Advertisement

30ಕ್ಕೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

10:32 AM Jul 27, 2019 | Suhan S |

ದೊಡ್ಡಬಳ್ಳಾಪುರ: ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ 30ರಂದು ಘಾಟಿ ಕ್ಷೇತ್ರದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಚಿತ್ರ ಸಾಹಿತಿ ಡಾ. ವಿ.ನಾಗೇಂದ್ರ ಪ್ರಸಾದ್‌ರನ್ನು ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷೆ ಪ್ರಮೀಳಾ ಮಹದೇವ್‌ ತಿಳಿಸಿದರು. ಆದರೆ ಅಧ್ಯಕ್ಷರ ಈ ತರಾತುರಿಯ ನಿರ್ಧಾರಕ್ಕೆ ಸಾಹಿತ್ಯಾ ಸಕ್ತರಿಂದ ಟೀಕೆಗಳು ವ್ಯಕ್ತವಾಗಿವೆ.

Advertisement

ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನೆ, 2 ವಿಚಾರಗೋಷ್ಠಿಗಳು, ಕವಿಗೋಷ್ಠಿ ಮತ್ತು ಸಮಾರೋಪ ಕಾರ್ಯಕ್ರಮವನ್ನು ಆಯೋಜಿಸಲು ಸಿದ್ಧತೆ ಮಾಡಿ ಕೊಳ್ಳಲಾಗಿದೆ. ಚಿತ್ರನಟಿ ಗಿರಿಜಾ ಲೋಕೇಶ್‌ ಸಮ್ಮೇಳನ ಉದ್ಘಾಟಿಸಲಿದ್ದಾರೆ ಎಂದರು.

ಸಹಕಾರ ನೀಡಲು ಮನವಿ: ಸಮ್ಮೇಳನಕ್ಕೆ ಸುಮಾರು 2.5 ಲಕ್ಷ ರೂ.ಗಳ ಅಂದಾಜು ವೆಚ್ಚ ನಿರೀಕ್ಷಿಸಲಾಗಿದೆ. ಪರಿಷತ್ತಿನಿಂದ ದೊರೆಯುವ ಅನುದಾನ ಹೊರತು ಪಡಿಸಿ, ಸರ್ಕಾರಿ ಇಲಾಖೆ ಹಾಗೂ ದಾನಿಗಳಿಂದ ನೆರವು ನಿರೀಕ್ಷಿಸಲಾಗಿದೆ ಎಂದು ಮನವಿ ಮಾಡಿದರು. ಅಧ್ಯಕ್ಷರ ಮನವಿಗೆ ಸ್ಪಂದಿಸಿದ ತಾಪಂ ಅಧ್ಯಕ್ಷ ಡಿ.ಸಿ. ಶಶಿಧರ್‌, ತಾಪಂನಿಂದ ಸಮ್ಮೇಳನಕ್ಕಾಗಿ 50 ಸಾವಿರ ರೂ.ಗಳ ಆರ್ಥಿಕ ನೆರವಿನ ಭರವಸೆ ನೀಡಿದರು.

ನಿಯಮಾವಳಿ ಪಾಲಿಸಿಲ್ಲ: ಪೂರ್ವಭಾವಿ ಸಭೆಯಲ್ಲಿ ವ್ಯಕ್ತವಾ ಗುವ ಅಭಿಪ್ರಾಯಗಳನ್ನು ಆಧರಿಸಿ ಪರಿಷತ್ತಿನ ಕಾರ್ಯಕಾರಿ ಸಮಿತಿ ಅಧ್ಯಕ್ಷರ ಆಯ್ಕೆಯನ್ನು ಅಂತಿಮ ಗೊಳಿಸಬೇಕು. ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಪರಿಷತ್ತು ನಿಯಮಾವಳಿ ಪಾಲಿಸಿಲ್ಲ ಎನ್ನುವ ಟೀಕೆಗಳು ಸಭೆಯಲ್ಲಿ ವ್ಯಕ್ತವಾದವು. ಸಮ್ಮೇಳನಾಧ್ಯಕ್ಷರಾಗಿ ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್‌ ಆಯ್ಕೆ ಕುರಿತು ಕಸಾಪ ಮಾಜಿ ಅಧ್ಯಕ್ಷ ಪ್ರೊ. ಚಂದ್ರಪ್ಪ, ಎಂ.ಇ. ಖಲೀಲುಲ್ಲಾಖಾನ್‌, ನಗರಸಭೆ ಮಾಜಿ ಅಧ್ಯಕ್ಷ ತ.ನ. ಪ್ರಭುದೇವ್‌ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದರು. ಜತಗೆ ಸಮ್ಮೇಳನಾಧ್ಯಕ್ಷತೆಗೆ ತಾಲೂಕಿನ ಸಾಹಿತಿ, ಕನ್ನಡಪರ ಹೋರಾಟಗರರ ಹೆಸರು ಪರಿಗಣಿಸಬಹುದಾಗಿತ್ತು. ಪರಿಷತ್ತು ಇಡೀ ಸಮ್ಮೇಳನ ರೂಪರೇಷೆ, ಅಧ್ಯ ಕ್ಷರು, ವ್ಯವಸ್ಥೆ ಎಲ್ಲವನ್ನೂ ನಿರ್ಧರಿಸಿ ನೆಪ ಮಾತ್ರಕ್ಕೆ ಸಭೆ ನಡೆಸಿದಂತಿದೆ ಎಂದು ಆರೋಪಿಸಿದರು.

