Advertisement

ತಾಲಿಬಾನಿಗಳ ಅಟ್ಟಹಾಸ: ಮತ್ತೆ ಅರಾಜಕತೆಯತ್ತ ಅಫ್ಘಾನಿಸ್ಥಾನ

01:14 AM Jul 12, 2021 | Team Udayavani |

ಯುದ್ಧಪೀಡಿತ ಅಫ್ಘಾನಿಸ್ಥಾನದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಹಿನ್ನೆಲೆಯಲ್ಲಿ ಅಮೆರಿಕ ತನ್ನ ಸೇನಾಪಡೆಗಳನ್ನು ವಾಪಸು ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಅಂತಿಮಗೊಳಿಸುತ್ತಿರುವಂತೆಯೇ ಮತ್ತೆ ತಾಲಿಬಾನಿಗಳು ಅಟ್ಟಹಾಸ ಮೆರೆಯತೊಡಗಿದ್ದಾರೆ.

Advertisement

ಅಫ್ಘಾನಿಸ್ಥಾನದ ಬಹುತೇಕ ಭಾಗವನ್ನು ತಾಲಿಬಾನಿ ಉಗ್ರರು ವಶಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದ್ದು ಸದ್ಯ ದೇಶದಲ್ಲಿ ಅರಾಜಕತೆಯ ಸನ್ನಿವೇಶ ಸೃಷ್ಟಿಯಾಗಿದೆ. ಇದರಿಂದಾಗಿ ಭಾರತ ಸಹಿತ ಇತರ ರಾಷ್ಟ್ರಗಳು ಕಾಬೂಲ್‌ ಮತ್ತು ಅಫ್ಘಾನ್‌ನ ಇತರ ಪ್ರಮುಖ ನಗರಗಳಲ್ಲಿರುವ ರಾಜತಾಂತ್ರಿಕರು, ಭದ್ರತ ಸಿಬಂದಿ ಮತ್ತು ತಮ್ಮ ಪ್ರಜೆಗಳನ್ನು ವಾಪಸ್‌ ಕರೆಸಲು ನಿರ್ಧರಿಸಿವೆ. ಅದರಂತೆ ರವಿವಾರ ಕಂದಹಾರ್‌ನಲ್ಲಿನ ಭಾರತೀಯ ಕಾನ್ಸುಲೇಟ್‌ನ ರಾಜತಾಂತ್ರಿಕರು ಮತ್ತು ಭದ್ರತ ಸಿಬಂದಿ ಸಹಿತ 50 ಮಂದಿಯನ್ನು ಭಾರತೀಯ ವಾಯುಸೇನೆಯ ವಿಮಾನದಲ್ಲಿ ಸ್ವದೇಶಕ್ಕೆ ಕರೆತರಲಾಗಿದೆ.

ತಾಲಿಬಾನಿ ಉಗ್ರರು ಅಫ್ಘಾನ್‌ನ ಒಂದೊಂದೇ ಪ್ರದೇಶದ ಮೇಲೆ ಅಧಿಪತ್ಯವನ್ನು ಸ್ಥಾಪಿಸುತ್ತಿದ್ದು ದೇಶಾದ್ಯಂತ ಯುದ್ಧ ಭೀತಿ ಆರಂಭಗೊಂಡಿದ್ದು ಜನರು ಭಯಭೀತರಾಗಿದ್ದಾರೆ. ಅಫ್ಘಾನಿಸ್ಥಾನ ಸರಕಾರದ ಪರವಾಗಿರುವ ದೇಶಗಳ ನಾಗರಿಕರನ್ನು ಗುರಿಯಾಗಿಸಿ ತಾಲಿಬಾನಿ ಉಗ್ರರು ದಾಳಿ ನಡೆಸುವ ಸಾಧ್ಯತೆಗಳು ಅಧಿಕವಾಗಿರುವುದರಿಂದ ಈ ರಾಷ್ಟ್ರಗಳು ತಮ್ಮ ಪ್ರಜೆಗಳಿಗೆ ಎಚ್ಚರಿಕೆಯಿಂದ ಇರುವಂತೆ ಈಗಾಗಲೇ ಸೂಚನೆಗಳನ್ನು ರವಾನಿಸಿವೆ.

