Advertisement

ಪೂಜಾರಿ ಮನೆಯಲ್ಲಿ ಶೆಟ್ರಾ ಯಜಮಾನರು: ಇದು ರೇಷನ್‌ ಸಮಸ್ಯೆ

08:30 AM Aug 22, 2017 | Team Udayavani |

ಉಡುಪಿ: ಅಲ್ಲಿ ಪೂಜಾರಿ ಕುಟುಂಬದವರ ಮನೆಯಲ್ಲಿ ಶೆಟ್ಟರು ಯಜಮಾನರಾಗಿದ್ದಾರೆ. ಶೆಟ್ಟರ ಮನೆಯ ಇಬ್ಬರು ಸದಸ್ಯರು ಪೂಜಾರಿ ಕುಟುಂಬಕ್ಕೆ ಸೇರ್ಪಡೆಗೊಂಡಿದ್ದಾರೆ. ಇದು ಅಧಿಕಾರಿಗಳ ಅಚಾತುರ್ಯದಿಂದ ರೇಷನ್‌ ಕಾರ್ಡ್‌ ಮಾಡಿಸುವ ವೇಳೆ ಉದ್ಭವಿಸಿದ ಸಮಸ್ಯೆ. ಇದರಿಂದ ಬ್ರಹ್ಮಾವರ ಭಾಗದ ಬೆಣ್ಣೆಕುದ್ರುವಿನಲ್ಲಿರುವ ಈ ಬಿಲ್ಲವ ಹಾಗೂ ಬಂಟ ಕುಟುಂಬಗಳೆರಡಕ್ಕೆ ಪಡಿತರ ಸೌಲಭ್ಯ ಸಿಗ್ತಿಲ್ಲ. 

Advertisement

ಇದು ತಾ.ಪಂ. ಸದಸ್ಯ ಸುಧೀರ್‌ ಶೆಟ್ಟಿ ಅವರು ಪಡಿತರ ಚೀಟಿ ವಿತರಣೆ ವೇಳೆ ಆಗುತ್ತಿರುವ ಆಚಾತುರ್ಯದ ಕುರಿತು ಈ ಎರಡು ಕುಟುಂಬಗಳ ಸಮಸ್ಯೆ ಪ್ರಸ್ತಾವಿಸಿ, ಒಂದು ಕುಟುಂಬದ ವ್ಯಕ್ತಿಗೆ ಮತ್ತೂಂದು ಜಾತಿಯ ಕುಟುಂಬದ ರೇಷನ್‌ 
ಕಾರ್ಡ್‌ಗೆ ಹೇಗೆ ಹೋಗಲು ಸಾಧ್ಯ. ಈ ಗೊಂದಲ ಸೃಷ್ಠಿಯಾದದ್ದಾದರೂ ಹೇಗೆ? ಅಧಿಕಾರಿಗಳ ತಪ್ಪಿನಿಂದಾಗಿ ಈಗ ಈ ಎರಡು ಕುಟುಂಬಕ್ಕೆ ಅನ್ಯಾಯವಾಗ್ತಿದೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. 

ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌ ಅಧ್ಯಕ್ಷತೆ ಯಲ್ಲಿ ಪಂಚಾಯತ್‌ ಸಭಾಂಗಣದಲ್ಲಿ ಸೋಮವಾರ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು. 

