ಅಫ್ಘಾನಿಸ್ಥಾನ ಮತ್ತೆ ತಾಲಿಬಾನಿಗಳ ಕೈವಶವಾಗಿದೆ. ತಾಲಿಬಾನಿಗಳು ರಾಜಧಾನಿ ಕಾಬೂಲನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತಿದ್ದಂತೆಯೇ ಅಧ್ಯಕ್ಷ ರಾಗಿದ್ದ ಅಶ್ರಫ್ ಘನಿ ದೇಶ ಬಿಟ್ಟು ಪರಾರಿಯಾಗಿ ದ್ದಾರೆ. ಅಫ್ಘಾನಿಸ್ಥಾನದ ಪಂಜ್‌ಶೀರ್ ಪ್ರಾಂತ್ಯ ವೊಂದನ್ನು ಹೊರತುಪಡಿಸಿದಂತೆ ಉಳಿದೆಲ್ಲ 33 ಪ್ರಾಂತ್ಯಗಳು ಕೂಡ ಇದೀಗ ತಾಲಿಬಾನಿಗಳ ಹಿಡಿತ ದಲ್ಲಿದೆ. ತಾಲಿಬಾನಿಗಳು ಅಫ್ಘಾನ್ ಸರಕಾರದ ವಿರುದ್ಧ ದಂಗೆ ಸಾರಿ ಒಂದೊಂದೇ ಪ್ರಾಂತ್ಯಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಂಡು ಕೊನೆಯಲ್ಲಿ ಇಡೀ ದೇಶದ ಮೇಲೆ ಅಧಿಪತ್ಯ ಸ್ಥಾಪಿಸಿದ್ದರೂ ಪಂಜ್‌ಶೀರ್‌ನಲ್ಲಿ ತಾಲಿಬಾನಿಗಳಿಗೆ ಬಾಲ ಆಡಿಸಲು ಸಾಧ್ಯವಾಗಿಲ್ಲ. ಇದು ಕೇವಲ ಈಗಿನ ಬೆಳವಣಿಗೆ ಏನಲ್ಲ. ಕಳೆದ ನಾಲ್ಕು ದಶಕಗಳಿಂದಲೂ ಈ ಪ್ರಾಂತ್ಯದಲ್ಲಿ ನೆಲೆಯೂರಲು ತಾಲಿಬಾನಿಗಳು ಸಫಲರಾಗಿಲ್ಲ ಎಂಬುದು ಅಚ್ಚರಿಯೇ ಸರಿ.
“ಪಂಜ್‌ಶೀರ್‌ನ ಸಿಂಹ’ ಎಂದೇ ಖ್ಯಾತರಾಗಿದ್ದ ದಿ| ಅಹ್ಮದ್ ಶಾ ಅವರ ನೇತೃತ್ವದಲ್ಲಿ ಈ ಪ್ರಾಂತ್ಯವನ್ನು ಕಳೆದ ನಾಲ್ಕು ದಶಕಗಳಿಂದ ತಾಲಿಬಾನಿಗಳ ಸಹಿತ ಎಲ್ಲ ತೆರನಾದ ದಂಗೆಕೋರರಿಂದ ರಕ್ಷಿಸುತ್ತಾ ಬರಲಾಗಿದ್ದು ಇಂದಿಗೂ ಸ್ಥಳೀಯಾಡಳಿತದ ಹಿಡಿತದಲ್ಲಿಯೇ ಇದೆ.
