Advertisement

ಕಾನೂನು ತಜ್ಞರೊಂದಿಗೆ ಸಿಎಂ ಚರ್ಚೆ?

06:35 AM Nov 08, 2018 | Team Udayavani |

ಬೆಂಗಳೂರು:ಎಸ್ಸಿ -ಎಸ್ಟಿ ನೌಕರರ ಮುಂಬಡ್ತಿ ಸಂಬಂಧ ವಿಶೇಷ ಕಾಯ್ದೆ ಜಾರಿಗೊಳಿಸುವ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳವಾರ ಸುಪ್ರೀಂ ಕೋರ್ಟ್‌ ನ್ಯಾಯವಾದಿ ಬಸವಪ್ರಭು ಹಾಗೂ ಅಡ್ವಕೇಟ್‌ ಜನರಲ್‌ ಉದಯ್‌ ಹೊಳ್ಳ ಹಾಗೂ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಕಾರ್ಯದರ್ಶಿ ಪ್ರತ್ಯೇಕ ಸಭೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಮುಖ್ಯಮಂತ್ರಿಯವರ ಕಚೇರಿ ಮೂಲಗಳು ಇದನ್ನು ನಿರಾಕರಿಸಿ ಅಂತಹ ಯಾವುದೇ ಸಭೆ ನಡೆದಿಲ್ಲ ಎಂದು ತಿಳಿಸಿದೆ.

Advertisement

ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಬೆಂಗಳೂರಿನಲ್ಲಿಯೇ ಇದ್ದರೂ ಮುಖ್ಯಮಂತ್ರಿಯವರು ನಡೆಸಿದ ಸಭೆಗೆ ಆಹ್ವಾನ ಇರಲಿಲ್ಲ . ಈ ಬೆಳವಣಿಗೆಯ ನಂತರ ಡಾ.ಜಿ.ಪರಮೇಶ್ವರ್‌ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಪ್ರತ್ಯೇಕ ಸಭೆ ನಡೆಸಿದರು. ರಾಜ್ಯ ಎಸ್ಸಿ- ಎಸ್ಟಿ ನೌಕರರು ಇದೇ ಸಂದರ್ಭದಲ್ಲಿ ಪರಮೇಶ್ವರ್‌ ಭೇಟಿ ಮಾಡಿ ಸರ್ಕಾರದ ನಿರ್ಧಾರ ಸ್ಪಷ್ಟ ಪಡಿಸುವಂತೆ ಒತ್ತಡ ಹೇರಿದರು ಎಂದು ಹೇಳಲಾಗಿದೆ.

ಪ್ರತ್ಯೇಕ ಸಭೆಯ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಡಾ.ಜಿ.ಪರಮೇಶ್ವರ್‌, ಮುಖ್ಯಮಂತ್ರಿಯವರು ಸಭೆ ನಡೆಸಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಮ್ಮನ್ನು ಸಭೆಗೆ ಕರೆಯಬೇಕು ಎಂದಿದ್ದರೆ ಮೊದಲೇ ಹೇಳುತ್ತಿದ್ದರು. ಕಾನೂನು ತಜ್ಞರನ್ನು ಏಕೆ ಕರೆಸಿದ್ದರೋ, ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ ಎಂದು ಹೇಳಿದರು.

ಎಸ್ಸಿ -ಎಸ್ಟಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್‌, ರಾಜ್ಯ ಸರ್ಕಾರ ಮಂಡಿಸಿದ್ದ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ರಾಜ್ಯ ಸರ್ಕಾರ ಮಾರ್ಗಸೂಚಿ ಅನುಸರಿಸುವಲ್ಲಿ ಮೀನ ಮೇಷ ಎಣಿಸುತ್ತಿದೆ. ಪರಮೇಶ್ವರ್‌ ಹಾಗೂ ಪ್ರಿಯಾಂಕ್‌ ಖರ್ಗೆ ಬೆಂಗಳೂರಿನಲ್ಲಿಯೇ ಇರುವಾಗ ಅವರ ಗಮನಕ್ಕೆ ತಾರದೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಭೆ ನಡೆಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next