ಮುದರಂಗಡಿ ಗ್ರಾ.ಪಂ. ವ್ಯಾಪ್ತಿಯ ಅಂಗವಿಕಲ ಕುಟುಂಬವೊಂದರ ಸಮಸ್ಯೆ ಪ್ರಸ್ತಾವಿಸಿದ ಸದಸ್ಯ ಮೈಕಲ್‌ ಡಿ’ಸೋಜ ಅವರು ಆ ಮಹಿಳೆ ಅಂಗವಿಕಲೆಯಾಗಿದ್ದು, ರೇಷನ್‌ ಕಾರ್ಡ್‌ಗಾಗಿ ಬೆಳಗ್ಗಿನಿಂದ ಸಂಜೆವರೆಗೂ ಕಾದರೂ ಸರ್ವರ್‌ ಪ್ರಾಬ್ಲಿಂ ಅಂತ ಹೇಳಿ ಅವರನ್ನು ಕಾಯಿಸಿದ್ದಾರೆ. ಅದೇ ರೀತಿ ಎಪಿಎಲ್‌ ಸಿಗಬೇಕಾದವರಿಗೆ ಬಿಪಿಎಲ್‌ ಸಿಕ್ಕಿದೆ. ಬಿಪಿಎಲ್‌ ಅರ್ಹರಿಗೆ ಎಪಿಎಲ್‌ ಸಿಗುತ್ತಿದೆ. ಇದರಿಂದ ಅರ್ಹರಿಗೆ ಬಿಪಿಎಲ್‌ ಕಾರ್ಡ್‌ ಸಿಗುತ್ತಿಲ್ಲ ಎಂದು ದೂರಿದರು. 

ತಿಂಗಳಲ್ಲಿ ಸಮಸ್ಯೆ ಇತ್ಯರ್ಥ
ಇದಕ್ಕುತ್ತರಿಸಿದ ಉಡುಪಿ ಪ್ರಭಾರ ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌ ಈ ರೀತಿ ವ್ಯಕ್ತಿಗಳ ಬದಲಾವಣೆ, ಹೆಸರು ಅದಲು- ಬದಲು ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ನಡೆಯುತ್ತಿರುವ ಸಮಸ್ಯೆ. ಕಂಪ್ಯೂಟರ್‌ಗೆ ಫೀಡ್‌ ಮಾಡುವಾಗ ತಪ್ಪುಗಳಾಗುತ್ತಿದ್ದು, ಹಾಗಾಗದಂತೆ ಎಚ್ಚರ ವಹಿಸಲಾಗುವುದು ಎಂದ ಅವರು, ಉಡುಪಿ ತಾಲೂಕಿನಲ್ಲಿ ಮೊದಲು ರೇಷನ್‌ ಕಾರ್ಡಿಗೆ 1,862 ಅರ್ಜಿ ಬಂದಿದ್ದು, ಅದರಲ್ಲಿ 1,518 ರ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನು 344 ಅರ್ಜಿ ಪರಿಶೀಲನೆಗೆ ಬಾಕಿ ಇದೆ. 1,211 ಡಾಟಾ ಎಂಟ್ರಿ ಆಗಿದೆ. 2ನೇ ಹಂತದಲ್ಲಿ ಮತ್ತೆ 1,821 ಅರ್ಜಿ ಸಲ್ಲಿಕೆಯಾಗಿದ್ದು, 1 ತಿಂಗಳಲ್ಲಿ ಪಡಿತರ ಚೀಟಿ ಸಿಗುವಂತೆ ಮಾಡಲಾಗುವುದು ಎಂದರು. 

Advertisement

ಸದಸ್ಯರಿಗೆ ಹಲ್ಲೆ: ಖಂಡನಾ ನಿರ್ಣಯ
ಸದಸ್ಯ ಸುಭಾಶ್‌ ನಾಯಕ್‌ ಮಾತನಾಡಿ ಪೆರ್ಡೂರು ಗ್ರಾಮಸಭೆಗೆ ಹೋದಾಗ ನನ್ನ ಮೇಲೆ ಗಿರೀಶ್‌ ಭಟ್‌ ಎಂಬುವರು ಹಲ್ಲೆಗೈದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಾಗಾದರೆ ತಾ.ಪಂ. ಸದಸ್ಯರಿಗೆ ಏನೂ ಅಧಿಕಾರವೇ ಇಲ್ಲವಾ?, ಹಲ್ಲು ಕಿತ್ತ ಹಾವೇ ಎಂದು ಪ್ರಶ್ನಿಸಿದರು. ಈ ಸಂದರ್ಭ ಗಿರೀಶ್‌ ಭಟ್‌ ವಿರುದ್ಧ ತಾ.ಪಂ. ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು. ಎಲ್ಲ ಸದಸ್ಯರು ಇದನ್ನು ಅನುಮೋದಿಸಿದರು.

