ಜೈಪುರ: ಇದು ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಜೆಸುರಾನಾ ಹಳ್ಳಿಯಲ್ಲಿ ನಡೆದ ಘಟನೆ. ಸ್ಥಳೀಯ ಕ್ರಿಕೆಟ್ ತಂಡವೊಂದರ ಹೆಸರನ್ನು ತಾಲಿಬ್ ಕ್ರಿಕೆಟ್ ಕ್ಲಬ್ ಎಂದು ಆ್ಯಪ್‌ನಲ್ಲಿ ಬರೆಯಲು ಹೋದಾಗ, ತಂತಾನೇ (ಆಟೋ ಕರೆಕ್ಟ್ ಆಯ್ಕೆ ಪ್ರಕಾರ) ತಾಲಿಬಾನ್ ಕ್ರಿಕೆಟ್ ಕ್ಲಬ್ ಎಂದು ಹೆಸರು ನಮೂದಾಗಿದೆ.
ಇದನ್ನು ಅಲ್ಲಿಯ ಬಲಪಂಥೀಯ ಸಂಘಟನೆಗಳು ಬಲವಾಗಿ ವಿರೋಧಿಸಿದ ಪರಿಣಾಮ, ತಂಡವನ್ನೇ ಅಮಾನತು ಮಾಡಲಾಗಿದೆ. ನಂತರ ಜಿಲ್ಲಾ ಪೊಲೀಸರು ಇದು ಅಚಾನಕ್ಕಾಗಿ ನಡೆದ ಘಟನೆ, ದುರುದ್ದೇಶವಿಲ್ಲ ಎಂದು ಖಚಿತಪಡಿಸಿದ್ದಾರೆ.
ಆಗಿದ್ದೇನು?: ದಿವಂಗತ ಸಮಾಜ ಸೇವಕರೊಬ್ಬರ ಹೆಸರಲ್ಲಿ “ಮಾರ್ಹಮ್ ಅಧ್ಯಕ್ಷ ಅಲ್ಲಾದಿನ್ ಸ್ಮತಿ ಕ್ರಿಕೆಟ್ ಪ್ರತಿಯೋಗಿತಾ’ ಜೈಸಲ್ಮೇರ್‌ನ ಜೆಸುರಾನಾದಲ್ಲಿ ನಡೆದಿತ್ತು. ಈ ಕೂಟಕ್ಕೆ ತಂಡಗಳ ಹೆಸರನ್ನು ಆನ್‌ಲೈನ್ ಆ್ಯಪ್ ಮೂಲಕ ನೋಂದಾಯಿಸಿಕೊಳ್ಳಲಾಗಿತ್ತು. ಎಡವಟ್ಟಾಗಿದ್ದು ಇಲ್ಲೇ. ಚೌದ್ರಿಯ ಹಳ್ಳಿಯ ತಾಲಿಬ್ ಕ್ರಿಕೆಟ್ ಕ್ಲಬ್ ತಂಡದ ಹೆಸರನ್ನು ಬರೆಯುವಾಗ ಅದು ತಾಲಿಬಾನ್ ಎಂದು ಬದಲಾಗಿದೆ. ಇದು ಯಾರ ಗಮನಕ್ಕೂ ಬಂದಿಲ್ಲ.
ಇದನ್ನೂ ಓದಿ:ಪ್ಯಾರಾಲಂಪಿಕ್ಸ್: ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಭವಿನಾ ಪಟೇಲ್
ಆ.22ರಂದು ಡಬ್ಲಾ ತಂಡದೆದುರಿನ ಪಂದ್ಯದಲ್ಲಿ ತಾಲಿಬ್ ಗೆದ್ದಿತ್ತು.ಆಗ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯಲು ಹೋದಾಗ ತಂಡದ ಹೆಸರನ್ನು ತಾಲಿಬಾನ್ ಎಂದು ಕರೆಯಲಾಗಿತ್ತು. ಆಗಲೇ ಎಲ್ಲರಿಗೂ ಗೊತ್ತಾಗಿದ್ದು. ಇದರ ವಿರುದ್ಧ ಬಲವಾದ ಪ್ರತಿಭಟನೆ ನಡೆಯಿತು. ತಂಡದ ನಾಯಕ ಕಮಾಲ್ ಖಾನ್ ಪೊಲೀಸರಿಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಪೊಲೀಸರೂ ಅದನ್ನು ಮಾನ್ಯ ಮಾಡಿದ್ದಾರೆ