Advertisement

ಸಿದ್ದರಾಮಯ್ಯನವರೇ ನನ್ನನ್ನು ಟೀಕಿಸಲು ಬಂದು ನೀವು ಹಿಟ್‌ ವಿಕೆಟ್‌ ಆಗಿದ್ದೀರಿ: ಎಚ್ ಡಿಕೆ

12:37 PM May 20, 2021 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್ ಡಿ ಕುಮಾರಸ್ವಾಮಿಯವರ ಟೀಕಾ ಪ್ರಹಾರ ಮುಂದುವರಿದಿದೆ. ಸಿದ್ದರಾಮಯ್ಯನವರ ಟೀಕೆಗಳಿಗೆ ಉತ್ತರ ನೀಡಿರುವ ಎಚ್ ಡಿಕೆ, ಸಿದ್ದರಾಮಯ್ಯನವರೇ ನನ್ನನ್ನು ಟೀಕಿಸಲು ಬಂದು ನೀವು ಹಿಟ್‌ ವಿಕೆಟ್‌ ಆಗಿದ್ದೀರಿ ಎಂದು ವ್ಯಂಗ್ಯವಾಡಿದ್ದಾರೆ.

Advertisement

ಟ್ವೀಟ್ ಮಾಡಿರುವ ಅವರು, ಶಾಂತಿ ಕಾಲದಲ್ಲಿ ಕಲಹಕ್ಕೆ ಬರುವುದು, ನೆರೆ ಮನೆ ಬೆಂಕಿಯಲ್ಲಿ ಬೇಳೆ ಬೇಯಿಸುವುದು ಕಾಂಗ್ರೆಸ್‌ನ ಜಾಡ್ಯ. ಈ ಅಂಟುರೋಗಕ್ಕೆ ಒಳಗಾದವರು ಸಿದ್ದರಾಮಯ್ಯ. ಲಸಿಕೆ ವಿಚಾರದಲ್ಲಿ ಕಾಂಗ್ರೆಸ್‌ನ ಆತ್ಮವಂಚನೆ ನೆನಪಿಸಿದ್ದಕ್ಕೆ ಸಿದ್ದರಾಮಯ್ಯ ನನ್ನ ವಿರುದ್ಧ ಕಾಲು ಕೆರೆದುಕೊಂಡು ಬಂದಿದ್ದಾರೆ. ಅವರ ಪ್ರತಿ ಎಸೆತಕ್ಕೆ ಸಿಕ್ಸರ್‌ ಕೊಡಬೇಕೆನಿಸಿದೆ ಎಂದಿದ್ದಾರೆ.

ಕೋವಿಡ್‌ ಲಸಿಕೆ ವಿಚಾರದಲ್ಲಿನ ಕಾಂಗ್ರೆಸ್‌ನ ಆತ್ಮವಂಚನೆಯನ್ನು ಪ್ರಸ್ತಾಪಿಸಿದ್ದಕ್ಕೆ ನಾನು ಸ್ವಯಂ ಗೋಲು ಹೊಡೆದುಕೊಂಡಿರುವುದಾಗಿ ನೀವು ಹೇಳಿದ್ದೀರಿ. ಸಿದ್ದರಾಮಯ್ಯನವರೇ ಲಸಿಕೆ ವಿಚಾರದಲ್ಲಿ ರಾಷ್ಟ್ರದ ಎದುರು ಬೆತ್ತಲಾಗಿ, ನಿಂತಿರುವುದು ಕಾಂಗ್ರೆಸ್‌. ಈ ವಿಚಾರದಲ್ಲಿ ನನ್ನನ್ನು ಟೀಕಿಸಲು ಬಂದು ನೀವು ಹಿಟ್‌ ವಿಕೆಟ್‌ ಆಗಿದ್ದೀರಿ ಎಂದು ವ್ಯಂಗ್ಯವಾಡಿದ್ದಾರೆ.

