Advertisement

ಮದಕರಿ ಚರ್ಚೆ ಸಾಕು…ಇಲ್ಲಿಗೆ ತಿಳಿಯಾಗಲಿ- ಸುದೀಪ್‌ ಮನವಿ 

03:54 PM Oct 11, 2018 | |

ಕನ್ನಡ ಚಿತ್ರರಂಗ ಮಾತ್ರವಲ್ಲ, ಪರಭಾಷೆಯ ಚಿತ್ರರಂಗದಲ್ಲೂ ಈಗ ಚಿತ್ರದುರ್ಗದ “ಮದಕರಿ ನಾಯಕ’ನದ್ದೇ ಸದ್ದು!

Advertisement

– ಹೌದು, “ಮದಕರಿ ನಾಯಕ’ ಚಿತ್ರ ಶುರುವಿಗೆ ಮುನ್ನ ಸಾಕಷ್ಟು ಚರ್ಚೆ, ವಿವಾದ, ಗೊಂದಲದ ಬಗ್ಗೆ ಎಲ್ಲರಿಗೂ ಗೊತ್ತು.ಆ ಕುರಿತು ನಟ ಸುದೀಪ್‌ ಕಳೆದ ಬಾರಿ ಟ್ವಿಟರ್‌ನಲ್ಲೊಂದು ಪತ್ರ ಬರೆದಿದ್ದರು. ಆದರೆ, “ಮದಕರಿ ನಾಯಕ’ ಸಿನಿಮಾ ಯಾರು ಮಾಡಬೇಕೆಂಬ ಚರ್ಚೆ ಹೆಚ್ಚಾಗಿದ್ದು ಸುಳ್ಳಲ್ಲ. ಈ ಕುರಿತ ಚರ್ಚೆ ದೊಡ್ಡದಾಗುತ್ತಾ ಹೋಗಿದೆ. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದ ಸುದೀಪ್‌, ಬುಧವಾರ ಪುನಃ ಟ್ವೀಟ್‌ ಮೂಲಕ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ “ಮದಕರಿ ನಾಯಕ’ ಸಿನಿಮಾ ಕುರಿತಂತೆ, ಚರ್ಚೆ ಮುಂದುವರೆಸುವುದು ಬೇಡ’ ಎಂಬ ಮನವಿ ಮಾಡಿದ್ದಾರೆ. ಸುದೀಪ್‌ ಬರೆದಿರುವ ಪತ್ರದ ಸಾರಾಂಶ ಇಲ್ಲಿದೆ.

