Advertisement
ಕಾಬೂಲ್‌ನಲ್ಲಿರುವ ವಿಮಾನ ನಿಲ್ದಾಣದ ಸನಿಹದಲ್ಲಿಯೇ ಅಮೆರಿಕದ ಯೋಧರು ಬಿಟ್ಟು ಹೋಗಿರುವ 73ಕ್ಕೂ ಅಧಿಕ ವಿಮಾನಗಳು, ಶಸ್ತ್ರಾಸ್ತ್ರಗಳು ಉಗ್ರರ ಕೈಸೇರಿ, ಭಾರೀ ಅನಾಹುತಕ್ಕೆ ಕಾರಣವಾಗಲಿದೆ ಎಂದು ಭೀತಿ ಪಡಲಾಗಿತ್ತು. ಅದಕ್ಕೆ ಸಮಾಧಾನ ಎಂಬಂತೆ ಅಮೆರಿಕದ ಸೇನೆಯ ಅಧಿಕಾರಿಗಳೇ ವಿಮಾನಗಳನ್ನು ಹೈಟೆಕ್ ರಾಕೆಟ್ ರಕ್ಷಣ ವ್ಯವಸ್ಥೆ, ಯುದ್ಧ ವಾಹನಗಳನ್ನು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ತಾಲಿಬಾನ್ ಉಗ್ರರು ಸಂಪೂರ್ಣವಾಗಿ ಅಫ್ಘಾನಿಸ್ಥಾನವನ್ನು ವಶಪಡಿಸಿಕೊಳ್ಳುವುದಕ್ಕೆ ಮೊದಲೇ ಈ ಕೆಲಸ ಪೂರೈಸಲಾಗಿದೆ.
Related Articles
Advertisement
ಇಪ್ಪತ್ತು ವರ್ಷಗಳ ಅವಧಿಯಲ್ಲಿ ಅಮೆರಿಕ ಮತ್ತು ಪಾಶ್ಚಾತ್ಯ ರಾಷ್ಟ್ರಗಳು 28 ಬಿಲಿಯನ್ ಡಾಲರ್ ಮೌಲ್ಯದ ಯುದ್ಧೋಪಕರಣಗಳನ್ನು ಅಫ್ಘಾನ್‌ಗೆ ನೆರವಿನ ರೂಪದಲ್ಲಿ ನೀಡಿವೆ.
ತಾಂತ್ರಿಕ ಅಂಶ ಗೊತ್ತಿಲ್ಲ: ಯುದ್ಧ ಕ್ಷೇತ್ರದ ಪರಿಣತರ ಪ್ರಕಾರ ತಾಲಿಬಾನ್‌ಗಳಿಗೆ ಅಮೆರಿಕದ ಯುದ್ಧ ವಿಮಾನಗಳನ್ನು ಬಳಕೆ ಮಾಡಲು ಅವಕಾಶ ಸಿಗುತ್ತಿದ್ದರೂ, ಅದು ಸಾಧ್ಯವಾಗುತ್ತಿ ರಲಿಲ್ಲ. ಸದ್ಯ ಅವರಿಗೆ ಅಂಥ ತಾಂತ್ರಿಕ ಪರಿಣತೆ ಇಲ್ಲ. ಅಮೆರಿಕದ ಖಾಸಗಿ ರಕ್ಷಣ ಗುತ್ತಿಗೆದಾರರು ಕೆಲವೊಂದು ವಿಮಾನಗಳನ್ನು ಈಗಾಗಲೇ ಸಾಗಣೆ ಮಾಡಿರುವುದೂ ಉಗ್ರರಿಗೆ ಪ್ರತಿಕೂಲವಾಗಿದೆ.
