“ವಿದ್ಯಾಹೀನಂ ಪಶು ಸಮಾನಂ’ಎಂಬ ಮಾತಿದೆ. ಅಂದರೆ ವಿದ್ಯೆಯಿಲ್ಲದವನು ಪಶುವಿಗೆ ಸಮಾನ ಎಂಬುದು ಈ ಮಾತಿನ ತಾತ್ಪರ್ಯ. ಅದೇ ರೀತಿಯಾಗಿ ವಿದ್ಯೆಯಿಂದ ವಿನಯ, ಜ್ಞಾನವನ್ನು ಅರ್ಜಿಸಿಕೊಳ್ಳಬಹುದು. ಜ್ಞಾನ ಎಂಬುದು ನಿರ್ದಿಷ್ಟವಾಗಿ ಒಂದು ಪರಿಧಿಯೊಳಗಿಲ್ಲ ಜ್ಞಾನವನ್ನು ಯಾರು ಬೇಕಾದರೂ ಕರಗತ ಮಾಡಿಕೊಳ್ಳಬಹುದು. ಆದರೆ ವಿದ್ಯೆ ಎಂಬುದು ನಿರ್ದಿಷ್ಟ ಕ್ಷೇತ್ರದಲ್ಲಿ ಆಸಕ್ತಿಯಿರುವ ವ್ಯಕ್ತಿಗಳು ಆಯಾಯ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಾದಿಗಳನ್ನು ಕಲಿಯುವುದು ಎಂದರ್ಥ.
ಮಕ್ಕಳು ಶಾಲೆಗೆ ವಿದ್ಯಾರ್ಜನೆಗಾಗಿ ಬರುವವರು, ಶಾಲೆಯಲ್ಲಿ ಮಾಡುವ ಪಾಠ, ಪ್ರವಚನಗಳು ಮಕ್ಕಳಿಗೆ ಮನದ ಟ್ಟಾಗುವುದು ಮುಖ್ಯ ವಾಗಿರುತ್ತವೆ. ಆಂಗ್ಲ ಭಾಷೆಯಲ್ಲಿ ಪಾಠ ಮಾಡಿ ವಿದ್ಯಾರ್ಥಿಗಳಿಗೆ ಅರ್ಥ ವಾಗದಿದ್ದಾಗ ಮಾತೃ ಭಾಷೆಯಲ್ಲಿ ಮತೊಮ್ಮೆ, ಮಗದೊಮ್ಮೆ ಅದೇ ಪಠ್ಯ ವಿಚಾರಗಳನ್ನು ಮನದಟ್ಟಾಗುವಂತೆ ಹೇಳುವುದೂ ಇದೆ.
ಪ್ರಾಥಮಿಕ ಶಾಲೆಗೆ ಹೋಗುವ ಹಂತದಲ್ಲಿ ಮಕ್ಕಳು ಹೆಚ್ಚಾಗಿ ಮಾತೃಭಾಷೆಯನ್ನೇ ಮಾತನಾಡುತ್ತಿರುತ್ತಾರೆ. ಹಾಗಾಗಿ ಮಾತೃಭಾಷೆಯಲ್ಲೇ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ನೀಡುವುದು ಒಳಿತು. ಮಾತೃಭಾಷೆಯಲ್ಲೇ ಮನೆಯಲ್ಲಿ ಮಾತನಾಡುತ್ತಾ, ಆಡುತ್ತಾ ವ್ಯವಹರಿಸುತ್ತ ಇದ್ದ ಮಗುವೊಂದನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿ, ಒತ್ತಾಯಪೂರ್ವಕವಾಗಿ ಆಂಗ್ಲ ಭಾಷೆಯಲ್ಲಿ ಮಾತನಾಡುವಂತೆ ಶಿಕ್ಷಕರು ಗದರುವುದು ಖಂಡನೀಯ.
ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತ ಮಾತ್ರಕ್ಕೆ ಮಕ್ಕಳು ಇಂಗ್ಲಿಷ್ ಮಾತನಾಡಲು ಕಲಿಯುತ್ತಾರೆ ಎಂಬುದು ಭ್ರಮೆ. ಕನಿಷ್ಠ ಪ್ರಾಥಮಿಕ ಶಿಕ್ಷಣವನ್ನು ಪಡೆಯದೇ ಇರುವ ವ್ಯಕ್ತಿಗಳು ಅತ್ಯುತ್ತಮವಾಗಿ ಇಂಗ್ಲಿಷಿನಲ್ಲಿ ವ್ಯವಹರಿಸುತ್ತಾರೆ. ಬೇರೆ ಬೇರೆ ಭಾಷೆ ಬಲ್ಲವರೊಂದಿಗೆ ನಾವು ಮಾತನಾಡುತ್ತಾ ಹೋದಂತೆ ನಮಗೂ ಅವರ ಭಾಷೆಯನ್ನು ಕಲಿಯಬಹುದು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್‌ಗೆ ಬಹಳ ಪ್ರಾಮುಖ್ಯ ಇದೆ. ಹಾಗಾಗಿ ಹೆತ್ತವರು ಆಂಗ್ಲ ಮಾಧ್ಯಮದತ್ತ ಆಕರ್ಷಿತರಾಗುತ್ತಾರೆ. ಕೇವಲ ಒಂದು ಭಾಷೆಯನ್ನು ಕಲಿಯುವ ಸಲುವಾಗಿ ಲಕ್ಷ ಲಕ್ಷ ದುಡ್ಡು ಸುರಿಯುವ ಬದಲು, ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ನೀಡಿ, ಇಂಗ್ಲಿಷ್ ಕಥೆ ಪುಸ್ತಕಗಳನ್ನು ಮಕ್ಕಳಿಗೆ ಓದಿಸುವ ಮೂಲಕ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪ್ರಸಾರವಾಗುವ ಕಾಟೂìನ್‌ಗಳನ್ನು ಮಕ್ಕಳಿಗೆ ತೋರಿಸುವ ಮೂಲಕ ಕೂಡ ಇಂಗ್ಲಿಷ್ ಕಲಿಸಬಹುದು. ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲೇ ನೀಡುವುದು ಸಮಂಜಸ. ಸಾಧಿಸಬೇಕೆಂಬ ಹಠವಿದ್ದರೆ ಯಾವುದೇ ಭಾಷೆ ಮಾತನಾಡುವ ವ್ಯಕ್ತಿಯೂ ಕೂಡ ಸಾಧಿಸಬಹುದು. ಕೇವಲ ಇಂಗ್ಲಿಷ್ ಬಲ್ಲವರು ಮಾತ್ರ ಸಾಧಿಸಬೇಕೆಂಬ ನಿಯಮವೇನಿಲ್ಲ. ಸಾಧನೆಗೆ ಪ್ರತಿಭೆ ಮುಖ್ಯವೇ ಹೊರತು ಭಾಷೆಯಲ್ಲ.
ಕವನ ದೇವಾಡಿಗ
ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