ಕಾಬೂಲ್: ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಳ್ಳುವ ಮೂಲಕ ಇಡೀ ಅಫ್ಘಾನಿಸ್ಥಾನವನ್ನು ತನ್ನ ಮುಷ್ಟಿಗೆ ಪಡೆಯಲು ಸನ್ನದ್ಧವಾಗಿರುವ ತಾಲಿಬಾನ್, ಈಗ ಸಂಧಾನಕ್ಕೆ ಹೊಸ ಷರತ್ತುಗಳನ್ನು ವಿಧಿಸಿದೆ. ಉಗ್ರರು ವಿಧಿಸಿರುವ ಷರತ್ತು ಅಫ್ಘಾನ್‌ನ ಅಶ್ರಫ್ ಘನಿ ನೇತೃತ್ವದ ಸರಕಾರಕ್ಕೆ “ನುಂಗಲಾರದ ತುತ್ತಾಗಿ’ ಪರಿಣಮಿಸಿದೆ.
ಸಂಧಾನದ ಮೂಲಕ ಶಾಂತಿ ಕಾಪಾಡುವ ವಿಚಾರಕ್ಕೆ ಸಂಬಂಧಿಸಿ ಜಾಗತಿಕ ಒತ್ತಡ ಹೆಚ್ಚಿರುವಂತೆಯೇ, ತಾಲಿಬಾನ್ ಹೊಸ ಷರತ್ತುಗಳ ಮೂಲಕ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಜೈಲಲ್ಲಿರುವ ಉಗ್ರರ ಬಿಡುಗಡೆ, ಹೊಸ ಸರಕಾರದಲ್ಲಿ ಪ್ರಮುಖ ಎಲ್ಲ ಹುದ್ದೆಗಳಿಗೆ ಬೇಡಿಕೆ ಹಾಗೂ ವಿಶ್ವಸಂಸ್ಥೆಯ “ಉಗ್ರ ಪಟ್ಟಿ’ಯಿಂದ ಹೊರಗಿಡುವಂತೆ ಷರತ್ತು ವಿಧಿಸಿದೆ. ವಿಶೇಷವೆಂದರೆ, ವ್ಯಕ್ತಿಗಳು ಹಾಗೂ ಸಂಸ್ಥೆಗಳನ್ನು ಭಯೋತ್ಪಾದನೆಯ ಬೆಂಬಲಿಗರು ಎಂದು ಪಟ್ಟಿ ಮಾಡುವ 1267 ನಿರ್ಬಂಧ ಸಮಿತಿಯ ನೇತೃತ್ವವನ್ನು ಸದ್ಯ ಭಾರತ ಹೊತ್ತಿದೆ.
ಸಂಧಾನ ಬೇಕೆಂದರೆ, ಅಶ್ರಫ್ ಘನಿಯನ್ನು ತೆಗೆದುಹಾಕಿ, ಬೇರೆ ಯಾರನ್ನು ನೇಮಿಸಬೇಕು ಎಂಬ ನಿರ್ಧಾರ ಅಮೆರಿಕ ಮತ್ತು ಅಫ್ಘಾನ್‌ಗೆ ಬಿಟ್ಟಿದ್ದು ಎಂದೂ ತಾಲಿಬಾನ್ ಹೇಳಿದೆ.
ಅಮೆರಿಕದ ಶಸ್ತ್ರಾಸ್ತ್ರಗಳೇ ಉಗ್ರರಿಗೆ ವರದಾನ: ತಾಲಿಬಾನ್ ಉಗ್ರರ ಸಂಹಾರಕ್ಕೆಂದು ಅಫ್ಘಾನ್‌ಸೇನೆಗೆ ಅಮೆರಿಕ ಕಳುಹಿಸಿಕೊಟ್ಟಿದ್ದ ಭರಪೂರ ಶಸ್ತ್ರಾಸ್ತ್ರಗಳೇ ಈಗ ಉಗ್ರರ ಕೈಗಳನ್ನು ಬಲಪಡಿಸುತ್ತಿವೆ! ಪ್ರತೀ ಪ್ರಾಂತ್ಯವನ್ನು ವಶಕ್ಕೆ ಪಡೆಯುವಾಗ ನೂರಾರು ಸೈನಿಕರು ಅಸಹಾಯಕರಾಗಿ ಶರಣಾಗಿ, ಅಲ್ಲಿಂದ ಓಡಿ ಹೋಗುತ್ತಿದ್ದಾರೆ. ಈ ವೇಳೆ ಸೇನೆಯ ಬಳಿಯಿದ್ದ ಲೋಡ್‌ಗಟ್ಟಲೆ ಶಸ್ತ್ರಾಸ್ತ್ರಗಳನ್ನು ಉಗ್ರರು ವಶಕ್ಕೆ ಪಡೆಯುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಹೊಸ ಷರತ್ತುಗಳೇನು? :
1.ಅಫ್ಘಾನಿಸ್ಥಾನದ ಜೈಲುಗಳಲ್ಲಿರುವ ಎಲ್ಲ ತಾಲಿಬಾನಿ ಕೈದಿಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು
- ಅಫ್ಘಾನ್ ಸರಕಾರವು ತನ್ನ ಉನ್ನತ ಅಧಿಕಾರಿಗಳನ್ನು ಬಳಸಿಕೊಂಡು ವಿಶ್ವಸಂಸ್ಥೆಯ “ಉಗ್ರ ಸಂಘಟನೆ’ಗಳ ಪಟ್ಟಿಯಿಂದ ತಾಲಿಬಾನ್ ಅನ್ನು ಹೊರಗಿಡುವಂತೆ ಮಾಡಬೇಕು.
