Advertisement

ಮಾಹಿತಿಯ ಕಣಜ ಈ ಪೋರ

12:16 PM Jun 15, 2020 | Suhan S |

ಹುಬ್ಬಳ್ಳಿ: ಐದು ವರ್ಷದ ಈ ಪೋರ ದೇಶ, ವಿದೇಶಿ ಗಣ್ಯರ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಪರಿಚಯ, ವಚನಗಳು, ತತ್ವ ಪದಗಳು ಹೀಗೆ ಹಲವು ಕ್ಷೇತ್ರದ ಸಾಧಕರ ಸಾಧನೆಗಳನ್ನು ಲೀಲಾಜಾಲವಾಗಿ ಹೇಳುತ್ತಾನೆ. ತನ್ನ ಬುದ್ಧಿ ಸಾಮರ್ಥ್ಯದಿಂದ ವಯಸ್ಸಿಗೆ ಮೀರಿ ಸಾಧನೆ ಮಾಡುತ್ತಿರುವ ಬಾಲಕ ಹಲವು ಸಾಧನೆಯ ಪ್ರಶಸ್ತಿ- ಪುರಸ್ಕಾರಗಳನ್ನು ತನ್ನದಾಗಿಸಿಕೊಂಡಿದ್ದಾನೆ.

Advertisement

ಇಲ್ಲಿನ ತಬೀಬ್‌ ಲ್ಯಾಂಡ್‌ ನಿವಾಸಿಗಳಾದ ಗಿರೀಶಗೌಡ ಪಾಟೀಲ ಹಾಗೂ ಶಿವಲೀಲಾ ಪಾಟೀಲ ಅವರು ಪುತ್ರ ಸಿದ್ಧಾರ್ಥಗೌಡ ಪಾಟೀಲ ಚಟುವಟಿಕೆಗಳನ್ನು ನೋಡಿದರೆ ಎಂತಹವರಾದರೂ ಬಾಯಿ ಮೇಲೆ ಬೆರಳಿಟ್ಟುಕೊಳುತ್ತಾರೆ. ಎರಡು ವರ್ಷ ದವನಾಗಿದ್ದಾಗಲೇ ತನಲ್ಲಿ ಅಗಾಧ ಜ್ಞಾನಶಕ್ತಿಯ ಸಾಮರ್ಥ್ಯವಿದೆ ಎಂದು ಸಾಬೀತು ಮಾಡಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಾಧಕ ಪ್ರಶಸ್ತಿಗಳನ್ನು ಪಡೆದಿದ್ದಾನೆ. ಇಲ್ಲಿನ ಕಾನೂನು ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಗಿರೀಶ ಪಾಟೀಲ ಹಾಗೂ ಗೃಹಿಣಿಯಾಗಿರುವ ತಾಯಿ ಶಿವಲೀಲಾ ಅವರೇ ಗುರುಗಳಾಗಿದ್ದು, ಮನೆಯೇ ಮೊದಲ ಪಾಠ ಶಾಲೆಯಾಗಿದೆ.

ಸಿದ್ಧಾರ್ಥನ ವಿಶೇಷ ಸಾಮರ್ಥ್ಯ: ನಾನಾ ಕ್ಷೇತ್ರದಲ್ಲಿ ಸಾಧಕರ, ಮಹಾನ್‌ ಚಿಂತಕರು, ಸ್ವಾತಂತ್ರ್ಯ ಹೋರಾಟಗಾರರ ಸುಮಾರು 550ಕ್ಕೂ ಚಿತ್ರಪಟಗಳನ್ನು ಗುರುತಿಸಿ ಅವರ ಸಾಧನೆಯ ಕ್ಷೇತ್ರವನ್ನು ಹೇಳುತ್ತಾನೆ. 350ಕ್ಕೂ ಹೆಚ್ಚು ಕಂಪನಿಯ ಲೋಗೋ, ಧಾರ್ಮಿಕ ಚಿನ್ಹೆಗಳು ನೆನಪಿನಲ್ಲಿವೆ. ರಾಜ್ಯಗಳ ವೈಶಿಷ್ಟÂ, ಗಾದೆ ಮಾತುಗಳು ಅವುಗಳ ಭಾವಾರ್ಥ, ಖ್ಯಾತ ಕ್ರೀಡಾ ಪಟುಗಳು, ಗಣಿತಶಾಸ್ತ್ರಜ್ಞರು, ವಿಜ್ಞಾನಿಗಳು, ಸಂಗೀತ ಗಾರರು, ದೇಶದ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿಗಳು, ರಾಜ್ಯದ ರಾಜ್ಯಪಾಲರು, ಮುಖ್ಯಮಂತ್ರಿ ಹೆಸರುಗಳನ್ನು ನಿರರ್ಗಳವಾಗಿ ಹೇಳುತ್ತಾನೆ. ಜ್ಞಾನಪೀಠ ಪುರಸ್ಕೃತರ, ದಾಸ ಪರಂಪರೆಯ ಪ್ರಮುಖರು, ಪ್ರಮುಖ ರಾಜ, ರಾಣಿಯರು, ಮಹಾನ್‌ ವ್ಯಕ್ತಿಗಳ ಘೋಷಣೆಗಳು, ಸಾಮಾಜಿಕ ಹೋರಾಟಗಾರರು, ಖ್ಯಾತ ಲೇಖಕರು, ಸಾಹಿತಿಗಳು, ಕವಿಗಳು ಅವರ ಪ್ರಮುಖ ಗ್ರಂಥ ಅಷ್ಟೇ ಅಲ್ಲ ವಿಶ್ವದ ಗಮನ ಸೆಳೆದ ವಿವಿಧ ದೇಶದ ಪ್ರಮುಖ ವ್ಯಕ್ತಿಗಳ ಭಾವಚಿತ್ರಗಳನ್ನು ತಟ್ಟನೆ ಗುರುತಿಸಿ ಅವರ ಸಾಧನೆ ಸೇರಿದಂತೆ ಹಲವು ವಿಷಯ ಕೇಳಿ ತಿಳಿದುಕೊಂಡು ಲೀಲಾಜಾಲವಾಗಿ ವಿವರಿಸುವ ಸಿದ್ಧಾರ್ಥ, ಗಿನ್ನಿಸ್‌ ರೆಕಾರ್ಡ್‌ ಮಾಡಬೇಕೆಂಬ ಗುರಿ ಹೊಂದಿದ್ದಾನೆ.