ಕಾಬೂಲ್‌ನ ಉತ್ತರಕ್ಕೆ ನೂರಾರು ಕಿ.ಮೀ. ದೂರದಲ್ಲಿರುವ ಪಂಜ್‌ಶೀರ್ ಪ್ರಾಂತ್ಯ ಮತ್ತು ಕಣಿವೆ ಪ್ರದೇಶ ಈಗಲೂ ಸುರಕ್ಷಿತವಾಗಿದ್ದು ಸರಕಾರಿ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಅಷ್ಟು ಮಾತ್ರ ವಲ್ಲದೆ ಪಂಜ್‌ಶೀರ್‌ನ ನಿವಾಸಿಗಳು ಯಾವುದೇ ತೆರನಾದ ದಾಳಿಯನ್ನು ಎದುರಿಸಲು ಸನ್ನದ್ಧರಾಗಿದ್ದಾರೆ. “1996- 2001ರ ವರೆಗಿನ ತಾಲಿಬಾನ್ ಆಡಳಿತದ ವೇಳೆಯೂ ಪಂಜ್‌ಶೀರ್ ಕಣಿವೆಯನ್ನು ವಶಪಡಿಸಿಕೊಳ್ಳಲು ದಂಗೆಕೋರರಿಗೆ ಸಾಧ್ಯವಾಗಿರಲಿಲ್ಲ’ ಎಂದು ಪ್ರಾಂತ್ಯದ ಆರ್ಥಿಕ ಇಲಾಖೆಯ ಮುಖ್ಯಸ್ಥರಾಗಿರುವ ಅಬ್ದುಲ್ ರಹಮಾನ್ ತಿಳಿಸಿದ್ದಾರೆ ಎಂದು ಸ್ಪಾನಿಶ್ ಮಾಧ್ಯಮ ವರದಿ ಮಾಡಿದೆ.
ಈ ಹಿಂದೆ ಅಫ್ಘಾನಿಸ್ಥಾನದಲ್ಲಿ ಆಡಳಿತ ನಡೆಸಿದ್ದ ಸೋವಿಯತ್ ಮತ್ತು ಪಾಶ್ಚಾತ್ಯ ಸೇನೆಗಳ ಯಂತ್ರೋ ಪಕರಣಗಳು, ಚೆಕ್‌ಪಾಯಿಂಟ್ ಮತ್ತು ಹಳೆಯ ಸೇತುವೆಗಳ ಅವಶೇಷಗಳಿಂದ ಪಂಜ್‌ಶೀರ್ ಮತ್ತು ಕಾಬೂಲ್ ನಡುವಣ ರಸ್ತೆಯನ್ನು ಬೇರ್ಪಡಿಸಲಾಗಿದೆ. ದಂಗೆಕೋರರು ಪ್ರಾಂತ್ಯವನ್ನು ಪ್ರವೇಶಿಸಿದ್ದೇ ಆದಲ್ಲಿ ಇವುಗಳನ್ನು ಸ್ಥಳೀಯಾಡಳಿತ ಬಳಸಿಕೊಂಡು ದಾಳಿ ಕೋರರ ಮೇಲೆ ಪ್ರತಿದಾಳಿ ನಡೆಸುವ ಸಾಧ್ಯತೆಗಳಿರುವುದರಿಂದ ಇತ್ತ ತಾಲಿಬಾನಿಗಳು ತಲೆಹಾಕಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಈ ಹಿಂದೆ ತಾಲಿಬಾನಿಗಳ ಆಕ್ರಮಣದಿಂದ ಪ್ರಾಂತ್ಯವನ್ನು ರಕ್ಷಿಸುವಲ್ಲಿ ಇಲ್ಲಿನ ವರ್ಚಸ್ವಿ ನಾಯಕ ರಾಗಿದ್ದ ಅಹ್ಮದ್ ಶಾ ಮಸೂದ್ ಅವರ ರಕ್ಷಣ ಕಾರ್ಯ ತಂತ್ರ, ಚಾಣಾಕ್ಷತನ ಮತ್ತು ಕಣಿವೆಯ ನೈಸರ್ಗಿಕ ಸನ್ನಿವೇಶವೇ ಕಾರಣವಾಗಿತ್ತು. 20 ವರ್ಷಗಳ ಹಿಂದೆ 2001ರ ಸೆ.9 ರಂದು ಅಂದರೆ ಅಮೆರಿಕದ ಮೇಲೆ ಅಲ್‌ಕಾಯಿದಾ ಉಗ್ರರು ದಾಳಿ ನಡೆಸಿದ ಎರಡು ದಿನಗಳ ಮುನ್ನ ಅರಬ್ ಮೂಲದ ಇಬ್ಬರು ಪತ್ರ ಕರ್ತರು ನಕಲಿ ಕೆಮರಾದಲ್ಲಿ ಡಿಟೋನೇಟರ್‌ಗಳನ್ನು ಇರಿಸಿ ಸ್ಫೋಟಿಸಿದ ಪರಿಣಾಮ ಅಹ್ಮದ್ ಶಾ ಮಸೂದ್ ಸಾವನ್ನಪ್ಪಿದ್ದರು. ಇಂದಿಗೂ ಪಂಜ್‌ಶೀರ್ ಪ್ರಾಂತ್ಯ ದಲ್ಲಿ ಇವರನ್ನು ರಾಷ್ಟ್ರೀಯ ನಾಯಕರೆಂದೇ ಪರಿಗಣಿಸಿ ಗೌರವಿಸಲಾಗುತ್ತಿದೆ.