- ಅಫ್ಘಾನ್‌ನ ಹೊಸ ಸರಕಾರದಲ್ಲಿ ಅಧ್ಯಕ್ಷ, ರಕ್ಷಣ ಸಚಿವರು, ಆಂತರಿಕ ಸಚಿವರು, ಸೇನಾ ಮುಖ್ಯಸ್ಥರು ಮತ್ತು ಬೇಹುಗಾರಿಕಾ ಸಂಸ್ಥೆ (ಎನ್‌ಡಿಎಸ್) ಮುಖ್ಯಸ್ಥರ ಹುದ್ದೆಗಳನ್ನು ತಾಲಿಬಾನ್ ಉಗ್ರರಿಗೇ ನೀಡಬೇಕು.
ಭಾರತಕ್ಕೆ ತಾಲಿಬಾನ್ ಮೆಚ್ಚುಗೆ-ಎಚ್ಚರಿಕೆ! :
ಶನಿವಾರ ತಾಲಿಬಾನ್ ಉಗ್ರರು ಭಾರತದ ಪರ ಮೆಚ್ಚುಗೆ ವ್ಯಕ್ತಪಡಿಸುತ್ತಲೇ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದೆ. ಭಾರತವೇನಾದರೂ ಅಫ್ಘಾನಿಸ್ತಾನದ ಸೇನೆಯನ್ನು ಕಳುಹಿಸಿಲು ನಿರ್ಧರಿಸಿದರೆ, ಪರಿಣಾಮ ನೆಟ್ಟಗಿರಲ್ಲ. ಅದರಿಂದ ಕೇಡಾಗುವುದು ಭಾರತಕ್ಕೇ ಎಂದು ಉಗ್ರರು ಬೆದರಿಕೆ ಹಾಕಿದ್ದಾರೆ. ಇದೇ ವೇಳೆ, ಆಫ^ನ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಭಾರತ ನೀಡಿದ ಕೊಡುಗೆ ಶ್ಲಾಘನೀಯ. ಇಲ್ಲಿನ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಿದ್ದೀರಿ, ಅಣೆಕಟ್ಟು, ರಸ್ತೆ ನಿರ್ಮಿಸಿ ಕೊಟ್ಟಿದ್ದೀರಿ. ಅದಕ್ಕೆ ನಾವು ಮೆಚ್ಚುಗೆ ವ್ಯಕ್ತಪಡಿಸುತ್ತೇವೆ ಎಂದೂ ತಾಲಿಬಾನ್ ಹೇಳಿದೆ.
ಭಾರತದಿಂದ ಆಶ್ರಯ? : ಯುದ್ಧಪೀಡಿತ ಅಫ್ಘಾನಿಸ್ಥಾನವನ್ನು ತೊರೆಯುತ್ತಿರುವ ಭಾರತದ ಬೆಂಬಲಿಗರಿಗೆ ಧರ್ಮಾತೀತವಾಗಿ ಆಶ್ರಯ ನೀಡಲು ಭಾರತ ಚಿಂತನೆ ನಡೆಸಿದೆ ಎಂದು ನ್ಯೂಸ್18 ವರದಿ ಮಾಡಿದೆ. ಅಲ್ಲಿಂದ ಓಡಿ ಬರುವಂಥ ನಾಗರಿಕರಿಗೆ ಆಶ್ರಯ ನೀಡುವ ಯೋಜನೆಯೊಂದನ್ನು ಕೇಂದ್ರ ಸರಕಾರ ಸಿದ್ಧಪಡಿಸುತ್ತಿದೆ ಎಂದು ಹೇಳಲಾಗಿದೆ.