ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮಿತಿಮೀರಿದ್ದು, ಮಗುವೊಂದನ್ನು ತಾಲಿಬಾನ್ ಬಂಡುಕೋರರು ಬಹಿರಂಗವಾಗಿ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ. ಮಗುವಿನ ತಂದೆ ಪಂಜ್ ಶೀರ್ ನ ಅಫ್ಘಾನ್ ಪ್ರತಿರೋಧ ಪಡೆಯಲ್ಲಿ ಸದಸ್ಯನಾಗಿರಬೇಕೆಂಬ ಸಂಶಯ ಪರಿಣಾಮ ಈ ಕೃತ್ಯ ಎಸಗಲು ಕಾರಣ ಎಂದು ವರದಿ ತಿಳಿಸಿದೆ!
ಇದನ್ನೂ ಓದಿ:ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ: ವಿಚಾರಣೆ ಮುಂದೂಡಿದ ಹೈಕೋರ್ಟ್
ಮಗುವಿಗೆ ಮರಣದಂಡನೆ ಶಿಕ್ಷೆ ವಿಧಿಸಿರುವ ಘಟನೆಯನ್ನು ಪಂಜ್ ಶೀರ್ ನ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಮಗುವಿನ ತಂದೆ ಪ್ರತಿರೋಧ ಪಡೆಯ ಸದಸ್ಯ ಎಂಬ ಸಂಶಯದಿಂದ ತಖಾರ್ ಪ್ರಾಂತ್ಯದಲ್ಲಿ ಮಗುವನ್ನು ತಾಲಿಬಾನ್ ಹತ್ಯೆಗೈದಿರುವುದಾಗಿ ವರದಿ ವಿವರಿಸಿದೆ.
ಯಾರು ತಾಲಿಬಾನ್ ವಿರುದ್ಧ ಧ್ವನಿ ಎತ್ತುತ್ತಾರೋ ಅವರಿಗೆ ಎಚ್ಚರಿಕೆಯ ಸಂದೇಶ ರವಾನಿಸಲು ತಾಲಿಬಾನ್ ಇಂತಹ ಕ್ರೂರ ಕೃತ್ಯಕ್ಕೆ ಮುಂದಾಗುತ್ತಿದೆ ಎಂದು ಖಾಸಗಿ ಮಾಧ್ಯಮ ಟ್ವೀಟ್ ನಲ್ಲಿ ತಿಳಿಸಿದೆ.
ಅಫ್ಘಾನಿಸ್ತಾನದ ಆಡಳಿತವನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ ತಾಲಿಬಾನ್ ಬಂಡುಕೋರರು ಅಂತರಾಷ್ಟ್ರೀಯ ಮಟ್ಟದ ದೇಶಗಳ ನಾಯಕರನ್ನು ಸೆಳೆಯಲು ತಾವು ಬದಲಾಗಿದ್ದೇವೆ ಎಂಬಂತೆ ನಟಿಸಿದ್ದವು. ಆದರೆ ತಜ್ಞರ ಪ್ರಕಾರ, ತಾಲಿಬಾನ್ ಬಂಡುಕೋರರು ಅದೇ ಹಿಂಸಾತ್ಮಕ ಮನೋಭಾವವನ್ನೇ ಹೊಂದಿರುವುದಾಗಿ ತಿಳಿಸಿದ್ದಾರೆ.