“ಸಿಬಂದಿ ಕೊರತೆಯಿದೆ’
ರಾಜ್ಯದ ಎಲ್ಲ ತಾಲೂಕುಗಳಲ್ಲಿ ಶೇ. 50 ರಷ್ಟು ಅಧಿಕಾರಿಗಳ ಕೊರತೆಯಿದೆ. ಉಡುಪಿ ತಾಲೂಕು ಕಚೇರಿಗಳಲ್ಲಿ ಕೇವಲ 28 ಸಿಬಂದಿಯಿದ್ದಾರೆ. ಈ ಸಮಸ್ಯೆಯನ್ನು ಸರಕಾರದೊಂದಿಗೆ ಮಾತನಾಡಿ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಸದಸ್ಯ ಭುಜಂಗ ಶೆಟ್ಟಿ ಅವರ ಮನವಿಗೆ ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಉತ್ತರಿಸಿದರು. 

ಡಿಸಿ ಸೂಚನೆಯಂತೆ ಮೈನ್‌ ಶಾಲೆಯ ವಿದ್ಯಾರ್ಥಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿ ಸರಿಯಾದ ನಿರ್ಣಯ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು ಅವರ ಪ್ರಶ್ನೆಗೆ ಉತ್ತರಿಸಿದರು. ಕಾಡೂರು ಗ್ರಾ.ಪಂ.ನ ತಂತ್ರಾಡಿ ಶಾಲೆಯ ಕಟ್ಟಡ ಕುಸಿಯುವ ಭೀತಿಯಿದ್ದು, ಕಂಪೌಂಡ್‌ ಇಲ್ಲದೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಭುಜಂಗ ಶೆಟ್ಟಿ ಪ್ರಶ್ನಿಸಿದರು. 

ಆಧಾರ್‌, ಪಡಿತರ ಕಾರ್ಡ್‌ ಸಿಗದೆ ಭಾಗ್ಯಲಕ್ಷ್ಮಿಯಂತಹ ಸರಕಾರದ ಅನೇಕ ಯೋಜನೆಗಳ ಸೌಲಭ್ಯ ಪಡೆಯಲು ಆಗುತ್ತಿಲ್ಲ ಎಂದು ಸದಸ್ಯರು ಪ್ರಸ್ತಾವಿಸಿದರು. ಅಂಗನವಾಡಿ ಕಟ್ಟಡ ಕುಸಿದು ಬೀಳುವ ಆತಂಕ, ಹೆಚ್ಚಿನ ಸಹಾಯಕಿಯರ ಕೊರತೆ, ಸವಲತ್ತುಗಳ ಸಮಸ್ಯೆ ಇದೆ ಎಂದು ಸದಸ್ಯರು ಪ್ರಸ್ತಾವಿಸಿದರು. ಬೆಳ್ಳೆ ಪಿಡಿಒ ರಜೆ ಮೇಲೆ ತೆರಳಿ ತಿಂಗಳಾಗಿದೆ ಎಂದು ಸದಸ್ಯೆ ಸುಜಾತ ಸುವರ್ಣ ಹೇಳಿದ್ದಕ್ಕೆ ತತ್‌ಕ್ಷಣಕ್ಕೆ ಹೆಜಮಾಡಿ ಪಿಡಿಒ ಅವರನ್ನು ನಿಯೋಜಿಸಲಾಗುವುದು ಎಂದು ಇಒ ಹೇಳಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ನೇಮಕ ಕುರಿತು ಸದಸ್ಯರು ಪ್ರಶ್ನಿಸಿದರು.