ಲಸಿಕೆ ವಿಚಾರವಾಗಿ ಕಾಂಗ್ರೆಸ್ ಅನುಮಾನದ ಮಾತುಗಳನ್ನು ಆಡಲಿಲ್ಲವೇ? ಭಾರತದ್ದೇ ಕೋವ್ಯಾಕ್ಸಿನ್‌ನ ಬಗ್ಗೆ ಅಪಪ್ರಚಾರ ಮಾಡಲಿಲ್ಲವೇ? ನಮ್ಮದೇ ಲಸಿಕೆಯನ್ನು ನೀವು ಪ್ರೋತ್ಸಾಹಿಸಬೇಕಿತ್ತೋ ಇಲ್ಲವೋ? ಅದು ಬಿಟ್ಟು ನೀವು ಮಾಡಿದ್ದೇನು? ಅಡಿಗಡಿಗೆ ಲಸಿಕೆ ಮೇಲೆ ಅನುಮಾನ. ಈ ಮೂಲಕ ಭಾರತೀಯ ವಿಜ್ಞಾನಿಗಳ ಅಪಮಾನ. ಇದನ್ನೇ ಅಲ್ಲವೇ ನಾನು ಹೇಳಿದ್ದು? ಕಾಂಗ್ರೆಸ್‌ನ ಲಸಿಕೆ ರಾಜಕಾರಣವನ್ನು ನಾನು ವಿವರಿಸಿದ್ದೇನೆ. ಕಾಂಗ್ರೆಸ್‌ನ ಅಪಪ್ರಚಾರದಿಂದ ಜನ ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ ಎಂದು ನಾನು ಹೇಳಿಲ್ಲ. ಲಸಿಕೆಗಾಗಿ ಜನರು ಸಿದ್ದರಾಗಿಯೇ ಇದ್ದಾರೆ. ಕಾಂಗ್ರೆಸ್‌ ಹೇಳಿದ ಮಾತ್ರಕ್ಕೆ ಜನ ಲಸಿಕೆಯಿಂದ ವಿಮುಖರಾಗಿಲ್ಲ. ಜನ ಕಾಂಗ್ರೆಸ್‌ ಮಾತು ಕೇಳುತ್ತಾರೆ ಎಂಬ ಭ್ರಮೆ ಸಿದ್ದರಾಮಯ್ಯನವರಿಗೆ ಬೇಡ ಎಂದಿದ್ದಾರೆ.

ಲಸಿಕೆಯೊಂದು ಸಿಕ್ಕಾಗ ಅದನ್ನು ಮೊದಲಿಗೆ ಮುಂಚೂಣಿ ಹೋರಾಟಗಾರರಿಗೆ ನೀಡಲಾಗುತ್ತದೆ. ಇದು ನಿಮಗೆ ತಿಳಿದಿರಲಿ. ದೇಶದಲ್ಲಿ ಮೊದಲು ಕೋವಿಡ್‌ ವಾರಿಯರ್‌ಗಳಿಗೆ ಲಸಿಕೆ ನೀಡಲಾಯಿತು. ನನ್ನ ಸರದಿ ಬಂದಾಗ ನಾನು ಲಸಿಕೆ ಪಡೆದೆ. ಇಲ್ಲಿ ಕಾಂಗ್ರೆಸ್‌ ಮಾತು ನಂಬಿ ಕೂರುವಂಥದ್ದೇನಿತ್ತು. ಕಾಂಗ್ರೆಸ್‌ ಮಾತನ್ನು 50 ವರ್ಷದಿಂದಲೂ ಕೇಳದ ಕುಟುಂಬ ನಮ್ಮದು! ದೇಶದಲ್ಲಿ ಸರ್ವರಿಗೂ ಉಚಿತ ಲಸಿಕೆ ಹಾಕುವಂತೆ ಸೋನಿಯಾ ಗಾಂಧಿ ಅವರ ಜೊತೆಗೂಡಿ ಎಚ್‌.ಡಿ ದೇವೇಗೌಡರು ಪ್ರಧಾನಿಗೆ ಪತ್ರ ಬರೆದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯನವರೇ, ದೇಶದ ಹಲವು ವಿರೋಧಪಕ್ಷಗಳ ನಾಯಕರ ಜೊತೆಗೂಡಿ ದೇವೇಗೌಡರು ಪ್ರಧಾನಿಗೆ ಪತ್ರ ಬರೆದರೇ ಹೊರತು, ಸೋನಿಯಾ ಗಾಂಧಿ ಅವರ ಜೊತೆಗೂಡಿ ಪತ್ರ ಬರೆಯಲಿಲ್ಲ ನೆನಪಿರಲಿ. ಅಷ್ಟಕ್ಕೂ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರಕ್ಕೆ ಸಹಿ ಮಾಡುವಂತೆ ದೇವೇಗೌಡರಿಗೆ ಯಾರೆಲ್ಲ ವಿನಂತಿಸಿದ್ದರು, ಎಷ್ಟು ಬೇಡಾಡಿದರು ಎಂಬುದು ಸಿದ್ದರಾಮಯ್ಯನವರಿಗೆ ಗೊತ್ತಿದೆಯೇ? ದೆಹಲಿಗೆ ಹೋಗಿ ಈ ವಿಚಾರವಾಗಿ ಸಿದ್ದರಾಮಯ್ಯನವರು ಮಾಹಿತಿ ಪಡೆದು ಬರಲಿ. ಮಾಹಿತಿ ಇಲ್ಲದೇ ಮಾತಾಡುವುದು ಸಿದ್ದರಾಮಯ್ಯನವರಿಗಿರುವ ದೊಡ್ಡ ಸಮಸ್ಯೆ ಎಂದು ಎಚ್ ಡಿಕೆ ತಿರುಗೇಟು ನೀಡಿದ್ದಾರೆ.

