ನನ್ನ ಮನಸ್ಸು, ನನ್ನ ಅನುರಾಗ ಎಲ್ಲವೂ ನಿನಗೆ ಅರ್ಥವಾದಂತಿದೆ. ಆದರೂ, ಏನೂ ಗೊತ್ತಿಲ್ಲದವಳಂತೆ ವರ್ತಿಸ್ತಾ ಇದೀಯ. ಇಷ್ಟೆಲ್ಲಾ ಅರ್ಥವಾದ ಮೇಲೂ ನಿನ್ನ ಮೇಲಿರುವ ಆಕರ್ಷಣೆ ಕಡಿಮೆಯಾಗಿಲ್ಲ, ಬದಲಿಗೆ ಹೆಚ್ಚುತ್ತಲೇ ಇದೆ…
ಕೇಶಿರಾಜನನ್ನು ಓದುತ್ತಿದ್ದ ನನ್ನನ್ನು ಕೇಶರಾಶಿಯಿಂದಲೇ ಮರಳು ಮಾಡಿದ ಹುಡುಗಿಯೇ ಕೇಳು. ವ್ಯಾಕರಣದ ಒಂದೊಂದು ನಿಯಮವನ್ನೂ ಸೂತ್ರದಲ್ಲಿ ಬಂಧಿಸಿಟ್ಟು ಕಲಿಕಾರ್ಥಿಯನ್ನು ಪಂಡಿತನನ್ನಾಗಿಸುವ ಆ ‘ಶಬ್ದಮಣಿ’ಯ ಸೆಳೆತಕ್ಕೊಳಗಾದ ನಾನು ನಿನ್ನ ಆ ಸೊಂಪಾದ ಕೇಶದ ಮೋಡಿಗೊಳಗಾಗಿಬಿಟ್ಟಿದ್ದೇ ಒಂದು ವಿಸ್ಮಯ! ಪ್ರತಿನಿತ್ಯ ಆ ಕಾಲೇಜು ಕ್ಯಾಂಪಸ್ಸಿನ ಕಾರಿಡಾರು ಕಾಣುವಂತೆ ಅಲ್ಲೇ ಹತ್ತಿರದಲ್ಲೇ ಕುಳಿತು ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿರುವ ನನ್ನನ್ನು ನೀ ನೋಡಿಯೂ ನೋಡದಂತೆ ಗಮನಿಸುತ್ತಿರುವೆಯಲ್ಲ, ಆ ನೋಟ ನನ್ನನ್ನು ಮತ್ತಷ್ಟು ಹುಚ್ಚನನ್ನಾಗಿಸುತ್ತಿದೆ. ಸಾಲದ್ದಕ್ಕೆ ಮುಂದೆ ಹೋಗಿ ಹಿಂದೆ ತಿರುಗಿ ನೀ ನಕ್ಕು ಸಾಗುವ ಪರಿ ಪ್ರೀತಿಯಲಿ ಪರಿತಪಿಸುವಂತೆ ಮಾಡಿದೆ.
ಗೆಳತಿಯರ ಗುಂಪಿನಲ್ಲಿ ನಿಂತು ಹರಟುವಾಗ ಆಗಾಗ ನನ್ನೆಡೆ ನೋಡಿ ಕೈಬೆರಳಿಂದ ಮುಂಗುರುಳು ಸರಿಪಡಿಸಿಕೊಳ್ಳುವ ಭಂಗಿ ನನ್ನನ್ನು ಮೈ ಮರೆಯುವಂತೆ ಮಾಡಿಬಿಟ್ಟಿದೆ. ಹೀಗಿರುವಾಗ, ಮೊನ್ನೆ ನಿನಗೆದುರಾದಾಗ ಬಿಚ್ಚಿದ ನಿನ್ನ ಕೇಶರಾಶಿಯಿಂದ ಒಂದು ಕೂದಲು ಹಾರಿ ಬಂದು ನನ್ನೆದೆಗೊರಗಿತು! ಆಗ ನೀನೇ ಬಂದು ನನ್ನೆದೆಗೆ ಗುದ್ದಿ ಪ್ರೇಮಭಾವನೆಗಳನ್ನು ಬಡಿದೆಬ್ಬಿಸಿದಂಥ ಅನುಭವವಾಯ್ತು! ಆ ಕ್ಷಣ ಮೈಯೆಲ್ಲ ರೋಮಾಂಚನ. “ಹೃದಯದಲಿ ಇದೇನಿದು ನದಿಯೊಂದು ಓಡಿದೆ’ ಎಂದು ಹಾಡಿದಂತಾಯ್ತು. ಆ ಕ್ಷಣದಿಂದಲೇ ನನ್ನೊಳಗೆ ಪ್ರೀತಿಯ ನವಪಲ್ಲವ ಚಿಗುರೊಡೆದುಬಿಟ್ಟಿತು. ಅದು ಹೂವಾಗಿ, ಕಾಯಾಗಿ, ಹಣ್ಣಾಗಿ ನಿನ್ನ ನಾಲಿಗೆಗೆ ರುಚಿಯ ಅನುಭವ ನೀಡುವ ತವಕದಲ್ಲಿದ್ದರೂ ಅದೇಕೋ ನ್ನಿನ್ನ ನಿರ್ಲಕ್ಷ್ಯ ಮನಸ್ಸಿಗೆ ಘಾಸಿ ಮಾಡುತ್ತಿದೆ. ಆದರೆ, ನಿನ್ನ ಮೇಲೆ ಉಂಟಾದ ಈ ಮಧುರ ಅನುರಾಗ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬೆಂಗಳೂರಿನ ಮಳೆಯಂತೆ…!
ನೇರವಾಗಿ ಬಂದು ಹೃದಯದಲ್ಲಿ ಹುದುಗಿರುವ ಮಧುರ ಮನಸ್ಸಿನ ಪ್ರೇಮಭಾವನೆಗಳನ್ನು ನಿನ್ನೆದುರು ವ್ಯಕ್ತಪಡಿಸಲಾಗದೇ ಈ ಪತ್ರದಲ್ಲಿ ತೆರೆದಿಡುತ್ತಿದ್ದೇನೆ. ನನ್ನೆದೆಯ ಈ ಪಿಸುಮಾತು ನಿನಗರ್ಥವಾದರೆ, ನಾಳೆಯೇ ಪ್ರತಿಕ್ರಿಯಿಸು. ನನ್ನೆದೆಯ ಹಾಡಿಗೆ ಧ್ವನಿಯಾಗು. ಸುಂದರ ಭವಿಷ್ಯದ ಬದುಕಿನ ಸಾರ್ಥಕತೆಯ ನನ್ನ ಕನಸಿನ ಹಕ್ಕಿಗೆ ನೀ ರೆಕ್ಕೆಯಾಗು. ಒಂದೇ ಅಭಿರುಚಿ, ಆಸಕ್ತಿ, ಅಂತಸ್ತಿನ ನಾವು ಒಂದಾಗೋಣ, ಹೊಸ ಪ್ರೇಮಪಯಣದ ಸವಿಜೇನು ಸವಿಯಲು ಮುಂದಾಗೋಣ.
ನಿನ್ನೊಲುಮೆಯ ಒಪ್ಪಿಗೆಯ ನಿರೀಕ್ಷೆಯಲಿ…
ಅಶೋಕ ವಿ. ಬಳ್ಳಾ, ಬಾಗಲಕೋಟ