ಪ್ರಪಂಚದ ಅತೀ ದೀರ್ಘಾವಧಿ ಯುದ್ಧ :
ಭೂಮಂಡಲದ ಅತೀ ದೀರ್ಘಾವಧಿ ಯುದ್ಧವೆಂದು ಪರಿಗಣಿಸಲ್ಪಟ್ಟಿರುವ ಅಮೆರಿಕ- ಅಫ್ಘಾನಿಸ್ಥಾನ ಕದನದಲ್ಲಿ ಅಮೆರಿಕ ಕೋಟ್ಯಂತರ ಹಣವನ್ನು ವ್ಯಯಿಸಿದ್ದು, ಅದರ ಹೊರೆ ಅಮೆರಿಕದ ಮುಂಬರುವ ಪೀಳಿಗೆಗಳ ಮೇಲೆ ಹೊರೆಯಾಗಿ ಪರಿಣಮಿಸಲಿದೆ ಎಂದು ಹಲವಾರು ರಾಜಕೀಯ ಹಾಗೂ ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಅಫ್ಘಾನಿಸ್ಥಾನದಲ್ಲಿದ್ದ ಉಗ್ರರ ಆಡಳಿತವನ್ನು ದಮನ ಮಾಡಿ, ಅಲ್ಲಿ ಸ್ಥಿರ ಸರಕಾರ ಸ್ಥಾಪಿಸುವ ಮೂಲಕ ಆ ದೇಶವನ್ನು ಉದ್ಧಾರ ಮಾಡುವುದಾಗಿ ಪಣ ತೊಟ್ಟಿದ್ದ ಅಮೆರಿಕ ದೊಡ್ಡ ಆರ್ಥಿಕ ನಷ್ಟದ ಹೊರೆಯನ್ನು ಹೊತ್ತುಕೊಂಡಿದೆ.ಆ ದೇಶದ ಮುಂದಿನ ಪೀಳಿಗೆಗಳ ಜನರು, ತೆರಿಗೆ ರೂಪದಲ್ಲಿ ಟ್ರಿಲಿಯನ್‌ಗಟ್ಟಲೆ ಡಾಲರನ್ನು ಸರಕಾರಕ್ಕೆ ನೀಡಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಹೇಳಲಾಗಿದೆ.
ಪಂಜ್‌ಶೀರ್‌ನಲ್ಲಿ ಕದನ: 8 ಸಾವು :
ಅಫ್ಘಾನಿಸ್ಥಾನ ಸಂಪೂರ್ಣವಾಗಿ ತಾಲಿಬಾನ್ ಉಗ್ರರ ಸ್ವಾಧೀನವಾಗಿದೆ. ಆದರೆ, ಪಂಜ್‌ಶೀರ್ ಪ್ರಾಂತ್ಯ ಮಾತ್ರ ತಾಲಿಬಾನ್ ವಿರೋಧಿ ಹೋರಾಟಗಾರ ಅಹ್ಮದ್ ಮಸೂದ್ ಹಿಡಿತದಲ್ಲಿಯೇ ಇದೆ. ಮಂಗಳವಾರ ಉಗ್ರರು ಮತ್ತು ಮಸೂದ್‌ಗೆ ನಿಷ್ಠರಾಗಿರುವ ಪಡೆಗಳ ನಡುವೆ ಬಿರುಸಿನ ಕಾಳಗ ನಡೆದಿದೆ. ಇದರಿಂದಾಗಿ 7-8 ಮಂದಿ ತಾಲಿಬಾನ್ ಉಗ್ರರು ಜೀವ ಕಳೆದುಕೊಂಡಿದ್ದಾರೆ. ಈ ಬಗ್ಗೆ ಅಹ್ಮದ್ ವಕ್ತಾರ ಶಾಹಿಂ ದಾಶ್ತೆ ಮಾಹಿತಿ ನೀಡಿದ್ದಾರೆ. ಸೋಮವಾರ ರಾತ್ರಿ ತಾಲಿಬಾನಿಗಳು ನಮ್ಮ ಮೇಲೆ ದಾಳಿಗೆ ಪ್ರಯತ್ನಿಸಿದರು. ಎರಡೂ ಕಡೆಗಳಲ್ಲಿಯೂ ಸಾವು ನೋವು ಉಂಟಾಗಿದೆ ಎಂದು ಹೇಳಿದ್ದಾರೆ. ರವಿವಾರ ಪಂಜ್‌ಶೀರ್ ಪ್ರಾಂತ್ಯಕ್ಕೆ ಇಂಟರ್‌ನೆಟ್ ಸಂಪರ್ಕವನ್ನು ಕಡಿದು ಹಾಕಲಾಗಿತ್ತು.
