ಹೊಸದಿಲ್ಲಿ: ಅಫ್ಘಾನಿಸ್ಥಾನದಲ್ಲೀಗ ವಿಷಮ ಪರಿಸ್ಥಿತಿಯಿದೆ. ಎರಡು ದಶಕಗಳ ಬಳಿಕ ಅಫ್ಘಾನ್ ಮತ್ತೆ ತಾಲಿಬಾನ್ ಉಗ್ರರ ವಶವಾಗಿದೆ. ತಾಲಿಬಾನ್ ಗುಂಪು ಕಾಬೂಲ್ ಗೆ ನುಗ್ಗಿದೆ. ಭಾರತವು ತನ್ನ ರಾಜತಾಂತ್ರಿಕರನ್ನು ವಾಪಾಸ್ ಕರೆಸಿಕೊಂಡಿದೆ.
ಭಾರತ-ಅಫ್ಘಾನಿಸ್ತಾನ ಸ್ನೇಹ ವೃದ್ಧಿಯಾಗಿದ್ದರಿಂದ ಭಾರತಕ್ಕೆ ಅನೇಕ ಅನುಕೂಲಗಳಾಗಿವೆ. ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತನ್ನ ಸರಕು ಸಾಗಣೆಗಾಗಿ ಪಾಕಿಸ್ತಾನದ ಮೂಲಕವೇ ಇದ್ದ ಭೂಮಾರ್ಗದ ಅವಲಂಬನೆಯನ್ನು ತಪ್ಪಿಸಿದ ಮೋದಿ ಸರ್ಕಾರ, ಇರಾನ್‌ನ ಚಬಾಹರ್ ಬಂದರನ್ನು ಅಭಿವೃದ್ಧಿಪಡಿಸಿ, ಭಾರತದಿಂದ ಇರಾನ್, ಇರಾನ್‌ನಿಂದ ಅಫ್ಘಾನಿಸ್ತಾನ, ಅಫ್ಘಾನಿಸ್ತಾನದ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸಾಮಗ್ರಿ ರಫ್ತು ಮಾಡುವ ಹೊಸ ಜಲ ಮತ್ತು ಭೂ ಮಾರ್ಗಗಳನ್ನು ಸೃಷ್ಟಿಸಿಕೊಂಡಿತ್ತು.
ಇದನ್ನೂ ಓದಿ:ಅಫ್ಘಾನಿಸ್ಥಾನದಲ್ಲಿ ನಮ್ಮ ಯುದ್ಧ ಅಂತ್ಯವಾಗಿದೆ, ಶಾಂತಿ ಸಂಬಂಧ ಬಯಸುತ್ತೇವೆ: ತಾಲಿಬಾನ್
ಇನ್ನು, ಅಫ್ಘಾನಿಸ್ತಾನದ ಅಭಿವೃದ್ಧಿಗೆ ಹೇರಳವಾಗಿ ಧನಸಹಾಯ ಮಾಡುವ ಮೂಲಕ ಮುಸ್ಲಿಂ ರಾಷ್ಟ್ರಗಳ ಪ್ರೀತಿಗೂ ಪಾತ್ರವಾಗಿದ್ದ ಭಾರತ, ಕತಾರ್, ಇರಾನ್, ಸೌದಿ ಅರೇಬಿಯಾ ರಾಷ್ಟ್ರಗಳ ಜತೆಗಿನ ಸ್ನೇಹವನ್ನು ಗಟ್ಟಿಗೊಳಿಸಿಕೊಂಡಿತ್ತು. ಈಗ, ಅಫ್ಘಾನಿಸ್ತಾನ ತಾಲಿಬಾನಿಗಳ ಹಿಡಿತಕ್ಕೆ ಬಂದಿರುವ ಕಾರಣ, ಈ ಎಲ್ಲಾ ಅನುಕೂಲಗಳು ಬಂದ್ ಆಗಲಿವೆ.
ಇನ್ನು, ಭಾರತದ ಅಭಿವೃದ್ಧಿ ಸಹಿಸದ ಪಾಕಿಸ್ತಾನ, ಚೀನಾ ರಾಷ್ಟ್ರಗಳು ಈಗಾಗಲೇ ತಾಲಿಬಾನಿಗಳಿಗೆ ಉಘೇ ಉಘೇ ಎನ್ನುತ್ತಿರುವುದು, ಭಾರತಕ್ಕೆ ಹೊಸ ಸವಾಲಿನ ಸನ್ನಿವೇಶ ಸೃಷ್ಟಿಸಿದೆ. ಪಾಕಿಸ್ತಾನ ಹಾಗೂ ಚೀನಾ ದೇಶಗಳು, ಭಾರತದ ಮೇಲಿರುವ ತಮ್ಮ ದಶಕಗಳ ಸೇಡನ್ನು ಇನ್ನು ಮುಂದೆ ತಾಲಿಬಾನಿಗಳ ಮೂಲಕ ತೀರಿಸಿಕೊಳ್ಳಲಿವೆಯೇ ಎಂಬ ಆತಂಕವೂ ಕಾಲಿಟ್ಟಿದೆ.