿಯ ಆಶಯ ನುಡಿಗಳನ್ನಾಡಿ ಮಾತನಾಡಿದರು.
ಅಖಂಡ ರಾಯಚೂರು ಜಿಲ್ಲೆಯಿದ್ದ ಸಂದರ್ಭದಲ್ಲಿ ಗಂಗಾವತಿ ಎಪಿಎಂಸಿ ಆದಾಯ ಇಡಿ ರಾಜ್ಯಕ್ಕೆ ಎರಡನೇಯ ಸ್ಥಾನದಲ್ಲಿತ್ತು. ಇಲ್ಲಿ ಆರ್‌ಟಿಓ, ಕೆಇಬಿ ಸೇರಿ ಹಲವು ಕಚೇರಿಗಳು ಕೊಪ್ಪಳಕ್ಕೆ ವರ್ಗಾ ಆಗಿವೆ. ಗಂಗಾವತಿ ನೋಂದಣಿ ಇಲಾಖೆಯ ಆದಾಯ ವಾರ್ಷಿಕ 15ಕೋಟಿ ರೂ. ಇದ್ದು ಇನ್ನೂ ಅನೇಕ ವಿಷಯಗಳಲ್ಲಿ ಗಂಗಾವತಿ ಅಭಿವೃದ್ಧಿ ಹೊಂದಬೇಕಿದೆ. ಆದ್ದರಿಂದ ಗಂಗಾವತಿಗೆ ಜಿಲ್ಲೆಯ ಸ್ಥಾನಮಾನಕ್ಕಾಗಿ ಹೋರಾಟ ನಡೆಸುವ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಗಂಗಾವತಿ ಅಭಿವೃದ್ಧಿಯಿಂದ ವಂಚಿತವಾಗಲಿದೆ. ಕಿಷ್ಕಿಂದಾ ಎಂದು ನಾಮಕರಣ ಮಾಡಿ ಗಂಗಾವತಿಯನ್ನು ಪ್ರತೇಕ ಜಿಲ್ಲೆ ಮಾಡಬೇಕು. ಈಗಾಗಲೇ ಸಿಂಧನೂರನ್ನು ಜಿಲ್ಲೆಯಾಗಿಸುವಂತೆ ಹೋರಾಟಗಳು ನಡೆಯುತ್ತಿದ್ದು ಗಂಗಾವತಿಯವರು ಎಚ್ಚೆತ್ತುಕೊಳ್ಳದಿದ್ದರೆ ಕಾರಟಗಿ ತಾಲೂಕು ಸಿಂಧನೂರು ನೂತನ ಜಿಲ್ಲೆಗೆ ಸೇರಲಿದೆ.ಗಂಗಾವತಿ ಪ್ರತೇಕ ಜಿಲ್ಲೆಯಾದ ತಕ್ಷಣ, ಜಿಲ್ಲಾಧಿಕಾರಿಗಳು, ಎಸ್ಪಿ, ಲೋಕಾಯುಕ್ತ, ಎಸಿ, ರ‍್ಟಿಓ, ಸೇರಿ ಎಲ್ಲಾ ಇಲಾಖೆಗಳ ಕಚೇರಿಗಳು, ಜಿಲ್ಲಾ ಕೋರ್ಟ್, ಸ್ನಾತಕೋತ್ತರ ಕೇಂದ್ರಗಳು, ರೈಲ್ವೇ , ವಿಮಾನ ನಿಲ್ದಾಣ ಹಾಗೂ ರಾಷ್ಟ್ರೀಯ ಹೆದ್ದಾರಿ, ಬಜೆಟ್ ನಲ್ಲಿ ಪ್ರತೇಕ ಹಣ ಮೀಸಲು, ಉದ್ಯೋಗ ಸೃಷ್ಠಿ ಸರಕಾರಿ ಇಲಾಖೆಗಳ ಅಧಿಕಾರಿಗಳ ಸಂಪರ್ಕ ದೊರಕಿ ಅಭಿವೃದ್ಧಿಯ ವೇಗ ಹೆಚ್ಚಾಗುತ್ತದೆ ಆದ್ದರಿಂದ ಗಂಗಾವತಿಯ ರಾಜಕಾರಣಿಗಳು ಜಿಲ್ಲಾ ಕೇಂದ್ರವಾಗಲು ಜನತೆಯೊಂದಿಗೆ ಹೋರಾಟ ನಡೆಸಬೇಕು. ಹಂಪಿ ಅಭಿವೃದ್ಧಿ ಪ್ರಾಧಿಕಾರದವರು ಹಂಪಿ ಭಾಗದ 14 ಗ್ರಾಮಗಳಲ್ಲಿ ಎಲ್ಲಾ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಿ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಗ್ರೀನ್ ಝೋನ್ ನಿಯಮದಡಿ ಮಾಡಿ ಅಭಿವೃದ್ಧಿಗೆ ಭಾರಿ ಪೆಟ್ಟು ನೀಡಿದ್ದಾರೆ. ಆದ್ದರಿಂದ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಭಾಗವನ್ನು ಪ್ರತೇಕ ಮಾಡಿ ಆನೆಗೊಂದಿ ಕಿಷ್ಕಿಂಧಾ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮೂಲಕ ಗಂಗಾವತಿ ತಾಲೂಕಿನ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಬೇಕೆಂದು ಮನವಿ ಸಲ್ಲಿಸಿದರು.
