Advertisement
ಇದರಿಂದ ಗಡಿ ಜಿಲ್ಲೆ ಬೆಳಗಾವಿ ಸಹ ಹೊರತಾಗಿಲ್ಲ. ಸುಮಾರು 55 ಲಕ್ಷ ಜನಸಂಖ್ಯೆ ಹೊಂದಿರುವ ರಾಜ್ಯದ ಅತೀ ದೊಡ್ಡ ಜಿಲ್ಲೆ ಬೆಳಗಾವಿಯಲ್ಲಿ ಜನರಿಗೆ ಆಡಳಿತಾತ್ಮಕವಾಗಿ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಐದು ಹೊಸ ತಾಲೂಕುಗಳ ಘೋಷಣೆ ಮಾಡಿದೆ. ಇದರಿಂದ 10 ತಾಲೂಕುಗಳಿದ್ದ ಸಂಖ್ಯೆ ಈಗ 15 ಕ್ಕೆ ಏರಿಕೆಯಾಗಿದೆ. ಆದರೆ ಎಲ್ಲಿಯೂ ಪೂರ್ಣ ಪ್ರಮಾಣದ ತಾಲೂಕು ರಚನೆಯಾಗಿಲ್ಲ.
Related Articles
Advertisement
ಕಾಗವಾಡ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಕಾಗವಾಡ ತಾಲೂಕು ಅಥಣಿಯಿಂದ ಪ್ರತ್ಯೇಕಗೊಂಡಿದೆ. ನಾಲ್ಕು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಈ ತಾಲೂಕಿನಲ್ಲಿ ಇಲ್ಲಗಳ ದರ್ಬಾರು ಜೋರಾಗಿದೆ. ಸಾರ್ವಜನಿಕರಿಗೆ ಮುಖ್ಯವಾಗಿ ಬೇಕಾಗಿರುವ ಉಪ ನೋಂದಣಿ ಕಚೇರಿ ಸ್ಥಾಪನೆಗೆ ಬಹಳ ಬೇಡಿಕೆ ಇದೆ. ಮಿನಿ ವಿಧಾನಸೌಧದ ನಿರ್ಮಾಣ ಆಸೆ ಇನ್ನೂ ಈಡೇರಿಲ್ಲ. ತಾಲೂಕು ಕೇಂದ್ರ ಸ್ಥಾನಮಾನ ಪಡೆದಿದ್ದರೂ ಮೂಲಭೂತ ಸೌಲಭ್ಯಗಳ ಕೊರತೆ ಎದ್ದುಕಾಣುತ್ತಿದೆ. ಕಾಗವಾಡ ವ್ಯಾಪ್ತಿಯಲ್ಲಿ ಬರುವ 40 ಗ್ರಾಮಗಳು ಇನ್ನೂ ಅಥಣಿ ತಾಲೂಕಿನಲ್ಲೇ ಮುಂದುವರಿದಿರುವುದರಿಂದ ಸಾಕಷ್ಟು ಗೊಂದಲ ಇದೆ. ಹೀಗಾಗಿ ಇದನ್ನು ಮಿನಿ ತಾಲೂಕು ಕಾಗವಾಡ ಎಂದೇ ಕರೆಯಲಾಗುತ್ತಿದೆ.