ಶಸ್ತ್ರಾಸ್ತ್ರ ಮೂಲ ಪತ್ತೆಗೆ ಯತ್ನ :
ಹಿಂದಿನ ಅಫ್ಘಾನಿಸ್ಥಾನ ಸರಕಾರದ ಅವಧಿಯಲ್ಲಿ ಆ ದೇಶಕ್ಕೆ ಭಾರತದಿಂದ ಶಸ್ತ್ರಾಸ್ತ್ರ ಮತ್ತು ಸೇನಾ ತರಬೇತಿ ನೀಡಲಾಗಿತ್ತು. ಇದೀಗ ಐಎಸ್‌ಐ ಮತ್ತು ತಾಲಿಬಾನ್ ಉಗ್ರರು ಅಫ್ಘಾನಿಸ್ಥಾನಕ್ಕೆ ಭಾರತದಿಂದ ಪೂರೈಕೆಯಾಗಿರುವ ಶಸ್ತ್ರಾಸ್ತ್ರಗಳ ಮೂಲ ಪತ್ತೆ ಹಚ್ಚಲು ಹರ ಸಾಹಸಪಡುತ್ತಿದ್ದಾರೆ. ಜತೆಗೆ ಡೆಹ್ರಾಡೂನ್‌ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿ ಮತ್ತು ಅಫ್ಘಾನಿಸ್ಥಾನದ ನ್ಯಾಶನಲ್ ಡೈರೆಕ್ಟೊರೇಟ್ ಆಫ್ ಸೆಕ್ಯುರಿಟಿಯಲ್ಲಿ ತರಬೇತಿ ಪಡೆದ ಯೋಧರ ಮೇಲೆ ನಿಗಾ ಇರಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿಯೊಬ್ಬರು “ನ್ಯೂಸ್-18’ಕ್ಕೆ ತಿಳಿಸಿದ್ದಾರೆ. ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಮಾತ್ರ ಬೆದರಿಕೆಯಲ್ಲ. ಅಲ್ಲಿ ತರಬೇತಿ ಪಡೆದವರನ್ನು ಸಂಶಯದಿಂದಲೇ ನೋಡಲಾಗುತ್ತಿದೆ. ನ್ಯಾಶನಲ್ ಡೈರೆಕ್ಟೊರೇಟ್ ಆಫ್ ಸೆಕ್ಯುರಿಟಿಯಲ್ಲಿ ತರಬೇತಿ ಪಡೆದ ಅಧಿಕಾರಿಗಳು ನಮ್ಮ ಜತೆಗೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ಆ ಅಧಿಕಾರಿ ಹೇಳಿಕೊಂಡಿದ್ದಾರೆ.
ಅಮೆರಿಕ ಪಡೆಗಳ ವಾಸ್ತವ್ಯ ತಾತ್ಕಾಲಿಕ :
ಅಮೆರಿಕದ ಸೇನಾಪಡೆಗಳಿಗೆ ಶಾಶ್ವತವಾಗಿ ನೆಲೆ ನಿಲ್ಲಲು ಪಾಕಿಸ್ಥಾನದಲ್ಲಿ ಅನುಮತಿ ನೀಡಲಾಗುವುದಿಲ್ಲ. ದೇಶದಲ್ಲಿ ಅವುಗಳಿಗೆ ತಾತ್ಕಾಲಿಕ ನೆಲೆಯಲ್ಲಿ ತಂಗಲು ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಅಲ್ಲಿನ ಗೃಹ ಸಚಿವ ಶೇಖ್ ರಶೀದ್ ಅಹ್ಮದ್ ಇಸ್ಲಾಮಾಬಾದ್‌ನಲ್ಲಿ ತಿಳಿಸಿದ್ದಾರೆ. ಈ ಹಿಂದಿನ ಸಂದರ್ಭಗಳಲ್ಲಿಯೂ ಕೂಡ ಅಮೆರಿಕ ಸೇನೆಯ ಕೆಲವು ತುಕಡಿಗಳಿಗೆ ಪಾಕಿಸ್ಥಾನದಲ್ಲಿ ನೆಲೆ ನಿಲ್ಲಲು ಅವಕಾಶ ನೀಡುವ ಬಗ್ಗೆ ಇಮ್ರಾನ್ ಖಾನ್ ನೇತೃತ್ವದ ಸರಕಾರದ ಜತೆಗೆ ರಹಸ್ಯವಾಗಿ ಅಮೆರಿಕ ಮಾತುಕತೆ ನಡೆಸಿತ್ತು.