Advertisement

ಅಸಮರ್ಪಕ ಲಸಿಕೆ ಅಭಿಯಾನ ವಿರುದ್ಧ ನಮ್ಮದೂ ಆಕ್ಷೇಪಣೆಗಳಿವೆ. ಆದರೆ, ಲಸಿಕೆ ವಿರುದ್ಧ ನಮ್ಮ ನಿಲುವು ಇಲ್ಲ. ಲಸಿಕೆ ಅಭಿಯಾನ ಸಮರ್ಪಕವಾಗಿ ನಡೆಯಬೇಕೆಂದು ಒತ್ತಾಯಿಸಿ ನಾನು ಸರ್ಕಾರಗಳಿಗೆ ಹಲವು ಸಲಹೆ ನೀಡಿದ್ದೇನೆ. ಆದರೆ, ಕಾಂಗ್ರೆಸ್‌ ಲಸಿಕೆ ವಿರುದ್ಧವೇ ಮಾತಾಡಿತು. ಈಗ ಲಸಿಕೆ, ಲಸಿಕೆ ಎನ್ನುತ್ತಿದೆ. ಇದು ಕಾಂಗ್ರೆಸ್‌ನ ಇಬ್ಬಗೆ ನೀತಿ ಎಂದಿದ್ದಾರೆ.

ಸೋಂಕು ಹೆಚ್ಚುತ್ತಿದ್ದರೂ, ಲಾಕ್‌ಡೌನ್‌ ಜಾರಿಯಲ್ಲಿ ಇದ್ದರೂ ರಾಜ್ಯದಲ್ಲಿ ಕಾಂಗ್ರೆಸ್‌ ನಾಯಕರು ಬೀದಿಗೆ ಬಿದ್ದಿದ್ದಾರೆ. ಜನರಿಗೆ ನೆರವಾಗುವುದು ಇವರ ಉದ್ದೇಶವಲ್ಲ. ರಾಜಕೀಯ ಮೈಲೇಜ್‌ ಪಡೆಯುವುದು ಇವರ ಉದ್ದೇಶ. ಜೊತೆಗೆ ಸಿಎಂ ಆಗುವ ಕನಸುಗಳು. ಶಾಂತಿ ಕಾಲದಲ್ಲಿ ಕಾಂಗ್ರೆಸ್‌ ಕಲಹಕ್ಕೆ ಇಳಿದು ಲಾಭ ಪಡೆಯುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಟೀಕಿಸಿದ್ದಾರೆ.

ಲಸಿಕೆಗಾಗಿ 100 ಕೋಟಿ ರೂ. ಕೊಟ್ಟಿದ್ದಾಗಿ ಕಾಂಗ್ರೆಸ್‌ ಹೇಳುತ್ತಿದೆ. ಇದೇನು ಸಿದ್ದರಾಮಯ್ಯನವರ ಮನೆ ಗಂಟೇ? ಕಾಂಗ್ರೆಸ್‌ ಜನಪ್ರತಿನಿಧಿಗಳ ಕ್ಷೇತ್ರಾಭಿವೃದ್ಧಿ ನಿಧಿಯಲ್ಲವೇ? ಕ್ಷೇತ್ರಾಭಿವೃದ್ಧಿ ನಿಧಿಯನ್ನು ಸರ್ಕಾರಕ್ಕೇ ನೀಡಿರುವುದಾಗಿ ಹೇಳಬೇಕಿದ್ದ ಕಾಂಗ್ರೆಸ್‌, ಲಸಿಕೆಗಾಗಿ ಕೈಯಿಂದ 100 ಕೋಟಿ ಕೊಟ್ಟಂತೆ ಹೇಳಿದೆ. ಎಂಥ ವಂಚಕ ನಡೆ? ನಾನು ದೇವೇಗೌಡರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು ಎಂದು ನೀವು ಹೇಳಿದ್ದೀರಿ. ದೇವೇಗೌಡರ ಸಲಹೆಯಂತೇ ನಾನು ಸೇರಿದಂತೆ ಪಕ್ಷ ನಡೆಯುತ್ತೇವೆ. ಅದನ್ನು ಹೇಳುತ್ತಿರುವ ತಾವು ಗೌಡರ ಸಲಹೆಯಂತೆ ನಡೆದುಕೊಂಡಿದ್ದೀರೇ? ಸಿದ್ದರಾಮಯ್ಯನವರೇ ಹೇಳಲು ಬಹಳಷ್ಟಿದೆ. ನಾನು ಸುಳ್ಳಾಡಲಾರೆ. ಅದು ನಿಮಗೆ ಹೇಗೆ ಕಾಣುತ್ತದೆ ಎಂಬುದು ನನಗೆ ಅಪ್ರಸ್ತುತ ಎಂದು ಕುಮಾರಸ್ವಾಮಿಯವರು ಸಿದ್ದರಾಮಯ್ಯನವರ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next