ಅಪಾರ ದೈವಭಕ್ತಿ: ಸಿದ್ಧಾರ್ಥ ನಿತ್ಯ ಕನಿಷ್ಠ 45 ನಿಮಿಷ ಪೂಜೆ ಪುನಸ್ಕಾರ ಹಾಗೂ ಆಧ್ಯಾತ್ಮಕ್ಕೆ ಸಮಯ ಮೀಸಲು. ಲಿಂಗಪೂಜೆ-ಧ್ಯಾನದಲ್ಲಿ ತೊಡಗುತ್ತಾನೆ. 40ಕ್ಕೂ ಹೆಚ್ಚು ಬಸವಣ್ಣನವರ ವಚನಗಳು, ಶಿಶುವಿನಾಳ ಶರೀಫರ ತತ್ವದ ಪದಗಳು, ಶ್ಲೋಕಗಳು, ದಾಸರ ಪದ, ಭಕ್ತಿಗೀತೆಗಳು ಲಯಬದ್ಧವಾಗಿ ಹೇಳುತ್ತಾನೆ.

ಪ್ರಶಸ್ತಿ, ಪುರಸ್ಕಾರ: ಕಳೆದ ಮೂರು ವರ್ಷದಿಂದ ಮಗನ ಆಸಕ್ತಿಗೆ ತಂದೆ ತಾಯಿ ನೀರೆರೆದ ಪರಿಣಾಮ ಸಿದ್ಧಾರ್ಥ ಹಲವು ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾನೆ. ತಮಿಳುನಾಡಿನ ಖಾಸಗಿ ವಿಶ್ವವಿದ್ಯಾಲಯವೊಂದು ಸಿದ್ಧಾರ್ಥನ ಸಾಧನೆಗೆ ಡಾಕ್ಟರೇಟ್‌ ಇನ್‌ ರೆಕಾರ್ಡ್‌ ಬ್ರೇಕಿಂಗ್‌, ಯುನಿವರ್ಸಲ್‌ ಅಚೀವರ್ ಬುಕ್‌ ಆಫ್‌ ರೆಕಾರ್ಡ್‌, ಫ್ಯೂಚರ್‌ ಕಲಾಂ ಬುಕ್‌ ಆಫ್‌ ರೆಕಾರ್ಡ್‌, ಕಲಾಂ ಬುಕ್‌ ಆಫ್‌ ರೆಕಾರ್ಡ್‌, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌, ಕರ್ನಾಟಕ ಅಚೀವರ್ ಬುಕ್‌ ಆಫ್‌ ರೆಕಾರ್ಡ್‌ ಪುರಸ್ಕಾರಗಳನ್ನು ತನ್ನಾಗಿಸಿಕೊಂಡ ಸಿದ್ಧಾರ್ಥ ಶಾಲಾ ಕಲಿಕೆಯಲ್ಲೂ ಬಲು ಚೂಟಿ.

Advertisement

ಎರಡು ವರ್ಷದವನಿದ್ದಾಗ ಇವನ ಆಸಕ್ತಿ ಗುರುತಿಸಿ ಅದನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದೆವು. ಯಾವುದಾದರೂ ಸಾಧನೆ ಮಾಡಬೇಕೆನ್ನುವುದು ಕಿಂಚಿತ್ತು ಇರಲಿಲ್ಲ. ಅವನಲ್ಲಿರುವ ನೆನೆಪಿನ ಶಕ್ತಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವಿದೆ. ಆಟಿಕೆ ಸಾಮಗ್ರಿಗಳ ಬದಲು ಚಿತ್ರಪಟ, ದೈವಿಕ ಸಾಮಗ್ರಿಗಳನ್ನು ಹೆಚ್ಚಾಗಿ ಇಷ್ಟಪಡುತ್ತಾನೆ.  ಗಿರೀಶಗೌಡ ಪಾಟೀಲ, ಸಿದ್ಧಾರ್ಥನ ತಂದೆ

ನಾವು ಹೇಳಿದ ವಿಷಯವನ್ನು ನೆನಪಿನಲ್ಲಿಟ್ಟುಕೊಂಡು ಯಾವಾಗ ಕೇಳಿದರೂ ಅದನ್ನು ಸಂಪೂರ್ಣವಾಗಿ ಹೇಳುತ್ತಾನೆ. ಮಕ್ಕಳ ಆಸಕ್ತಿ ಗುರುತಿಸಿ ಪ್ರೋತ್ಸಾಹ ನೀಡಬೇಕೆನ್ನುವುದನ್ನು ನಾವು ರೂಢಿಸಿಕೊಂಡು ಮನೆಯಲ್ಲಿ ಹೇಳಿಕೊಡುತ್ತಿದ್ದೇವೆ.  ಶಿವಲೀಲಾ ಪಾಟೀಲ, ಸಿದ್ಧಾರ್ಥನ ತಾಯಿ

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next