ಚಿಕ್ಕಮಗಳೂರು: ಮಂಗಳೂರಿನ ಬಜ್ಪೆ ಬಳಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಇಲ್ಲಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ವಿಜಯಪುರ ಬಡಾವಣೆ ನಿವಾಸಿ ಗುತ್ತಿಗೆದಾರ ಎಸ್.ಕೆ. ಖಾದರ್‌ರವರ ಮೊದಲ ಪುತ್ರ ಎಂ.ಎ. ಅಬ್ದುಲ್ ರೆಹಮಾನ್ (48) ಮೃತ ಪಟ್ಟಿದ್ದರು.
ಮೃತರು ಪತ್ನಿ ಹಾಗೂ ಮಕ್ಕಳಾದ ತಾಶೀರಾ (12) ತಲ್ಲಿಕ್ (7), ತಂದೆ, ತಾಯಿಯನ್ನು ಅಗಲಿದ್ದರು. ಕಳೆದ 8 ವರ್ಷಗಳಿಂದ ದುಬೈನ ಎನ್. ಎಂ.ಸಿ.ಯಲ್ಲಿ ಮೇಲ್ವಿಚಾರಕರಾಗಿ ಕೆಲಸ ನಿರ್ವಹಿಸುತ್ತಿದ್ದ ಅಬ್ದುಲ್ ರೆಹಮಾನ್ ನಿನ್ನೆ ರಾತ್ರಿ ಊರಿಗೆ ಹೊರಡುವ ಮೊದಲು ಹಾಗೂ ವಿಮಾನ ಭೂ ಸ್ಪರ್ಶ ಮಾಡುವ ಅರ್ಧ ಗಂಟೆಗೆ ಮೊದಲು ಮನೆಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದರು. ಮಕ್ಕಳನ್ನು ವಿಮಾನ ನಿಲ್ದಾಣಕ್ಕೆ ಕರೆ ತರುವಂತೆಯೂ ತಿಳಿಸಿದ್ದು ಇದೇ ಅವರ ಕೊನೆಯ ಸಂಭಾಷಣೆ ಎಂದು ಮನೆ ಮಂದಿ, ಸ್ನೇಹಿತರು ಬೇಸರ ವ್ಯಕ್ತಪಡಿಸಿದ್ದರು.
ಸುದ್ದಿ ತಿಳಿಯುತ್ತಿದ್ದಂತೆ ವೃದ್ಧ ತಂದೆ ಖಾದರ್ ಮಗನ ಭಾವ ಚಿತ್ರವನ್ನು ಕೈಯಲ್ಲಿ ಇಟ್ಟುಕೊಂಡು ರೋದಿಸುತ್ತಿದ್ದ ದೃಶ್ಯ ಮನಕಲುಕುತ್ತಿತ್ತು. ತಾಯಿ ಹಾಗೂ ಸಹೋದರಿ ಬಿದ್ದು ಬಿದ್ದು ಹೊರಳಾಡುತ್ತಿದ್ದು ಮಗ ಹಾಗು ಸಹೋದರನನ್ನು ಕಳೆದುಕೊಂಡು ಜರ್ಜರಿತರಾಗಿದ್ದರು. ವಿಜಯಪುರ ಮನೆಯ ಎದುರು ನೂರಾರು ಮಂದಿ ಜಮಾಯಿಸಿದ್ದು ಸಂಬಂಧಿಕರು ನೊಂದವರಿಗೆ ಸಾಂತ್ವನ ಹೇಳುವ ಕೆಲಸದಲ್ಲಿ ತೊಡಗಿದ್ದರು. ತಂದೆ ಖಾದರ್ ಅಸ್ವಸ್ಥಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು.
ಮಕ್ಕಳಿಬ್ಬರು ಬಾಳೆಹೊನ್ನೂರಿನಲ್ಲಿ ನೆಲೆಸಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಆಗಮಿಸಿದ್ದರೂ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೆಚ್ಚುದಿನ ಇರಲಿಲ್ಲ. ಸಮಸ್ಯೆ ಇತ್ಯರ್ಥ ಪಡಿಸುವ ಉದ್ದೇಶದಿಂದ ಇಂದು ಇಲ್ಲಿಗೆ ಆಗಮಿಸಬೇಕಾಗಿದ್ದ ರೆಹಮಾನ್ ಸಾವಿನ ದವಡೆಗೆ ಸಿಲುಕಿ ಪಾರಾಗಲೇ ಇಲ್ಲ. ಶವ ಸಂಪೂರ್ಣ ಸುಟ್ಟು ಕರಕಲಾಗಿದ್ದು ಸಂಜೆಯವರೆಗೂ ಪತ್ತೆ ಮಾಡಲು ಸಾಧ್ಯವಾಗಿಲ್ಲ.
(ಹತ್ತು ವರ್ಷದ ಹಿಂದೆ ಉದಯವಾಣಿ ದೈನಿಕದಲ್ಲಿ ಪ್ರಕಟವಾದ ವರದಿ)