ನಿವೃತ್ತ ಪ್ರಾಧ್ಯಾಪಕ ಬಿ.ಸಿ.ಐಗೋಳ್, ಡಾ| ಬದ್ರಿ ಪ್ರಸಾದ, ಪ್ರಾಧ್ಯಾಪಕ ಶರಣಬಸಪ್ಪ ಬಿಳಿಎಲಿ, ಮುಖಂಡ ಸಂತೋಷ ಕೆಲೋಜಿ ತಾಲೂಕಿನ ಸಮಗ್ರ ಅಭಿವೃದ್ಧಿ ಕುರಿತು ಮಾತನಾಡಿದರು. ಡಾ|ಅಮರೇಶ ಪಾಟೀಲ್, ಪ್ರತ್ರಕರ್ತ ಪ್ರಸನ್ನದೇಸಾಯಿ, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಚನ್ನಪ್ಪ ಮಳಗಿ ಸೇರಿ ಅನೇಕರಿದ್ದರು.
ಸಮ್ಮೇಳನದಲ್ಲಿ ಬಿಜೆಪಿ ಸರಕಾರ ಪ್ರಸ್ತಾಪ ಆಕ್ರೋಶ..
8 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರವಾಸೋದ್ಯಮ ಸಾಧ್ಯತೆ ಮತ್ತು ಅಭಿವೃದ್ದಿ ವಿಷಯದ ಕುರಿತು ಮಾತನಾಡಬೇಕಿದ್ದ ಪುರಾತತ್ವ ಇಲಾಖೆಯ ಅಧಿಕಾರಿ ಆರ್.ಮಂಜುನಾಥ ಅನುಪಸ್ಥಿತಿಯಲ್ಲಿ ಬಿಜೆಪಿ ಮುಖಂಡ ಸಂತೋಷ ಕೆಲೋಜಿ ಮಾತನಾಡುವ ಸಂದರ್ಭದಲ್ಲಿ ಕಿಷ್ಕಿಂದಾ ಅಂಜನಾದ್ರಿ ಅಭಿವೃದ್ದಿ ಬಿಜೆಪಿ ಸರಕಾರ ಮಾಡಿದೆ. ಪ್ರಧಾನಿ ಮೋದಿ ಪತ್ನಿ ಜಶೋಧಾ ಬೆನ್ ಬಂದು ಹೋದ ನಂತರ ಪ್ರಗತಿಯ ವೇಗ ಹೆಚ್ಚಿದೆ. ಸಚಿವ ಬಿ.ಶ್ರೀರಾಮುಲು ಪುರಾತನ ಇತಿಹಾಸ ಪ್ರಸಿದ್ಧ ಪಂಪಾಸರೋವರದ ಶ್ರೀ ವಿಜಯಲಕ್ಷ್ಮೀ ಹಾಗೂ ಮೇಗೋಟದ ವಾಲೀಕಿಲ್ಲಾ ಆದಿಶಕ್ತಿ ದೇಗುಲಗಳನ್ನು ಜಿರ್ಣೋದ್ಧಾರ ಮಾಡುತ್ತಿದ್ದಾರೆ. ಇದುವರೆಗೂ ಆಡಳಿತ ನಡೆಸಿದ ಸರಕಾರಗಳು ಮತ್ತು ಶಾಸಕ ಸಂಸದರು ಮಾಡದೇ ಇರುವ ಅಭಿವೃದ್ಧಿ ಕಾರ್ಯಗಳನ್ನು ಭಾರತೀಯ ಜನತಾ ಪಾರ್ಟಿ ಸರಕಾರ ಮಾಡಿದೆ ಎಂದರು. ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ಪಾರ್ಟಿಗಳ ಪ್ರಚಾರ ಮಾಡುವುದು ಸರಿಯಲ್ಲ. ಕಳೆದೆರಡು ದಿನಗಳಿಂದ ಶಾಸಕ ಪರಣ್ಣ ಮುನವಳ್ಳಿ ಸಮ್ಮೇಳನದಲ್ಲಿದ್ದರೂ ರಾಜಕೀಯ ಮಾತನಾಡಿಲ್ಲ. ಕೆಲೋಜಿಯವರು ಯಾಕೆ ಮಾತನಾಡಬೇಕಿತ್ತು ಎಂಬ ಮಾತುಗಳು ಕೇಳಿ ಬಂದವು.