Advertisement
ಮಳೆ ಸುರಿಯುತ್ತಿದ್ದರೂ ಹೋರಿ ಮಳಿಗೆ ಮುಂಭಾಗ ಮಾತ್ರ ಜನ ಗಿಜಿಗಿಜಿ ಎನ್ನುತ್ತಿದ್ದರು. ಅದರ ಮೈಕಟ್ಟು ಹಾಗೂ ಕೋಟಿ ರೂ. ಬೆಲೆ ಬಾಳುವ ಹೋರಿ ಎಂಬ ಕಾರಣದಿಂದ ನೋಡುಗರು ಸೆಲ್ಫಿಗೆ ಮುಗಿಬಿದ್ದರು. ಈ ಹೋರಿಗೆ ಸವಾಲು ನೀಡಲು ಹಳ್ಳಿಕಾರ್ ಎತ್ತುಗಳನ್ನು ಸಹ ಪ್ರದರ್ಶನಕ್ಕೆ ಇಡಲಾಗಿತ್ತು. ಈ ಎತ್ತುಗಳಿಗೆ ಸುಮಾರು 1.5 ಲಕ್ಷ ರೂ.ಗಳಿಂದ 2 ಲಕ್ಷ ರೂ. ಗಳು ಮಾತ್ರ ಬೆಲೆ ಬಾಳುತ್ತಿದ್ದವು. ಈ ಎತ್ತುಗಳ ಮಾಲೀಕರ ಬಳಿಯೂ ಜನ ಕೋಟಿ ರೂ.ಗಳ ಹಳ್ಳಿಕಾರ್ ಹೋರಿಯನ್ನು ಕೇಳುತ್ತಿದ್ದರಿಂದ, ಎತ್ತುಗಳ ಮಾಲೀಕರು, ತಮ್ಮ ತಾಳ್ಮೆ ಕಳೆದುಕೊಂಡು ಜನರು ಮೇಲೆ ರೇಗಾಡಿದ್ದು ಉಂಟು.
ಮಳ್ಳಿವಳ್ಳಿಯ ಬೋರೇಗೌಡ ಎಂಬುವವರು ಹಳ್ಳಿಕಾರ್ ಹೋರಿಯನ್ನು ಸಾಕಿದ್ದು, ದಕ್ಷಿಣ ಭಾರತದಲ್ಲಿಯೇ ತಳಿ ಅಭಿವೃದ್ಧಿಗೆ ಹೆಸರುವಾಸಿಯಾಗಿದೆ. ವರ್ಷದಿಂದ ವರ್ಷಕ್ಕೆ ಈ ಹೋರಿಯ ವೀರ್ಯಾಣುವಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ, ಈ ಹಿಂದೆ 65 ಲಕ್ಷ ರೂ.ವೆಂದು ಹೇಳಿದ್ದವರು, ಈಗ ಹೋರಿ ಬೆಲೆಯನ್ನು ಕೋಟಿಗೆ ಹೆಚ್ಚಳ ಮಾಡಿಕೊಂಡಿದ್ದಾರೆ. ಹೋರಿಗೆ ಕೋಟಿ ರೂ. ಕುರಿತು ಮಾತನಾಡಿದ ಬೋರೇಗೌಡ, ಸುಮಾರು ಮೂರೂವರೆ ವರ್ಷ ವಯಸ್ಸಿನ ಹೋರಿ ವೀರ್ಯಕ್ಕೆ ದೇಶಾದ್ಯಂತ ಭಾರೀ ಬೇಡಿಕೆಯಿದೆ. ವಾರಕ್ಕೆ ಎರಡು ಬಾರಿ ವೀರ್ಯಾಣು ತೆಗೆದು, ಸಂಗ್ರಹಿಸಿಟ್ಟು ಒಂದು ಡೋಸ್ ವೀರ್ಯಾಣು ವನ್ನು ಒಂದು ಸಾವಿರ ರೂ. ನಂತೆ ಮಾರಲಾಗುತ್ತದೆ. ಹೀಗಾಗಿಯೇ ಇದಕ್ಕೆ ಬೇಡಿಕೆ ಹೆಚ್ಚಾಗಿದೆ. ರಾಮನಗರ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇದರ ವೀರ್ಯ ಮಾರಾಟ ಘಟಕಗಳನ್ನು ತೆರೆಯಲಾಗಿದೆ. ಈ ಹೋರಿ ನೋಡಲು ದಷ್ಟಪುಷ್ಟವಾಗಿದ್ದು, 6.2 ಅಡಿ ಎತ್ತರ, ಸುಮಾರು 8 ಅಡಿಗೂ ಹೆಚ್ಚು ಉದ್ದವಿದೆ. ಬರೋಬ್ಬರಿ 700 ಕೆ.ಜಿ.ಗೂ ಹೆಚ್ಚಿನ ತೂಕವನ್ನು ಹೊಂದಿದೆ. “ಕೃಷ್ಣ’ ಎಂದು ಹೆಸರಿಡಲಾಗಿದೆ ಎಂದರು.
Related Articles
Advertisement
*ಎನ್.ಎಲ್.ಶಿವಮಾದು