ಸಭೆಯಲ್ಲಿ  ಸ್ಥಾಯಿ ಸಮಿತಿ ಅಧ್ಯಕ್ಷೆ ನೀತಾ ಗುರುರಾಜ್‌, ಕಾರ್ಯ ನಿರ್ವಹಣಾಧಿಕಾರಿ ಮನೋಹರ್‌ ಉಪಸ್ಥಿತರಿದ್ದರು. 

ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಿ: ಕೋಟ
ಮುದರಂಗಡಿ ಗ್ರಾ.ಪಂ. ವ್ಯಾಪ್ತಿಯ ಕಾಮಗಾರಿಯೊಂದನ್ನು ಪುನರ್‌ ಆರಂಭಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಆ ಭಾಗದ ತಾ.ಪಂ. ಸದಸ್ಯ ಮೈಕಲ್‌ ಡಿಸೋಜ ಅವರ ವಿರುದ್ಧ ಪಿಡಿಒ ಅವರು ಪೊಲೀಸರಿಗೆ ದೂರು ನೀಡಿ ಬಂಧಿಸಲು ಸೂಚಿಸಿದ್ದು, ಪಿಡಿಒಗೆ ಈ ಅಧಿಕಾರವಿದೆಯೇ? ತಾ.ಪಂ. ಅಧ್ಯಕ್ಷೆ, ಇಒ ಗೆ ತಿಳಿಸದೆ ಬಂಧಿಸಲು ಸೂಚಿಸಿದ್ದು ಸರಿಯೇ, ಇದು ನನ್ನನ್ನು ರಾಜಕೀಯವಾಗಿ ಕುಗ್ಗಿಸುವ ಪ್ರಯತ್ನ ಎಂದು ಮೈಕಲ್‌ ಅಳಲು ತೋಡಿಕೊಂಡರು.  ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉತ್ತರಿಸಿ, ಈ ರೀತಿ ಅಧಿಕಾರಿಗಳು ಜನಪ್ರತಿನಿಧಿಗಳ ವಿರುದ್ಧ ದೂರು ನೀಡುವುದು ಸರಿಯಲ್ಲ. 2-3 ದಿನಗಳಲ್ಲಿ ಪರಿಶೀಲಿಸಿ, ಸದಸ್ಯರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇಬ್ಬರಲ್ಲಿ ಯಾರು ಅರ್ಹರು?
ವಸಂತ ದೇವಾಡಿಗ ಎಂಬುವರು ಎಲ್ಲೂರಿನ ಮಹಿಳೆಯನ್ನು ವಿವಾಹವಾಗಿದ್ದು, ಆ ಬಳಿಕ ಅವರು ಬೇರೆಯೊಂದು ಮಹಿಳೆಯನ್ನು ವಿವಾಹವಾಗಿದ್ದಾರೆ. ಎಲ್ಲರಿನ ಮಹಿಳೆ ಆ ಬಳಿಕ ವಿವಾಹವು ಆಗದೇ ಒಂಟಿಯಾಗಿ ಬದುಕುತ್ತಿದ್ದಾರೆ. ಈಗ ವಸಂತ ಅವರು ಸಾವನ್ನಪ್ಪಿದ್ದು, ಈ ಇಬ್ಬರು ಮಹಿಳೆಯರಲ್ಲಿ ವಿಧವಾ ವೇತನಕ್ಕೆ ಯಾರು ಅರ್ಹರು ಎಂದು ಸದಸ್ಯ ಕೇಶವ ಮೊಲಿ ಪ್ರಶ್ನಿಸಿದರು. ಇದಕ್ಕುತ್ತರಿಸಿದ ತಹಶೀಲ್ದಾರ್‌ ಅವರು ಕಾನೂನು ಪ್ರಕಾರ ವಿವಾಹವಾದ ಮೊದಲ ಪತ್ನಿಗೆ ಈ ಹಕ್ಕು ಸೇರಬೇಕಾದುದು ಈ ಸಂಬಂಧ ಕಾಪು ನಾಡ ಕಚೇರಿಗೆ ಅರ್ಜಿ ಸಲ್ಲಿಸಲು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next