ಅಫ್ಘಾನಿಸ್ಥಾನ ನೆಲದಿಂದ ಅಮೆರಿಕ ಮತ್ತು ಅದರ ಮಿತ್ರ ಪಡೆಗಳನ್ನು ವಾಪಸ್ ಕಳುಹಿಸುವ ಸಲುವಾಗಿ ತಾಲಿಬಾನ್ ಉಗ್ರರು ಹೇಳಿದ ಸುಳ್ಳುಗಳು ಒಂದೊಂದಾಗಿಯೇ ಹೊರಬರುತ್ತಿವೆ. ನಾವು 1996ರಲ್ಲಿ ಅಫ್ಘಾನ್ ನಲ್ಲಿ ಅಧಿಕಾರ ನಡೆಸಿದ ರೀತಿಯಲ್ಲಿ ಇರುವುದಿಲ್ಲ. ಬದಲಾಗಿದ್ದೇವೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಅಫ್ಘಾನ್‌ನ ನಾಗರೀಕರಿಗೂ ಎಲ್ಲ ರೀತಿಯ ಸ್ವಾತಂತ್ರ್ಯ ನೀಡುತ್ತೇವೆ ಎಂದೆಲ್ಲ ಹೇಳಿದ್ದ ತಾಲಿಬಾನಿಗರು ಈಗಾಗಲೇ ಈ ಹೇಳಿಕೆಗಳಿಗೆ ವಿರುದ್ಧವಾಗಿ ನಡೆಯುತ್ತಿರುವುದು ಗೊತ್ತೇ ಇದೆ.
ಅಂದರೆ ಮಹಿಳೆಯರ ಶಿಕ್ಷಣಕ್ಕೆ, ಅವರು ಕೆಲಸ ಮಾಡುವುದಕ್ಕೆ ಯಾವುದೇ ಅಡ್ಡಿ ಮಾಡುವುದಿಲ್ಲ, ಅಮೆರಿಕ ಸೇನೆ ಜತೆ ಕೈಜೋಡಿಸಿದ್ದವರನ್ನೂ ನಾವು ಏನೂ ಮಾಡುವುದಿಲ್ಲ ಎಂದೆಲ್ಲ ಹೇಳಿದ್ದ ತಾಲಿಬಾನ್ ಉಗ್ರರು, ಈಗಾಗಲೇ ಮಹಿಳೆಯರ ಶಿಕ್ಷಣಕ್ಕೆ ಅಡ್ಡಿ ಮಾಡುತ್ತಿರುವುದೂ ಅಲ್ಲದೇ ಮಹಿಳೆಯರು ಕೆಲಸಕ್ಕೆ ಹೋಗದಂತೆ ತಡೆಯುತ್ತಿದ್ದಾರೆ. ಅಲ್ಲದೆ, ತಾಲಿಬಾನ್‌ಗೆ ವಿರುದ್ಧವಾಗಿದ್ದವರು, ಅಮೆರಿಕ ಸೇನೆಯ ಜತೆ ಕೈಜೋಡಿಸಿದವರನ್ನು ಗುರುತಿಸಿ, ಕೊಲೆಗೈಯ್ಯುತ್ತಿದ್ದಾರೆ.
ಇದರ ನಡುವೆಯೇ ಬೇರೆ ಬೇರೆ ದೇಶಗಳ ಜತೆಗೂ ಉತ್ತಮ ಸಂಬಂಧ ಇರಿಸಿಕೊಳ್ಳುವ ಬಗ್ಗೆ ತಾಲಿಬಾನ್ ಮಾತನಾಡಿತ್ತು. ನಮಗೆ ಯಾರೂ ಶತ್ರುಗಳಿಲ್ಲ, ನಮಗೆ ನಮ್ಮ ದೇಶವೇ ಮುಖ್ಯ ಎಂದೆಲ್ಲ ಹೇಳಿದ್ದರು. ಜತೆಗೆ ತಮ್ಮ ನೆಲವನ್ನು ಬೇರೆ ದೇಶದವರು ಬಳಸಿಕೊಳ್ಳಲು ಬಿಡುವುದಿಲ್ಲ ಎಂದೂ ಭರವಸೆ ನೀಡಿದ್ದರು. ಈಗ ಇವೆಲ್ಲ ಸಂಗತಿಗಳಿಗೆ ಉಲ್ಟಾ ಎಂಬಂತೆ ಮಾತನಾಡುತ್ತಿದ್ದಾರೆ.
