Advertisement

ನಾನಾ ಪ್ರತಿಭೆಯ ಎಂಜಿನಿಯರ್‌ 

06:00 AM Jul 20, 2018 | Team Udayavani |

ಸವಣೂರು ಮೆಸ್ಕಾಂ ಶಾಖಾ ಕಚೇರಿ ಕಿರಿಯ ಎಂಜಿನಿಯರ್‌ ನಾಗರಾಜ್‌ ಅವರು ವೃತ್ತಿಯಲ್ಲಿ ಜೆಇ ಆಗಿದ್ದರೂ ಪ್ರವೃತ್ತಿಯಲ್ಲಿ ರಂಗಭೂಮಿ ಕಲಾವಿದ. ಹುಟ್ಟು ಕಲಾವಿದರಾದ ಇವರು ರಾಜ್ಯದಾದ್ಯಂತ ಅನೇಕ ಕಾರ್ಯಕ್ರಮಗಳಲ್ಲಿ ಬಣ್ಣಹಚ್ಚಿ ಜನಮನ ಗೆದ್ದಿದ್ದಾರೆ. ಬಾಲ್ಯದಿಂದಲೇ ರಂಗಭೂಮಿಯತ್ತ ಆಕರ್ಷಿತರಾದ ಇವರು ಶಾಲಾ ಜೀವನದಲ್ಲಿಯೇ ಪೌರಾಣಿಕ ನಾಟಕಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿ, ಸೈ ಎನಿಸಿಕೊಂಡವರು. ಮಹಾಭಾರತ, ರಾಮಾಯಣ, ಶನಿಮಹಾತ್ಮೆ, ದಕ್ಷಯಜ್ಞ, ದೇವಿಮಹಾತ್ಮೆ ಮೊದಲಾದ ಪೌರಾಣಿಕ ಸತ್ಯ ಹರಿಶ್ಚಂದ್ರ, ಕವಿರತ್ನ ಕಾಳಿದಾಸ ಮುಂತಾದ ಸಾಮಾಜಿಕ ನಾಟಕಗಳಲ್ಲಿ ನಾನಾ ಪಾತ್ರಗಳನ್ನು ನಿರ್ವಹಿಸಿರುತ್ತಾರೆ. ಕುರುಕ್ಷೇತ್ರ ನಾಟಕದಲ್ಲಿ ಶ್ರೀಕೃಷ್ಣ, ಶಕುನಿ, ದುರ್ಯೋಧನ, ಅರ್ಜುನ, ವಿದುರ, ದಶರಥ, ಶ್ರೀರಾಮ, ಆಂಜನೇಯನ ಪಾತ್ರಗಳು ನಾಗರಾಜ್‌ ಅವರಿಗೆ ಹೆಸರು ತಂದುಕೊಟ್ಟಿವೆ.ರಂಗಗೀತೆ, ಭಾವಗೀತೆ, ಜಾನಪದ ಗೀತೆ, ಚಿತ್ರಗೀತೆಗಳನ್ನು ವಿವಿಧ ಕಡೆಗಳಲ್ಲಿ ಹಾಡಿ, ಸಂಗೀತ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ನಾಗರಾಜರು ಹಾರ್ಮೋನಿಯಂ ನುಡಿಸುತ್ತಾರೆ.

Advertisement

ಕಳೆದ ವರ್ಷ ಮಂಗಳೂರು ಕರಾವಳಿ ಉತ್ಸವದಲ್ಲಿ ಜಾನಪದ ಗೀತಗಾಯನದಲ್ಲಿ ಪಾಲ್ಗೊಂಡಿದ್ದಾರೆ. ಕಡಬದ ಶಶಿಗಿರಿವನ ಗಾನಸಿರಿ ತಂಡದಲ್ಲಿ ಗಾಯಕರಾಗಿ ನಿರಂತರವಾಗಿ ಭಾಗವಹಿಸಿರುವ ಇವರು ಮೆಸ್ಕಾಂ ಕಡಬ ಸಿಬಂದಿ ವರ್ಗವನ್ನು ಸೇರಿಸಿಕೊಂಡು ಕಡಬದಲ್ಲಿ ಸತ್ಯ ಹರಿಶ್ಚಂದ್ರ ನಾಟಕ ಪ್ರದರ್ಶಿಸಿರುವುದು ಇವರ ಹೆಚ್ಚುಗಾರಿಕೆ.ನಟನೆ, ಹಾಡುಗಾರಿಕೆಯೊಂದಿಗೆ ಪುಸ್ತಕವೆಂದರೂ ನಾಗರಾಜರಿಗೆ ವಿಶೇಷ ಪ್ರೀತಿ. ತನ್ನ ಬಿಡುವಿನ ವೇಳೆಯಲ್ಲಿ ನಾಟಕ, ಇತಿಹಾಸ ಚರಿತ್ರೆ, ದಾರ್ಶನಿಕರ ಜೀವನ, ಸಾಧನೆಗಳ ಕುರಿತು ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next