Advertisement

ಪಪಂನ ಕೈ-ಕಮಲ ಸದಸ್ಯರ ಮಧ್ಯೆ ವಾಕ್ಸಮರ

08:33 PM Apr 07, 2021 | Team Udayavani |

ಮೊಳಕಾಲ್ಮೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಗಳ ಬಗ್ಗೆ ಯಾವ ಸದಸ್ಯರ ಗಮನಕ್ಕೂ ತಂದಿಲ್ಲ. ಕಾಮಗಾರಿಗೆ ಪಪಂನ ಜೆಸಿಬಿ ಬಳಸಿಕೊಳ್ಳಲಾಗಿದೆ ಎಂಬ ವಿಷಯ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಸದಸ್ಯರ ಮಧ್ಯೆ ವಾಕ್ಸಮರಕ್ಕೆ ಕಾರಣವಾಯಿತು.

Advertisement

ಪಟ್ಟಣ ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಕಾಂಗ್ರೆಸ್‌ ಸದಸ್ಯ ಎಂ. ಅಬ್ದುಲ್ಲಾ ವಿಷಯ ಪ್ರಸ್ತಾಪಿಸಿದರು. ಈ ಬಗ್ಗೆ ಪಪಂ ಅಧ್ಯಕ್ಷರು ಸ್ಪಷ್ಟೀಕರಣ ನೀಡುವಂತೆ ಆಗ್ರಹಿಸಿದರು. ಸರ್ಕಾರಿ ಪದವಿಪೂರ್ವ ಕಾಲೇಜಿನ ಕುಡಿಯುವ ನೀರಿನ ಪೈಪ್‌ಲೈನ್‌ ಕಾಮಗಾರಿ, ಶ್ರೀನಿವಾಸನಾಯಕ ಬಡಾವಣೆಯಲ್ಲಿ ಶುದ್ಧ ಕುಡಿಯವ ನೀರಿನ ಘಟಕ ಹಾಗೂ ಸರ್ಕಾರಿ ಪಪೂ ಕಾಲೇಜಿನಿಂದ ಮಾರಮ್ಮ ದೇವಿ ದೇವಸ್ಥಾನದವರೆಗಿನ ಪೈಪ್‌ಲೈನ್‌ ಕಾಮಗಾರಿ, ಪೊಲೀಸ್‌ ವಸತಿ ಗೃಹಗಳಿಗೆ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ, ಬಸ್‌ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಕಾಮಗಾರಿ ಹಾಗೂ ಇನ್ನಿತರ ಕಾಮಗಾರಿಗಳ ಬಗ್ಗೆ ಸದಸ್ಯರ ಗಮನಕ್ಕೆ ತಂದಿಲ್ಲ.

ಈ ಕಾಮಗಾರಿಗಳಿಗೆ ಪಟ್ಟಣ ಪಂಚಾಯಿತಿಯ ಜೆಸಿಬಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ಕಾಂಗ್ರೆಸ್‌ ಸದಸ್ಯರಾದ ಎಂ. ಅಬ್ದುಲ್ಲಾ, ಎಸ್‌. ಖಾದರ್‌, ನಬಿಲ್‌ ಅನ್ಸಾರ್‌ ಹಾಗೂ ಇತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಪಂ ಅಧ್ಯಕ್ಷ ಪಿ. ಲಕ್ಷ್ಮಣ, ಹಿಂದಿನ ಸಭೆಯಲ್ಲಿ ಈ ಕುರಿತು ಸದಸ್ಯರ ಗಮನಕ್ಕೆ ತರಲಾಗಿತ್ತು. ಕಾಲೇಜು ವಿದ್ಯಾರ್ಥಿಗಳ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ತುರ್ತಾಗಿ ಕಾಮಗಾರಿ ಕೈಗೊಳ್ಳಲಾಗಿದೆ. ಪಪಂನ ಜೆಸಿಬಿ ಬಳಕೆಯಾಗಿರುವುದನ್ನು ಹೊರತುಪಡಿಸಿ ಬಿಲ್‌ ಮಾಡಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಕೆ. ತಿಪ್ಪೇಸ್ವಾಮಿ, ಹಿಂದಿನ ಸಭೆಯಲ್ಲಿ ಎಲ್ಲ ಸದಸ್ಯರ ಗಮನಕ್ಕೆ ತರಲಾಗಿತ್ತು, ತುರ್ತು ಸಂದರ್ಭದಲ್ಲಿ ಅಧ್ಯಕ್ಷರು ಯಾರ ಗಮನಕ್ಕೂ ತಾರದೆ ಕೆಲಸ ಮಾಡಬಹುದೆಂಬ ನಿಯಮವಿದೆ. 12ನೇ ವಾರ್ಡಿನ ಸದಸ್ಯ ಎಸ್‌. ಖಾದರ್‌ರವರು ಪಟ್ಟಣ ಪಂಚಾಯಿತಿಯ ಅನುಮತಿಯಿಲ್ಲದೆ ಸಿಸಿ ರಸ್ತೆಯನ್ನು ಒಡೆದು ಪೈಪ್‌ಲೈನ್‌ ಮಾಡಿಸಿರುವುದು ಎಷ್ಟು ಸರಿ, ಆಗ ನಾವ್ಯಾರೂ ಪ್ರಶ್ನಿಸಲಿಲ್ಲ.

ಆದರೆ ಮುಂದಿನ ದಿನಗಳಲ್ಲಿ ಇದೇ ರೀತಿ ತಕರಾರು ಮಾಡಿದಲ್ಲಿ ನಾವೂ ಸಹ ತಕರಾರು ಮಾಡಬೇಕಾಗುತ್ತದೆ ಎಂದರು. ಆಗ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ಸಭೆಯಲ್ಲಿ ಪಪಂ ಉಪಾಧ್ಯಕ್ಷೆ ಶುಭಾ ಪೃಥ್ವಿರಾಜ್‌, ಪಪಂ ಮುಖ್ಯಾ ಧಿಕಾರಿ ಪಿ. ಬಸಣ್ಣ, ಸದಸ್ಯರಾದ ಮಂಜಣ್ಣ, ಲೀಲಾವತಿ, ರೂಪಾ, ಲಕ್ಷ್ಮೀದೇವಿ, ಸವಿತಾ, ಪದ್ಮಾವತಿ, ವಿಜಯಮ್ಮ, ಚಿತ್ತಮ್ಮ, ಭಾಗ್ಯಮ್ಮ, ನಾಮನಿರ್ದೇಶನ ಸದಸ್ಯರಾದ ಸರ್ವಮಂಗಳ ಚಂದ್ರು, ತಿಪ್ಪೇಸ್ವಾಮಿ, ಪಪಂ ಅಭಿಯಂತರ ರೇವಣಸಿದ್ದಯ್ಯ, ಆರೋಗ್ಯ ನಿರೀಕ್ಷಕ ಶ್ರೀನಿವಾಸ್‌, ಸಿಬ್ಬಂದಿಗಳಾದ ಬಸಣ್ಣ, ಪೆನ್ನೋಬಳಿ, ನೇತ್ರಾವತಿ, ಅಕ್ರಂ, ರವಿಕುಮಾರ್‌ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next