ತಾಲಿಬಾನಿಗಳಿಗೆ ಸಡ್ಡು: ಈಗ ಎರಡನೇ ಬಾರಿಗೆ ದೇಶದ ಆಡಳಿತವನ್ನು ತಾಲಿಬಾನಿಗಳು ತಮ್ಮ ವಶಕ್ಕೆ ಪಡೆದುಕೊಂಡ ಬಳಿಕ ತಾಲಿಬಾನಿ ಸೇನೆಗೆ ಪ್ರತಿರೋಧ ಒಡ್ಡಲು ವಿಫಲವಾದ ಅಫ್ಘಾನ್‌ನ ವಿವಿಧ ಪ್ರಾಂತ್ಯಗಳ ಸೇನಾಪಡೆಗಳು ಮತ್ತು ದೇಶದ ಮೊದಲ ಉಪಾ ಧ್ಯಕ್ಷ ಅಮ್ರುಲ್ಲಾ ಸಲೇಹ್ ಸಹಿತ ಹಲವು ನಾಯಕರು ಪಂಜ್‌ಶೀರ್‌ನಲ್ಲಿ ನೆಲೆಯಾಗಿದ್ದಾರೆ. ವಿವಿಧ ಸೇನಾ ಪಡೆಗಳು ಪ್ರಾಂತ್ಯದಲ್ಲಿ ಠಿಕಾಣಿ ಹೂಡಿರುವುದನ್ನು ಖಚಿತ ಪಡಿಸಿರುವ ಅಬ್ದುಲ್ ರಹಮಾನ್, ಈವರೆಗೆ ಪ್ರಾಂತ್ಯದ ಶೇ.95 ರಷ್ಟು ಭಾಗದ ರಕ್ಷಣೆಯ ಹೊಣೆಯನ್ನು ಸ್ಥಳೀಯ ಪಡೆಗಳೇ ನಿರ್ವಹಿಸುತ್ತಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಅವರು ತಾಲಿಬಾನಿ ಉಗ್ರರಿಗೆ ಶರಣಾಗುವ ಪ್ರಶ್ನೆಯೇ ಇಲ್ಲ ಎಂದು ಸಾರಿದ್ದಾರೆ. ಏತನ್ಮಧ್ಯೆ ಅಹ್ಮದ್ ಶಾ ಮಸೂದ್ ಅವರ ಪುತ್ರ ಅಹ್ಮದ್ ಮಸೂದ್ ಅವರು ರಕ್ತಪಾತವನ್ನು ತಡೆಯಲು ತಾಲಿಬಾನಿಗಳೊಂದಿಗೆ ಮಾತುಕತೆ ನಡೆಸುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ. ಜೆಹಾದಿಗಳೊಂದಿಗೆ ಅಮೆರಿಕ ಮಾಡಿಕೊಂಡಿರುವ ಒಪ್ಪಂದವನ್ನು ಟೀಕಿಸಿ ರುವ ಅವರು, ಅಫ್ಘಾನಿಸ್ಥಾನದಲ್ಲಿ ಅಧಿಕಾರ ವಿಕೇಂದ್ರೀಕರಿಸದೇ ಹೋದಲ್ಲಿ ದೇಶದ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯವಿಲ್ಲ. ಈ ಒಪ್ಪಂದ ತಾಲಿಬಾನಿಗಳಲ್ಲಿ ಗೆಲುವಿನ ಭಾವನೆಯನ್ನು ಮೂಡಿಸುತ್ತದೆ. ಇದು ನಿಜಕ್ಕೂ ಭೀತಿ ಹುಟ್ಟಿಸು ವಂಥದ್ದು ಎಂದಿದ್ದಾರೆ.