ಅಫ್ಘಾನಿಸ್ಥಾನದಲ್ಲಿ ಶಾಂತಿ ಮತ್ತು ಸ್ಥಿರತೆ ಪುನರ್‌ ಸ್ಥಾಪನೆಗೆ ವಿಶ್ವ ಸಮುದಾಯ ನಡೆಸುತ್ತಿರುವ ಪ್ರಯತ್ನಗಳಿಗೆ ಭಾರತ ಕಳೆದೆರಡು ದಶಕಗಳಿಂದಲೂ ಬೆಂಬಲ ನೀಡುತ್ತಲೇ ಬಂದಿದೆ. ಯುದ್ಧದಿಂದಾಗಿ ಸಂಪೂರ್ಣ ಜರ್ಝರಿತವಾಗಿದ್ದ ಅಫ್ಘಾನಿಸ್ಥಾನವನ್ನು ಪುನರ್‌ನಿರ್ಮಿಸಲು ಭಾರತ ಹಣಕಾಸು ನೆರವನ್ನೂ ನೀಡಿದೆ. ಇವೆಲ್ಲದರ ಹಿನ್ನೆಲೆಯಲ್ಲಿ ಭಾರತದ ಪ್ರಜೆಗಳನ್ನು ಗುರಿಯಾಗಿಸಿ ತಾಲಿಬಾನಿಗಳು ದಾಳಿ ನಡೆಸುವ ಸಾಧ್ಯತೆಗಳಿರುವುದರಿಂದ ಮೊದಲ ಹಂತವಾಗಿ ಕಂದಹಾರ್‌ ಕಾನ್ಸುಲೇಟ್‌ ಕಚೇರಿಯ ಸಿಬಂದಿಯನ್ನು ವಾಪಸ್‌ ಕರೆತಂದಿದೆ.

ಅತ್ಯಂತ ಆಘಾತಕಾರಿ ವಿಚಾರವೆಂದರೆ ಅಫ್ಘಾನಿಸ್ಥಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಜಾಗತಿಕ ಶಾಂತಿಗೆ ಭಂಗತರುವ ಭೀತಿಯನ್ನು ಸೃಷ್ಟಿಸಿದೆ. ತಾಲಿಬಾನಿ ಉಗ್ರರಿಗೆ ಪಾಕಿಸ್ಥಾನ ಮತ್ತು ಚೀನ ನೆರವು ನೀಡುತ್ತಿರುವುದು ಬಟಾಬಯಲಾಗಿದ್ದು, ಇದು ಅಲ್ಲಿನ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲಿದೆ. ಇಂತಹ ಕುಕೃತ್ಯ, ಷಡ್ಯಂತ್ರಗಳ ಕಾರಣದಿಂದಾಗಿಯೇ ಜಾಗತಿಕ ಮಟ್ಟದಲ್ಲಿ ಕೆಂಗಣ್ಣಿಗೆ ಗುರಿಯಾಗಿರುವ ಹೊರತಾಗಿಯೂ ಪಾಕಿಸ್ಥಾನ ಮತ್ತು ಚೀನ ತಮ್ಮ ಹಳೆಯ ಚಾಳಿಯನ್ನೇ ಮುಂದುವರಿಸುವ ಮೂಲಕ ಜಾಗತಿಕ ಸಮುದಾಯದ ಸಹನೆಯನ್ನು ಪರೀಕ್ಷಿಸುತ್ತಿವೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

Advertisement

ಅಫ್ಘಾನಿಸ್ಥಾನದಲ್ಲಿ ಶಾಂತಿ ಸ್ಥಾಪನೆ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಈಗಿನ ತುರ್ತು ಅವಶ್ಯ. ಉಗ್ರವಾದದ ವಿಚಾರದಲ್ಲಿ ವಿಶ್ವದ ಪ್ರಬಲ ರಾಷ್ಟ್ರಗಳು ಸ್ಪಷ್ಟ ನಿಲುವು ತಾಳದೇ ಹೋದಲ್ಲಿ ಇಂತಹ ಯುದ್ಧ ಸನ್ನಿವೇಶಗಳು ಪದೇ ಪದೆ ಎದುರಾಗಲಿದ್ದು ಇದರಿಂದ ವಿಶ್ವ ಶಾಂತಿಗೆ ಅಪಾಯ ಶತಃಸಿದ್ಧ. ಇದನ್ನು ತೊಡೆದುಹಾಕಲು ಭಾರತ ಈ ಹಿಂದಿನಿಂದಲೂ ಪ್ರತಿಪಾದಿಸುತ್ತಲೇ ಬಂದಿರುವ ಭಯೋತ್ಪಾದನೆಯ ಮೂಲೋತ್ಪಾಟನೆಯೊಂದೇ ಮಂತ್ರವಾಗಿದ್ದು ಇದಕ್ಕೆ ಇನ್ನಾದರೂ ವಿಶ್ವ ಸಮುದಾಯ ಕಟಿಬದ್ಧವಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next