ಕಾಬೂಲ್: ಹೆಣ್ಣು ಮಕ್ಕಳಿಗೆ ಶಾಲೆಯಲ್ಲಿ ಕಲಿಯಲು ಅವಕಾಶ ನೀಡುವುದಾಗಿ ತಾಲಿಬಾನ್ ಹೇಳಿದೆ. ಮುಂದಿನ ವಾರದಿಂದ ಅಫ್ಘಾನಿಸ್ಥಾನದಲ್ಲಿ ಹೈಸ್ಕೂಲ್ ಆರಂಭವಾಗಲಿದ್ದು, ಹುಡುಗಿಯರಿಗೂ ಹೈಸ್ಕೂಲ್ ತೆರೆಯಲಿದೆ ಎಂದು ತಾಲಿಬಾನ್ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಹೆಣ್ಣುಮಕ್ಕಳ ಸ್ವಾತಂತ್ರ್ಯಕ್ಕೆ ಸದಾ ವಿರೋಧವಿರುವ ತಾಲಿಬಾನ್ ಹೆಣ್ಣು ಮಕ್ಕಳ ಶಿಕ್ಷಣವನ್ನೂ ಈ ಹಿಂದೆ ವಿರೋಧ ಮಾಡಿತ್ತು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಶಿಕ್ಷಣ ಇಲಾಝೆ ವಕ್ತಾರ ಅಜಿಜ್ ಅಹಮದ್ ರಯಾನ್, “ಎಲ್ಲಾ ಹುಡುಗರು ಮತ್ತು ಹುಡುಗಿಯರಿಗೆ ಎಲ್ಲಾ ಶಾಲೆಗಳು ತೆರೆಯಲಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಯುದ್ಧಾಪರಾಧಿ ಯಾರು?ತೀರ್ಮಾನ ಹೇಗೆ…ಯಾವುದು ವಾರ್‌ಕ್ರೈಂ
ಆದರೆ ಹುಡುಗಿಯರ ಶಿಕ್ಷಣ ವಿಚಾರದಲ್ಲಿ ಕೆಲವು ನಿರ್ಬಂಧಗಳಿವೆ. ಹುಡುಗಿಯರಿಗೆ ಪ್ರತ್ಯೇಕವಾಗಿ ಪಾಠ ಮಾಡಲಾಗುತ್ತದೆ. ಹುಡುಗಿಯರಿಗೆ ಮಹಿಳಾ ಶಿಕ್ಷಕಿಯರೇ ಪಾಠ ಮಾಡುತ್ತಾರೆ. ಮಹಿಳಾ ಶಿಕ್ಷಕಿಯರು ಕಡಿಮೆ ಸಂಖ್ಯೆಯಲ್ಲಿರುವ ಗ್ರಾಮೀಣ ಪ್ರದೇಶದಲ್ಲಿ ವಯಸ್ಸಾದ ಹಿರಿಯ ಪುರುಷ ಶಿಕ್ಷಕರು ಬಾಲಕಿಯರಿಗೆ ಪಾಠ ಮಾಡುತ್ತಾರೆ ಎಂದು ವಕ್ತಾರ ಹೇಳಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಪಾಶ್ಚಿಮಾತ್ಯ ಬೆಂಬಲಿತ ಸರ್ಕಾರವನ್ನು ಉರುಳಿಸಿದ ತಾಲಿಬಾನ್ ತನ್ನ ಸರ್ಕಾರ ರಚನೆ ಮಾಡಿತ್ತು. ಹುಡುಗಿಯರು ಮತ್ತು ಮಹಿಳೆಯರಿಗೆ ಶಾಲೆಗಳು ಮತ್ತು ಕಾಲೇಜುಗಳಿಗೆ ಅವಕಾಶ ನೀಡುವುದು ಅಂತಾರಾಷ್ಟ್ರೀಯ ಸಮುದಾಯದ ಪ್ರಮುಖ ಬೇಡಿಕೆಯಾಗಿದೆ.