ಬೆಂಗಳೂರು: ದೇಶದ ಆರ್ಥಿಕ ವ್ಯವಸ್ಥೆಯನ್ನು 5 ಟ್ರಿಲಿಯನ್ ಡಾಲರ್‌ಗೆ ಕೊಂಡೊಯ್ಯುವ ಸಂಬಂಧ ಸಿಂಡಿಕೇಟ್ ಬ್ಯಾಂಕ್ ನೇತೃತ್ವದಲ್ಲಿ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ, ನಗರದಲ್ಲಿ ವಿವಿಧ ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಚರ್ಚೆ ನಡೆಸಿತು. ಸಿಂಡಿಕೇಟ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ನೇತೃತ್ವದಲ್ಲಿ ಸಭೆ ನಡೆಯಿತು.
ಗುರುವಾರದಿಂದ 2 ದಿನಗಳ ಕಾಲ ಖಾಸಗಿ ಹೋಟೆಲ್‌ನಲ್ಲಿ ನಡೆದ ಈ ಸಭೆಯಲ್ಲಿ ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಸೇರಿ ಸುಮಾರು 15 ರಾಷ್ಟ್ರೀಕೃತ ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡು, ದೇಶದ ಸಮಗ್ರ ಆರ್ಥಿಕ ಪ್ರಗತಿ ಬಗ್ಗೆ ಸಮಾಲೋಚನೆ ನಡೆಸಿದರು. ಬ್ಯಾಂಕ್ ಉದ್ಯಮದ ಲಾಭ ಮತ್ತು ನಷ್ಟಗಳ ಬಗ್ಗೆ ಹಾಗೂ ಬ್ಯಾಂಕ್‌ಗಳನ್ನು ಮತ್ತಷ್ಟು ಜನಸ್ನೇಹಿ ಮಾಡುವ ಕುರಿತಂತೆ ಚರ್ಚೆ ನಡೆಸಿದರು.
9 ಅಂಶಗಳ ಬಗ್ಗೆ ಚರ್ಚೆ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಂಡಿಕೇಟ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ, ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಡಿಜಿಟಲ್ ಪಾವತಿ ಹಾಗೂ ಕಾರ್ಪೋರೇಟ್ ಆಡಳಿತ ಮತ್ತು ಮಧ್ಯಮವರ್ಗದ ಕೈಗಾರಿಕೆಗಳಿಗೆ ಸಾಲದ ನೆರವು, ತಂತ್ರಜ್ಞಾನದ ಬಳಕೆ, ಆರ್ಥಿಕ ನೆರವು, ಕೃಷಿ ಸಾಲ, ಅಂತರ್ ಜಾಲವನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು ಸೇರಿ ಸುಮಾರು 9 ಅಂಶಗಳು ಸಭೆಯಲ್ಲಿ ಚರ್ಚೆಗೆ ಬಂದವು ಎಂದರು. ಭಾರತದ ಆರ್ಥಿಕ ವ್ಯವಸ್ಥೆಯನ್ನು 5 ಟ್ರಿಲಿಯನ್ ಡಾಲರ್‌ಗೆ ಕೊಂಡೊಯ್ಯುವ ಸಂಬಂಧ ಸಾಕಷ್ಟು ಚರ್ಚೆ ನಡೆಯಿತು.
ಜೊತೆಗೆ ಅಂತರ್ ಬ್ಯಾಂಕ್ ರಾಜ್ಯಮಟ್ಟದಲ್ಲಿ ಭಾಗವಹಿಸುವಿಕೆ ಹಾಗೂ ಸ್ಥಳೀಯ ಮಟ್ಟದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ನಡೆದ ಚರ್ಚೆಗಳ ಬಗ್ಗೆ ಆರೋಗ್ಯ ಪೂರ್ಣ ಸಮಾಲೋಚನೆ ನಡೆಯಿತು ಎಂದು ಹೇಳಿದರು. ಸದ್ಯದಲ್ಲೇ ಬ್ಯಾಂಕ್ ಅಧ್ಯಕ್ಷರ, ವ್ಯವಸ್ಥಾಪಕ ನಿರ್ದೇಶಕರ, ಕಾರ್ಯನಿರ್ವಾಹಕ ನಿರ್ದೇಶಕರ ಸಭೆ ನಡೆಯಲಿದ್ದು ಅಂತಿಮ ನಿರ್ಣಯನ್ನು ಕೇಂದ್ರ ಹಣಕಾಸು ಸಚಿವರಿಗೆ ಮತ್ತು ಪ್ರಧಾನ ಮಂತ್ರಿಗಳಿಗೆ ನೀಡಲಾಗುವುದು ಎಂದು ತಿಳಿಸಿದರು.
ಮಹಿಳಾ ಸಬಲೀಕರಣಕ್ಕೆ ಒತ್ತು: ಕೆನರಾ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಬಿ.ಯೋಗೀಶ್ ಆಚಾರ್ಯ ಮಾತನಾಡಿ, ಸರ್ವರಿಗೂ ಸೂರು, ಮಹಿಳಾ ಸಬಲೀಕರಣ, ಸ್ವತ್ಛಭಾರತ್, ಕೃಷಿ ಜೀವನವನ್ನು ಉತ್ತಮ ಪಡಿಸುವುದು, ಬ್ಯಾಂಕ್‌ಗಳ ಮತ್ತಷ್ಟು ಡಿಜಿಟಲೀಕರಣ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಸೇರಿ ಹಲವು ವಿಚಾರಗಳ ಬಗ್ಗೆ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಸಲಹೆ ನೀಡಿದರು ಎಂದರು. ರಾಷ್ಟ್ರೀಯ ಆದ್ಯತೆಗಳ ವಿಷಯಗಳಲ್ಲಿ ಎಲ್ಲಾ ಬ್ಯಾಂಕ್‌ಗಳನ್ನು ಒಗ್ಗೂಡಿಸುವುದು. ಭಾರತೀಯ ಆರ್ಥಿಕ ವ್ಯವಸ್ಥೆಯನ್ನು ಉತ್ತಮಪಡಿಸಲು ಸಾರ್ವಜನಿಕ ವಲಯದ ಪಾತ್ರಗಳನ್ನು ಹೆಚ್ಚಿಸುವುದು ಹೇಗೆ?
ಎಂಬುವುದರ ಕುರಿತು ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳ ನಷ್ಟ ಅನುಭವಿಸುತ್ತಿದ್ದು, ವಾಹನ ಕೊಳ್ಳುವವರ ಸಂಖ್ಯೆ ಕೂಡ ಕಡಿಮೆಯಾಗುತ್ತಿದೆ. ಆದರೂ ಕೂಡ ದೇಶದ ಆರ್ಥಿಕತೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಂಬಂಧ ಸರ್ಕಾರಕ್ಕೆ ಸಲಹೆ ನೀಡಲಾಗುವುದು ಎಂದು ಸಿಂಡಿಕೇಟ್ ಬ್ಯಾಂಕ್‌ನ ಹಿರಿಯ ಅಧಿಕಾರಿ ನಾಗೇಶ್ವರರಾವ್ ಹೇಳಿದರು. ಸಿಂಡಿಕೇಟ್‌ನ ಬ್ಯಾಂಕ್‌ನ ಹಿರಿಯ ಅಧಿಕಾರಿ ಅಜಯ್ ಖುರಾನಾ, ಎಸ್.ಕೃಷ್ಣನ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.