ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿದರು.
ಎರಡು ದಿನ ಮಡಿಕೇರಿ ಸಮೀಪದ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆದು ಬಂದಿದ್ದ ಕುಮಾರಸ್ವಾಮಿಯವರು ಸೋಮವಾರ ಪದ್ಮನಾಭನಗರಕ್ಕೆ ಭೇಟಿ ನೀಡಿ ದೇವೇಗೌಡರ ಜತೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಸಿದ್ದರಾಮಯ್ಯ ಹಾಗೂ ಎಚ್.ವಿಶ್ವನಾಥ್ ನಡುವಿನ ವಾಕ್ಸಮರ, ಲೋಕಸಭೆ ಚುನಾವಣೆ ಫಲಿತಾಂಶದ ನಂತರದ ವಿದ್ಯಮಾನ, ಉಪ ಚುನಾವಣೆ ಮತ್ತಿತರ ವಿಚಾರಗಳ ಬಗ್ಗೆ ಕುಮಾರಸ್ವಾಮಿ ದೇವೇಗೌಡರ ಜತೆ ಚರ್ಚಿಸಿದರು.
ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ನಡೆಸಿರುವ ಆಂತರಿಕ ಸಮೀಕ್ಷೆಯ ವಿವರಗಳನ್ನೂ ಇದೇ ಸಂದರ್ಭದಲ್ಲಿ ಕುಮಾರಸ್ವಾಮಿಯವರು ನೀಡಿದರು. ಸದ್ಯಕ್ಕೆ ಯಾವುದೇ ವಿಚಾರಕ್ಕೆ ಪ್ರತಿಕ್ರಿಯಿಸುವುದು ಬೇಡ.
ಫಲಿತಾಂಶದವರೆಗೂ ಮೌನ ವಹಿಸುವುದು ಸೂಕ್ತ ಎಂದು ದೇವೇಗೌಡರು ಕಿವಿಮಾತು ಹೇಳಿದರು ಎಂದು ಹೇಳಲಾಗಿದೆ. ದೇವೇಗೌಡರ ಜತೆಗಿನ ಚರ್ಚೆ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕುಂದಗೋಳ ಹಾಗೂ ಚಿಂಚೋಳಿ ಉಪ ಚುನಾವಣೆ ಪ್ರಚಾರಕ್ಕೆ ತೆರಳಿದರು.
ಈಮಧ್ಯೆ, ದೇವೇಗೌಡರು ಪೂರ್ಣ ಪ್ರಮಾಣದಲ್ಲಿ ರಾಷ್ಟ್ರ ರಾಜಕೀಯ ಕುರಿತು ಹೆಚ್ಚು ತಲೆಕೆಡಿಸಿಕೊಂಡಿದ್ದು, ಪ್ರಾದೇಶಿಕ ಪಕ್ಷಗಳ ನಾಯಕರ ಜತೆ ಸಂಪರ್ಕದಲ್ಲಿದ್ದಾರೆ. ಒಂದೆರಡು ದಿನಗಳಲ್ಲಿ ದೆಹಲಿಗೆ ಭೇಟಿ ನೀಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.