“ಈಗ ಚಾನೆಲ್ಲುಗಳು ಹಾಗೂ ವೇದಿಕೆಗಳಲ್ಲಿ ಚರ್ಚೆಯ ವಿಷಯವಾಗಿರುವ ವಸ್ತು, ಚರ್ಚೆ ಮಾಡುವುದಕ್ಕಾಗಿಯೇ ಹುಟ್ಟಿಕೊಂಡಿರುವಂತಿದೆ. ವಿಷಯ ಸರಳವಾಗಿದೆ… ರಾಕ್‌ಲೈನ್‌ ವೆಂಕಟೇಶ್‌ ಅವರು ತಮಗೆ ಇಷ್ಟವಿರುವ ಸಿನಿಮಾ ಮಾಡುತ್ತಿದ್ದಾರೆ. ನಾನು ಇಷ್ಟಪಟ್ಟು ಕನಸು ಕಂಡು ಮಾಡಬೇಕೆಂದಿರುವ ಸಿನಿಮಾವನ್ನು ನಾನು ಮುಂದುವರೆಸುತ್ತೇನೆ. ಸ್ವಾಮೀಜಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಷಯ ಇಲ್ಲಿಗೆ ಮುಗಿಯಬೇಕು. ಮುಗಿಯದ ಚರ್ಚೆಗಳಿಂದ ಏನೂ ಪ್ರಯೋಜನವಿಲ್ಲ. ಎಲ್ಲರ ಅಭಿಪ್ರಾಯ, ಆಸೆಗಳು ಹಾಗೂ ಚಿಂತನೆಗಳನ್ನು ಗೌರವಿಸುತ್ತ ಈ ವಿಷಯದ ಬಗೆಗಿನ ಚರ್ಚೆ ಇಲ್ಲಿಗೆ ತಿಳಿಯಾಗಲಿ.ಕ್ರಿಯಾಶೀಲ ಕೆಲಸಗಳಲ್ಲಿ ಎಂದೂ ಜಾತಿಯ ಯೋಚನೆಗಳು ಬರುವುದಿಲ್ಲ, ಬರಕೂಡದು. ಸ್ವಾಮೀಜಿಗಳು, ರಾಕ್‌ಲೈನ್‌ ವೆಂಕಟೇಶ್‌ ಅವರು ಹಾಗು ಚಾನೆಲ್‌ ಅವರ ಅಭಿಪ್ರಾಯಗಳನ್ನು ಗೌರವಿಸುತ್ತೇನೆ. ಆದರೆ, ಇದು ನನಗೆ ಚರ್ಚೆಯ ವಿಷಯವೇ ಅಲ್ಲ. ನನ್ನ ಹಿಂದಿನ ಪತ್ರದಲ್ಲೂ ಇದನ್ನು ಸ್ಪಷ್ಟಪಡಿಸಿದ್ದೇನೆ. ಸಿನಿಮಾ ಮಾಡುವುದೇ ಪ್ರೇಕ್ಷಕರಿಗಾಗಿ. ಎರಡೂ ಸಿನಿಮಾಗಳನ್ನು ಅವರಿಗೆ ಕೊಡುಗೆ ಕೊಡೋಣ. ಎರಡೂ ಚಿತ್ರಗಳು ಚರಿತ್ರೆಯ ಆ ಮಹಾಪುರುಷನಿಗೆ ಗೌರವ ಸಲ್ಲಿಸಲಿ. ಈಗ ನಡೆಯುತ್ತಿರುವ ಚರ್ಚೆಗಳಿಗಿಂತ ಎರಡು ಚಿತ್ರಗಳನ್ನು ಮಾಡಿ ಅವರಿಗೆ ಗೌರವಿಸೋಣ. ಗಮನ ಹರಿಸಲು ಇದಕ್ಕಿಂತ ಮುಖ್ಯವಾಗಿ ಸಾಮಾನ್ಯ ಜನರ ಸಮಸ್ಯೆಗಳು ಬಹಳಷ್ಟಿವೆ. ಇದಕ್ಕೆ ಹರಿಬಿಟ್ಟ ಶಕ್ತಿ ಹಾಗು ಶ್ರಮ ಆ ಸಮಸ್ಯೆಗಳಿಗೆ ವ್ಯಯಿಸಿದರೆ, ಎಲ್ಲರ ಜೀವನವು ಸ್ವಲ್ಪವಾದರೂ ಹಸನಾದೀತು. ಯೋಚನೆಗಳು ಯಾವಾಗಲೂ ಜನಪರವಾಗಿರಲೆಂದು ನನ್ನ ಈ ಎರಡು ಮಾತುಗಳೇ ಹೊರತು ಯಾರ ಮನಸನ್ನು ನೋಯಿಸಲು ಅಲ್ಲ.
ಪ್ರೀತಿಯಿಂದ
ನಿಮ್ಮವ
ಕಿಚ್ಚ.

ಅದೇನೆ ಇರಲಿ, ಸುದೀಪ್‌ “ಮದಕರಿ ನಾಯಕ’ ಚಿತ್ರದ ಕುರಿತು ತಮ್ಮ ಅಭಿಪ್ರಾಯವನ್ನು ಹಿಂದೆಯೇ ಹೇಳಿಕೊಂಡಿದ್ದರು. ಅದೇಕೋ ಅದು ಸಾರ್ವಜನಿಕ ವಲಯದಲ್ಲಿ ಹೆಚ್ಚು ಸುದ್ದಿಯಾಗಿದ್ದರಿಂದ, ಅದರಲ್ಲೂ ಜಾತಿ ವಿಷಯ ಅಂಟಿಕೊಂಡಿದ್ದರಿಂದ ಸ್ವತಃ ಅವರೇ ಮತ್ತೂಂದು ಪತ್ರ ಬರೆಯುವ ಮೂಲಕ ವಿಷಯವನ್ನು ಹೆಚ್ಚು ಚರ್ಚೆ ಮಾಡದಂತೆ ಮನವಿ ಮಾಡಿದ್ದಾರೆ. ಆದರೆ, ಇದು ಇಲ್ಲಿಗೆ ನಿಲ್ಲುತ್ತಾ? ಎಂಬುದೇ ಈಗ ಎಲ್ಲರಲ್ಲೂ ಎದ್ದಿರುವ ಪ್ರಶ್ನೆ.

Advertisement

Udayavani is now on Telegram. Click here to join our channel and stay updated with the latest news.

Next