ಹಾವೇರಿ: ಸಾಮಾಜಿಕ ಜಾಲತಾಣದಲ್ಲಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಲಾಗುತ್ತಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್, ವಾಟ್ಸಪ್ ಸೇರಿದಂತೆ ಹಲವು ಮುಖ್ಯಸ್ಥರನ್ನು ಕರೆದು ಮಾತನಾಡಲು ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಅಂತಹ ಪೋಸ್ಟ್ ಗಳನ್ನು ಪರಿಶೀಲಿಸಿ ಹಾಕಲು ತಿಳಿಸಬೇಕಿದೆ. ಮುಂದಿನ ವಾರ ಮುಖ್ಯಸ್ಥರ ಸಭೆ ನಡೆಸಲಾಗುತ್ತಿದೆ. ಅವರ ಪ್ರತಿಕ್ರಿಯೆ ನಂತರ ನಮ್ಮ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರಿನ ಗಲಭೆ ಬಗ್ಗೆ ತನಿಖೆ ನಡೆಯುತ್ತಿದೆ. ಅದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ಕೆಲವೇ ದಿನದಲ್ಲಿ ಬಹಿರಂಗಗೊಳಿಸುತ್ತೇವೆ ಎಂದರು.
ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿ ಕಾನೂನು ಜಾರಿ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಗಲಭೆಯಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಭರಸಿಕೊಳ್ಳುವ ಬಗ್ಗೆ ಸುಪ್ರೀಂ ಕೊರ್ಟ್ ಆದೇಶ ನೀಡಿದೆ. ಅದರ ಆದೇಶದ ಮೇರೆಗೆ ರಾಜ್ಯ ಸರಕಾರ ಆಡಳಿತ ಮಾಡುತ್ತಿದೆ. ಯಾವ ರೀತಿ ಹಾನಿ ಭರಸಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಮಾರ್ಗಸೂಚಿ ಕೊಟ್ಟಿದೆ. ಆ ಮಾರ್ಗಸೂಚಿಯಂತೆ ರಾಜ್ಯ ಸರಕಾರ ಈಗಾಗಲೇ ಕಾರ್ಯ ಪ್ರಾರಂಭಿಸಿದೆ. ಹಾನಿ ಮಾಡಿದವರನ್ನು ಗುರುತಿಸುತ್ತಿದ್ದೇವೆ ಎಂದರು.
ಇನ್ನೂ ಶಾಸಕ ಅಖಂಡ ಶಾಸಕರಾದ ಅಖಂಡ ಶ್ರೀನಿವಾಸ್ ಅವರು ಭದ್ರತೆ ಕೇಳಿದ್ದಾರೆ. ಭದ್ರತೆಗೆ ಸೂಚನೆ ನೀಡಿದ್ದೇನೆ ಎಂದು ಸಚಿವರು ಹೇಳಿದರು.