ಉಡುಪಿ: ಕೊಂಕಣಿ ಭಾಷಿಕರು ತಮ್ಮ ಮನೆಗಳಲ್ಲಿ ಮಕ್ಕಳೊಂದಿಗೆ ಪ್ರತಿನಿತ್ಯ ಮಾತನಾಡುತ್ತ ವ್ಯವಹರಿಸಿದಾಗ ಕೊಂಕಣಿ ಭಾಷೆ ವೃದ್ಧಿಯಾಗಲಿದೆ. ಮಕ್ಕಳಿಗೆ ಭಾಷೆ ಮತ್ತು ಸಂಸ್ಕೃತಿಯನ್ನು ಕಲಿಸುವ ಮೂಲಕ ಭಾಷೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಲೆಕ್ಕಪರಿಶೋಧಕ ಗುಜ್ಜಾಡಿ ಪ್ರಭಾಕರ ನಾಯಕ್ ಅಭಿಪ್ರಾಯಪಟ್ಟರು.
ಎಂಜಿಎಂ ಕಾಲೇಜಿನಲ್ಲಿ ಮಂಗಳೂರು ವಿ.ವಿ. ಕೊಂಕಣಿ ಅಧ್ಯಯನ ಪೀಠದ ಸಹಯೋಗದಲ್ಲಿ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಹಮ್ಮಿಕೊಳ್ಳಲಾದ ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಸುಮಾರು ಐದು ಸಾವಿರ ವರ್ಷಗಳ ಹಿಂದೆ ಹುಟ್ಟಿದ ಕೊಂಕಣಿ ಭಾಷೆಯು ಸ್ವತಂತ್ರ ಭಾಷೆಯಾಗಿ ಮಾನ್ಯತೆ ಪಡೆದು, ಸಂವಿಧಾನದಲ್ಲಿ ಅಳವಡಿಕೆಯಾಗಿದೆ. ಮಂಗಳೂರು ವಿ.ವಿ. ಕೊಂಕಣಿ ಅಧ್ಯಯನ ಪೀಠ ರಚಿಸಿದೆ. ವಿವಿಧ ರಾಜ್ಯ, ರಾಷ್ಟ್ರಗಳಲ್ಲಿ ನೆಲೆಸಿರುವ ಕೊಂಕಣಿ ಭಾಷಿಕರು ಸಂಘಟಿತರಾಗಿ ಭಾಷೆಯ ಅಭಿವೃದ್ಧಿಗೆ ವಿಶೇಷವಾಗಿ ಗಮನಹರಿಸಿ ಭಾಷೆಯನ್ನು ಉಳಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿ.ವಿ. ಕುಲಪತಿ ಡಾ| ಜಯರಾಜ್ ಅಮೀನ್ ಮಾತನಾಡಿ, ಭಾಷೆಯನ್ನು ಬೆಳೆಸುವ ಜವಾಬ್ದಾರಿ ಭಾಷಿಕರ ಮೇಲೆಯೇ ಇರುತ್ತದೆ. ಕೊಂಕಣಿ ಒಂದು ಭಾಷೆಯಾಗಿರದೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯನ್ನು ಹೊಂದಿದೆ. ಕೊಂಕಣಿಗರ ಸಂಖ್ಯೆ ಕಡಿಮೆಯಿದ್ದರೂ ದೇಶದ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಭಾಷೆ ಧರ್ಮವನ್ನು ಮೀರಿ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿರುವುದಲ್ಲದೆ, ಬಹು ಭಾಷೆ ಮಾತನಾಡುವ ಕೊಂಕಣಿಗರು ಪ್ರತಿಭಾನ್ವಿತರೂ ಹೌದು ಎಂದರು.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ| ಜೆರಾಲ್ಡ್ ಪಿಂಟೋ, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಕಾರ್ಯದರ್ಶಿ ವರದರಾಯ ಪೈ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಲೆಕ್ಕಪರಿಶೋಧಕ ನಂದಗೋಪಾಲ ಶೆಣೈ, ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತ, ಕೊಂಕಣಿ ಸ್ನಾತಕೋತ್ತರ ವಿಭಾಗದ ಉಪನ್ಯಾಸಕ ಡಾ| ಬಿ. ದೇವದಾಸ ಪೈ, ಕೊಂಕಣಿ ಸಾಹಿತಿ ಪೂರ್ಣಿಮಾ ಸುರೇಶ್ ಮಾತನಾಡಿದರು.
ವಿ| ಪಿ. ಗುರುದಾಸ ಶೆಣೈ ಹಾಗೂ ತಂಡದವರಿಂದ ಕೊಂಕಣಿ ಗೀತಗಾಯನ ನೆರವೇರಿತು.
ಮಂಗಳೂರು ವಿ.ವಿ. ಕುಲಪತಿ ಡಾ| ಜಯರಾಜ್ ಅಮೀನ್ ಅವರನ್ನು ಸಮ್ಮಾನಿಸಲಾಯಿತು. ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಡಾ| ಜಯವಂತ ನಾಯಕ್ ಸ್ವಾಗತಿಸಿದರು. ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ| ವಿಶ್ವನಾಥ ಪೈ ಎಂ. ವಂದಿಸಿದರು. ಶಾರದಾ ರೆಸಿಡೆನ್ಶಿಯಲ್ ಕಾಲೇಜಿನ ಉಪನ್ಯಾಸಕಿ ಪ್ರೊ| ಶೈಲಜಾ ಪೈ ಬಿ.ಕೆ. ನಿರೂಪಿಸಿದರು.