ಬೆಂಗಳೂರು: ನಗರದಲ್ಲಿ ಬೀದಿ ನಾಯಿ ಹಾವಳಿ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಶೀಘ್ರದಲ್ಲಿಯೇ ಪ್ರಾಣಿದಯಾ ಸಂಘ-ಸಂಸ್ಥಗಳೊಂದಿಗೆ ಚರ್ಚಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.
ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ನಗರದಲ್ಲಿ ಭಾನುವಾರ ಗಂಗಾಂಬಿಕೆ ಅವರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಮಹಾಸಭಾ ಪ್ರಧಾನ ಕಾರ್ಯದರ್ಶಿಯವರು ಮಾತನಾಡುತ್ತಾ, ನಗರದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದೆ. ಜತೆಗೆ ಪಾಲಿಕೆಯ ಅಧಿಕಾರಿಗಳು ಸಂತಾನಹರಣ ಶಸ್ತ್ರಚಿಕಿತ್ಸೆ (ಎಬಿಸಿ) ನಡೆಸಿದ ಬಳಿಕ ನಾಯಿಗಳ ಆರೋಗ್ಯದ ಬಗ್ಗೆ ನಿಗಾ ವಹಿಸುತ್ತಿಲ್ಲ ಎಂದು ಗಮನ ಸೆಳೆದರು.
ಪಾಲಿಕೆಯ ವ್ಯಾಪ್ತಿಯಲ್ಲಿ ನಾಯಿಗಳ ಉಪಳಟ ಹೆಚ್ಚಾಗಿದ್ದು, ಇತ್ತೀಚೆಗೆ ವಿಭೂತಿಪುರದಲ್ಲಿ 11 ವರ್ಷ ಬಾಲಕನೊಬ್ಬ ಬೀದಿ ನಾಯಿ ದಾಳಿಯಿಂದಾಗಿ ಸಾವನ್ನಪ್ಪಿದ್ದಾನೆ. ನಿತ್ಯ ಒಂದಿಲ್ಲೊಂದು ಭಾಗದಲ್ಲಿ ನಾಯಿ ದಾಳಿ ಪ್ರಕರಣಗಳಾಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಖ್ಯಾತಿಗೆ ಚ್ಯುತಿ ಉಂಟಾಗುತ್ತಿದೆ. ಹೀಗಾಗಿ ಗೋಶಾಲೆಗಳ ಮಾದರಿಯಲ್ಲಿ ಶ್ವಾನ ಶಾಲೆಗಳನ್ನು ನಗರದ ನಾಲ್ಕು ದಿಕ್ಕುಗಳಲ್ಲಿ ತೆರೆಯಬೇಕು ಎಂದು ಕೋರಿದ್ದಾರೆ ಎನ್ನಲಾಗಿದೆ.
ಅದಕ್ಕೆ ಸ್ಪಂದಿಸಿದ ಮೇಯರ್, ಶೀಘ್ರದಲ್ಲಿಯೇ ಪ್ರಾಣಿದಯಾ ಸಂಘಗಳ ಪದಾಧಿಕಾರಿಗಳ ಸಭೆ ಕರೆಯಲಾಗುವುದು. ಜತೆಗೆ ನಾಯಿ ಹಾವಳಿ ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಚರ್ಚೆ ನಡೆಸಲಾಗುವುದು. ಒಂದೊಮ್ಮೆ ಅಗತ್ಯ ಬಿದ್ದರೆ ಹೊರ ವಲಯದಲ್ಲಿ ನಾಯಿಗಳಿಗೆ ಸೌಲಭ್ಯ ಕಲ್ಪಿಸುವ ಕುರಿತಂತೆ ಚಿಂತನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ನಾಯಿಯನ್ನು ಕೂಡಿ ಹಾಕುವಂತಿಲ್ಲ: ಮೇಯರ್ ಪ್ರಾಣಿದಯಾ ಸಂಘಟನೆಗಳೊಂದಿಗೆ ಈ ಕುರಿತು ಚರ್ಚಿಸುವುದಾಗಿ ತಿಳಿಸಿದ್ದರೂ, ನಾಯಿಗಳನ್ನು ಕೂಡಿ ಹಾಕಲು ನಾಯಿದೊಡ್ಡಿಗಳನ್ನು ನಿರ್ಮಿಸಲು ಅವಕಾಶವಿಲ್ಲ. ಸುಪ್ರೀಂ ಕೋರ್ಟ್‌ನ ಆದೇಶದಂತೆ ನಾಯಿಗಳಿಗೆ ಎಬಿಸಿ ನಡೆಸಿದ ನಂತರ 72 ಗಂಟೆ ಮಾತ್ರ ನಾಯಿ ದೊಡ್ಡಿಗಳಲ್ಲಿ ಇರಿಸಿಕೊಳ್ಳಬಹುದಾಗಿದೆ. ಉಳಿದಂತೆ ಯಾವುದೇ ಕಾರಣಕ್ಕೂ ನಾಯಿಗಳನ್ನು ಕೂಡಿ ಹಾಕುವಂತಿಲ್ಲ ಎಂದು ಪ್ರಾಣಿ ದಯಾ ಸಂಘಗಳು ತಿಳಿಸಿವೆ.