Advertisement

ಅನುದಾನ ಸಿಗುವುದಿಲ್ಲ: ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ ನಾಯಕ್‌, ಕರವೇ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ, ಸಮ್ಮೇಳನವನ್ನು ತರಾತುರಿಯಲ್ಲಿ ಮಾಡುವುದಲ್ಲ. ವ್ಯವಸ್ಥಿತವಾಗಿ ಆಯೋಜನೆಯಾಗಬೇಕು ಎಂದು ಅಭಿಪ್ರಾಯ ವ್ಯಕ್ತವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಪ್ರಮೀಳಾ, ಈ ತಿಂಗಳ ಕೊನೆಯಲ್ಲಿ ಸಮ್ಮೇಳನ ಮಾಡದಿದ್ದರೆ ರಾಜ್ಯ ಕಸಾಪದಿಂದ ಅನುದಾನ ಸಿಗುವುದಿಲ್ಲ. ಹೀಗಾಗಿ ತರಾತುರಿಯ ನಿರ್ಧಾರ ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಅನುದಾನ ನೆಚ್ಚಿಕೊಳ್ಳದೆ ಸಮ್ಮೇಳನ ನಡೆಸುವುದಾದರೆ, ಮತ್ತೂಂದು ದಿನಾಂಕದಲ್ಲಿ ಶಿಷ್ಠಾಚಾರಕ್ಕೆ ಬದ್ಧವಾಗಿ ಆಯೋಜಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ಕಸಾಪ ವಿರುದ್ಧ ಆರೋಪ: ತಾಲೂಕಿನಲ್ಲಿ ನಡೆಯುತ್ತಿರುವ ಸಾಹಿತ್ಯ ಪರಿಷತ್‌ ಕಾರ್ಯಕ್ರಮಗಳು, ಸಮ್ಮೇಳನ ಇತ್ಯಾದಿಗಳಿಗೆ ಜಿಲ್ಲಾ ಕಸಾಪದಿಂದ ಸರಿಯಾಗಿ ಅನುದಾನ ದೊರೆಯುತ್ತಿಲ್ಲ ಎಂಬ ಆರೋಪವಿದೆ. ಹಿಂದಿನ ಸಮ್ಮೇಳನಗಳು, ದತ್ತಿ ಕಾರ್ಯಕ್ರಮಗಳಿಗೂ ಜಿಲ್ಲಾಧ್ಯಕ್ಷರು ಅನುದಾನವನ್ನು ಸರಿಯಾಗಿ ನೀಡಿಲ್ಲ ಎಂಬ ವಿಚಾರ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು.

ಸಮ್ಮೇಳನ ಆಯೋಜನೆ, ಅಧ್ಯಕ್ಷರ ಆಯ್ಕೆ ಇತ್ಯಾದಿ ವಿಚಾರಗಳಲ್ಲಿ ಎಲ್ಲರ ಅಭಿಪ್ರಾಯ ಮುಖ್ಯ. ಕಸಾಪ ಆಜೀವ ಸದಸ್ಯರಿಗೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ದೊರೆಯುತ್ತಿಲ್ಲ ಎಂಬುದರ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಸದಸ್ಯರಿಗೇ ಮಾಹಿತಿ ದೊರೆಯದೇ ಹೋದರೆ ಕಾರ್ಯಕ್ರಮಗಳ ಉದ್ದೇಶ ಈಡೇರಲ್ಲ ಎನ್ನುವ ಅಭಿಪ್ರಾಯಗಳು ಕೇಳಿ ಬಂದವು.

ತಾಪಂ ಇಒ ದ್ಯಾಮಪ್ಪ, ಬಿಇಒ ಬೈಯಪ್ಪರೆಡ್ಡಿ, ಉಪ ತಹಶೀಲ್ದಾರ್‌ ವಿಜಯಕುಮಾರಿ, ಸಮಾಜ ಕಲ್ಯಾಣ ಇಲಾಖಅೆ ಅಧಿಕಾರಿ ಸೋಮಶೇಖರ್‌, ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್‌, ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ ನಾಯಕ್‌, ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ಕಸಾಪ ಮಾಜಿ ಅಧ್ಯಕ್ಷ ಪ್ರೊ.ಕೆ.ಆರ್‌.ರವಿಕಿರಣ್‌, ಪ್ರೊ.ಚಂದ್ರಪ್ಪ, ಎಂ.ಇ. ಖಲೀಲುಲ್ಲಾಖಾನ್‌, ಮುಖಂಡರಾದ ರಾಜು ಸಣ್ಣಕ್ಕಿ, ಜ್ಯೋತಿ ಕುಮಾರ್‌, ಎನ್‌.ಸಿ.ಲಕ್ಷ್ಮೀ, ಹನುಮಂತರಾಯಪ್ಪ, ತೆರದಾಳು ಶ್ರೀನಿವಾಸ್‌, ನ.ಮಹದೇವ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next