Advertisement

ತಾಲೂಕಿನಲ್ಲಿ ಮತ್ತೆ ಕಾಡಾನೆಗಳ ದಾಳಿ

12:51 PM Feb 25, 2017 | Team Udayavani |

ನಂಜನಗೂಡು: ತಾಲೂಕಿನ ಹೊಸವೀಡು ಗ್ರಾಮದಲ್ಲಿ ಮತ್ತೆ ಕಾಡಾನೆಗಳು ಕಾಣಿಸಿಕೊಂಡಿವೆ. ಹೊಸವೀಡು ಗ್ರಾಮದ ಮಹೇಶ ಅವರ ಜಮೀನಿನಲ್ಲಿ ಆನೆಗಳು ರಾತ್ರಿ 10ರ ಸಮಯದಲ್ಲಿ ಕಾಣಿಸಿಕೊಂಡಿವೆ. ಪಂಪ್‌ಸೆಟ್‌ ಮನೆಯಲ್ಲಿ ಮಲಗಲು ಮಹೇಶ್‌ ತೆರಳಿದ್ದಾಗ ಆನೆಗಳು ತೋಟದಲ್ಲಿ ರಾಶಿ ಹಾಕಲಾಗಿದ್ದ ಜೋಳದ ಗುಡ್ಡೆಯನ್ನು ಮೇಯುತ್ತಿದ್ದವು.

Advertisement

ಇದನ್ನು ಗಮನಿಸಿದ ಮಹೇಶ ಕೂಗಿದಾಗ ಸಲಗವೊಂದು ತನ್ನನ್ನು ಅಟ್ಟಿಸಿಕೊಂಡು ಬಂತು ಎಂದು ಮಹೇಶ್‌ ಹೇಳಿದ್ದಾರೆ. ಅಲ್ಲಿಂದ ಓಡಿ ಬಂದರೂ ಸಲಗ ಅಟ್ಟಿಕೊಂಡು ಬಂದಿದೆ. ತಕ್ಷಣವೇ ಮೈ ಮೇಲಿದ್ದ ಟವಲ್‌, ದುಪ್ಪಟವನ್ನು ರಸ್ತೆ ಮಧ್ಯೆಯೇ ಎಸೆದಾಗ ಅಲ್ಲಿಗೆ ಬಂದ ಆನೆ ಅವುಗಳನ್ನು ತುಳಿದು ಕೋಪ ತೀರಿಸಿಕೊಂಡಿದೆ.

ಗ್ರಾಮಕ್ಕೆ ಮರಳಿದ ಮಹೇಶ್‌ ಗ್ರಾಮಸ್ಥರೊಂದಿಗೆ ಸ್ಥಳಕ್ಕೆ ತೆರಳಿದಾಗ ಅಲ್ಲಿಂದ ಆನೆಗಳು ತೆರಳಿದ್ದವು. ಆದರೆ ಕಾಡಾನೆಗಳ ಹಿಂಡು ಅಲ್ಲಿ ಶೇಖರಿಸಿಟ್ಟಿದ್ದ ಸಾವಿರಾರು ರೂಪಾಯಿ ಬೆಲೆ ಬಾಳುವ ಜೋಳದ ಗುಡ್ಡೆಗಳನ್ನು ತಿಂದು ತುಳಿದು ಹಾಕಿದ್ದವು. ಅಲ್ಲದೆ 10ಕ್ಕೂ ಹೆಚ್ಚು ಸೋಲಾರ್‌ ಕಲ್ಲುಂಬಗಳನ್ನು ಮುರಿದು ಹಾಕಿದ್ದವು.

ಅಲ್ಲದೆ ಫ‌ಸಲು ಬಿಟ್ಟಿರುವ ಮಾವಿನ ಮರಗಳನ್ನು ನಾಶ ಮಾಡಿವೆ ಎಂದು ಮಹೇಶ್‌ ತಿಳಿಸಿದರು. ಅರಣ್ಯ ಅಧಿಕಾರಿಗಳು ಅಥವಾ ಸರ್ಕಾರ ನಮಗೆ ನೀಡುವ ಪುಡಿಗಾಸಿನ ಪರಿಹಾರ ಬೇಡ. ಅದರ ಬದಲಿಗೆ ಜಮೀನಿಗೆ ಆನೆಗಳು ಬರದಂತೆ ನೋಡಿಕೊಳ್ಳಲಿ ಎಂದು ಹೊಸವೀಡು ಗ್ರಾಮಸ್ಥರು ಒತ್ತಾಯಿಸಿದರು. ಮೂರು ತಿಂಗಳ ಹಿಂದೇ ಇದೇ ಜಮೀನಿಗೆ ಆನೆಗಳು ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next