ಕಿತ್ತೂರು ತಾಲೂಕು ಕೇಂದ್ರವಾಗಿ ಏಳು ವರ್ಷ ಸಂದಿವೆ. ತಹಶೀಲ್ದಾರ ಕಚೇರಿ ಆರಂಭವಾಗಿ ಐದು ವರ್ಷ ಕಳೆದಿದೆ. ಇದಲ್ಲದೆ ಉಪ ನೋಂದಣಿ ಕಚೇರಿ, ಲೋಕೋಪಯೋಗಿ ಇಲಾಖೆ, ತಾ.ಪಂ. ಕಾರ್ಯನಿರ್ವಹಿಸುತ್ತಿವೆ. ಮುಖ್ಯವಾಗಿ ಇನ್ನೂ ಹಲವು ಕಚೇರಿಗಳು ಬರಬೇಕಿರುವುದರಿಂದ ಕಿತ್ತೂರು ತಾಲೂಕಿನ ಜನರಿಗೆ ಹಳೆಯ ತಾಲೂಕು ಕೇಂದ್ರ ಬೈಲಹೊಂಗಲಕ್ಕೆ ಅಲೆದಾಡುವದು ಇನ್ನೂ ತಪ್ಪಿಲ್ಲ. ತಾಲೂಕಿಗೆ ಮುಕುಟಪ್ರಾಯವಾಗಿರುವ ಮಿನಿ ವಿಧಾನಸೌಧವನ್ನು 10 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ಇದರ ಉದ್ಘಾಟನೆ ಇದುವರೆಗೆ ನೆರವೇರಿಲ್ಲ. ಸುಮಾರು 9 ಕೋಟಿ ರೂ ವೆಚ್ಚದಲ್ಲಿ ತಾಲೂಕಾ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ. ಕೃಷಿ ಇಲಾಖೆ ಸೇರಿದಂತೆ ಇದುವರೆಗೆ ಒಟ್ಟು 13 ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ.
ನಿಪ್ಪಾಣಿ ಮಹಾರಾಷ್ಟ್ರದ ಜೊತೆ ನಿಕಟ ಸಂಪರ್ಕ ಹೊಂದಿರುವ ನಿಪ್ಪಾಣಿ ಇನ್ನೂ ಪೂರ್ಣಪ್ರಮಾಣದ ತಾಲೂಕು ಕೇಂದ್ರ ಎಂದು ಗುರುತಿಸಿಕೊಂಡಿಲ್ಲ. ತಾಲೂಕು ಕೇಂದ್ರವಾಗಿ ನಾಲ್ಕು ವರ್ಷ ಕಳೆದಿದ್ದರೂ ಪೂರ್ಣ ಪ್ರಮಾಣದಲ್ಲಿ ಕಚೇರಿಗಳು ಬಂದಿಲ್ಲ. ನಮ್ಮದು ಚಿಕ್ಕೋಡಿಯೇ ಅಥವಾ ನಿಪ್ಪಾಣಿ ತಾಲೂಕೇ ಎಂಬ ಗೊಂದಲ ಜನರಲ್ಲಿ ಇನ್ನೂ ಇದೆ. ಸರ್ಕಾರದ ಕೆಲವು ಕಡತಗಳಲ್ಲಿ ಮಾತ್ರ ನಿಪ್ಪಾಣಿ ತಾಲೂಕು ಎಂದು ನಮೂದಿಸುತ್ತಿರುವದರಿಂದ ಈ ಗೊಂದಲ ಮೂಡಿದೆ. ಮಿನಿ ವಿಧಾನಸೌಧ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಬಲವಾಗಿದೆ. ಇದರ ಜೊತೆಗೆ ಲೋಕೋಪಯೋಗಿ, ಸಮಾಜ ಕಲ್ಯಾಣ ಸೇರಿದಂತೆ ಪ್ರಮುಖ ಕಚೇರಿಗಳು ಶೀಘ್ರವೇ ಬರಬೇಕು ಎಂಬುದು ಜನರ ಒತ್ತಾಯ. ನಿಪ್ಪಾಣಿಯವರೇ ಆದ ಸಚಿವೆ ಶಶಿಕಲಾ ಜೊಲ್ಲೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಿದ ಫಲವಾಗಿ ಎ ಪಿ ಎಂ ಸಿ ಆವರಣದಲ್ಲಿ ಮಿನಿ ವಿಧಾನಸೌಧಕ್ಕೆ ಐದು ಎಕರೆ ಜಾಗ ಕಲ್ಪಿಸಲಾಗಿದೆ ಎಂಬುದು ಅಧಿಕಾರಿಗಳ ಹೇಳಿಕೆ.