ಅದರಲ್ಲೂ ವಿಶೇಷವಾಗಿ ಕಾಶ್ಮೀರ ಭಾರತದ ಆಂತರಿಕ ವಿಚಾರ ಎಂದಿದ್ದ ತಾಲಿಬಾನ್ ಉಗ್ರರು, ಈಗ ಕಾಶ್ಮೀರದಲ್ಲಿನ ಮುಸ್ಲಿಮರಿಗೆ ತೊಂದರೆಯಾದರೆ ನಾವು ದನಿ ಎತ್ತುತ್ತೇವೆ ಎನ್ನುತ್ತಿದ್ದಾರೆ. ಈ ಮೂಲಕ ಮತ್ತೂಂದು ದೇಶದ ಬೆಳವಣಿಗೆ ಬಗ್ಗೆ ಮೂಗು ತೂರಿಸುವ ಮಾತುಗಳನ್ನೂ ಆಡಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ತಾಲಿಬಾನ್ ವಕ್ತಾರ, ಸುಹೈಲ್ ಶಹೀನ್, ಕಾಶ್ಮೀರದಲ್ಲಿರುವ ಮುಸ್ಲಿಮರ ಪರವಾಗಿ ಧ್ವನಿ ಎತ್ತುವ ಎಲ್ಲ ಹಕ್ಕುಗಳು ನಮಗಿವೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕೇವಲ ಭಾರತವಲ್ಲ, ಜಗತ್ತಿನ ಬೇರೆ ದೇಶಗಳಲ್ಲಿ ಇರುವ ಮುಸ್ಲಿಮರ ಪರವಾಗಿಯೂ ಧ್ವನಿ ಎತ್ತುತ್ತೇವೆ ಎಂದಿದ್ದಾನೆ.
ಕಾಶ್ಮೀರ ವಿಚಾರದಲ್ಲಿ ತಾಲಿಬಾನಿಗರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದದ್ದು ಅನಿವಾರ್ಯ. ಈ ವಿಚಾರದಲ್ಲಿ ಬೇರೆ ಯಾವುದೇ ದೇಶ ಮೂಗು ತೂರಿಸುವುದನ್ನು ಭಾರತ ಇಚ್ಚಿಸುವುದಿಲ್ಲ. ಆದರೆ ಪಾಕಿ ಸ್ಥಾ ನ ಅಥವಾ ಚೀನ ಮತ್ತು ಅಲ್ ಕಾಯಿದಾ ಸೇರಿ ದಂತೆ ಇತರ ಉಗ್ರ ಸಂಘಟನೆಗಳ ತಾಳಕ್ಕೆ ಕುಣಿದು, ಅನಾವಶ್ಯಕವಾಗಿ ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದರೆ ಭಾರತ ಸುಮ್ಮನೆ ಇರುವುದೂ ಇಲ್ಲ. ಈಗಾಲೇ ಬರುತ್ತಿರುವ ವರದಿಗಳಂತೆ, ಅಫ್ಘಾನ್ ನಿಂದ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ಉಗ್ರರು ನುಗ್ಗುತ್ತಿದ್ದಾರೆ ಎಂಬ ಸುದ್ದಿ ಇದೆ. ಇಂಥವುಗಳಿಗೂ ತಾಲಿಬಾನ್ ಅವಕಾಶ ಕೊಡಬಾರದು.
ಈ ಬಾರಿ ತಾಲಿಬಾನ್ ಉಗ್ರರಿಗೆ ಒಂದು ಸದವಕಾಶ ಸಿಕ್ಕಿದೆ. ತನ್ನ ಹಿಂದಿನ ಉಗ್ರತ್ವದ ಚಾಳಿ ಬಿಟ್ಟು ಇತರ ಸರಕಾರಗಳಂತೆಯೇ ಆಡಳಿತ ನಡೆಸಿಕೊಂಡು ಹೋದರೆ ಬೇರೆ ದೇಶಗಳಿಗೂ ನಂಬಿಕೆ ಬರುತ್ತದೆ. ಇಲ್ಲವಾದಲ್ಲಿ ಬೇಗನೇ ನಂಬಿಕೆ ಕಳೆದುಕೊಂಡು, ಇತರ ಕ್ರಮಗಳಿಗೆ ತುತ್ತಾಗುವ ಸಾಧ್ಯತೆಯೂ ಇಲ್ಲದಿಲ್ಲ.