ಯರಗಟ್ಟಿ 3 ವರ್ಷಗಳ ಹಿಂದೆ ಸವದತ್ತಿಯಿಂದ ಬೇರ್ಪಟ್ಟು ಜಿಲ್ಲೆಯ 15 ನೇ ತಾಲೂಕು ಸ್ಥಾನಮಾನ ಪಡೆದ ಯರಗಟ್ಟಿ ಬಹುತೇಕ ಕಚೇರಿಗಳಿಲ್ಲದೆ ಅನಾಥವಾಗಿದೆ. ತಹಶೀಲ್ದಾರ ಕಚೇರಿ ಬಿಟ್ಟು ಬೇರೆ ಯಾವುದೇ ಕಚೇರಿ ಇಲ್ಲಿಗೆ ಬಂದಿಲ್ಲ. ಜನರ ಪರದಾಟ ತಪ್ಪಿಲ್ಲ. ಹಳ್ಳಿಗಳ ಸೇರ್ಪಡೆ ವಿಷಯದಲ್ಲಿ ಅಸಮಾಧಾನ ಇದೆ. ಅನುದಾನದ ಕೊರತೆ ಬಹಳ ಕಾಡುತ್ತಿದೆ. ಹೀಗಾಗಿ ತಾಲೂಕಿನ ಜನರು ಆದಾಯ ಪ್ರಮಾಣ ಪತ್ರ ಸೇರಿದಂತೆ ಎಲ್ಲ ಮುಖ್ಯ ದಾಖಲೆ ಪತ್ರಕ್ಕಾಗಿ ಸವದತ್ತಿಗೆ ಅಲೆದಾಡಬೇಕಾಗಿದೆ.
ಮೂಡಲಗಿ ಪೂರ್ಣ ಪ್ರಮಾಣದ ತಾಲೂಕು ಕೇಂದ್ರಕ್ಕೆ ಎಲ್ಲ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಸುಮಾರು 15 ರಿಂದ 20 ಕೋಟಿ ರೂ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸರ್ಕಾರ ಇದಕ್ಕೆ ಅನುಮೋದನೆ ನೀಡಿದರೆ ಎಲ್ಲ ಇಲಾಖೆಗಳು ಒಂದೇ ಸೂರಿನಲ್ಲಿ ಬರಲಿವೆ. ಮುಖ್ಯವಾಗಿ ತಾಲೂಕಿಗೆ ಉಪ ನೋಂದಣಿ ಕಚೇರಿ ಮಂಜೂರಾಗಿದ್ದು ಇಷ್ಟರಲ್ಲೇ ಸರ್ಕಾರ ಆದೇಶ ಹೊರಡಿಸಲಿದೆ. ಕೋವಿಡ್ ಕಾರಣದಿಂದ ಕೆಲವು ಕಚೇರಿಗಳ ಅನುಮೋದನೆಗೆ ವಿಳಂಬವಾಗಿದೆ. –ಬಾಲಚಂದ್ರ ಜಾರಕಿಹೊಳಿ, ಅರಭಾವಿ ಶಾಸಕ
ಈಗಾಗಲೇ ಕಿತ್ತೂರು ಬಹುತೇಕ ಪೂರ್ಣ ಪ್ರಮಾಣದ ತಾಲೂಕು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಮಿನಿ ವಿಧಾನಸೌಧ ಕಟ್ಟಡ ಪೂರ್ಣಗೊಂಡಿದೆ. ಇದೇ ಕಟ್ಟಡದಲ್ಲಿ ಇನ್ನೊಂದು ಮಹಡಿ ಕಟ್ಟಲು ನಿರ್ಧರಿಸಲಾಗಿದೆ. ಇದಲ್ಲದೆ ಆವರಣದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಒಟ್ಟು ಮೂರು ಕೋಟಿ ರೂ ಗಳ ಹೊಸ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. 100 ಹಾಸಿಗೆಗಳ ತಾಲೂಕಾ ಆರೋಗ್ಯ ಕೇಂದ್ರಕ್ಕೆ 17 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ತಾಲೂಕಿಗೆ ವಿವಿಧ ಮೂಲಗಳಿಂದ ಅಭಿವೃದ್ಧಿಗಾಗಿ 1700 ಕೋಟಿ ರೂ. ಬಿಡುಗಡೆಯಾಗಿದೆ. –ಮಹಾಂತೇಶ ದೊಡ್ಡಗೌಡರ, ಕಿತ್ತೂರು ಶಾಸಕರು
-ಕೇಶವ ಆದಿ