Advertisement
ಬಹುತೇಕ ಎಲ್ಲಾ ತಂಡಗಳು ಜನಪದ ಮತ್ತು ಗ್ರಾಮೀಣ ಜನ ಜೀವನ ,ಸಾಂಸ್ಕೃತಿಕ ವೈವಿಧ್ಯವನ್ನು ಬಿಂಬಿಸುವಂತಹ ಸನ್ನಿವೇಶಗಳನ್ನು ನೃತ್ಯ ನಾಟಕ ರೂಪಕಗಳ ಮೂಲಕ ಪ್ರದರ್ಶಿಸಿದ್ದು ವಿದ್ಯಾರ್ಥಿಗಳ ಸೃಜನಶೀಲತೆಯ ಬಗ್ಗೆ ಮೆಚ್ಚುಗೆ ತರಿಸಿತು. ಹಾಲಕ್ಕಿ ನೃತ್ಯ, ಕೊಡವ ನೃತ್ಯ,ಕಂಸಾಳೆ, ಹೌಂದೇರಾಯನ ಓಲಗ,ಹಣಬಿನ ಕುಣಿತ, ಸುಗ್ಗಿ ಕುಣಿತ, ಭೂತ ಕೋಲ, ಪೂಜಾ ಕುಣಿತ, ಕಂಗೀಲು ನೃತ್ಯ, ಚಂಡೇ ವಾದನ, ನಾಸಿಕ್ ಬ್ಯಾಂಡ್,ಶೋಭಲೆ,ರಾಜಸ್ತಾನದ ಗುಮ್ರಾ ನೃತ್ಯ,ಹರ್ಯಾಣದ ನೃತ್ಯ,ಲಾವಣಿ, ಕಥಕ್ಕಳಿ, ಕೋಲಾಟ, ಡೊಳ್ಳು ಕುಣಿತ, ಬಂಜಾರ ನೃತ್ಯ, ಕಥಕ್ಕಳಿ ಮೊದಲಾದವು ಒಂದು ದೊಡ್ಡ ಜನಪದ ಲೋಕವನ್ನೇ ವೇದಿಕೆಯ ಮೇಲೆ ತೆರೆದಿಡುವಲ್ಲಿ ಯಶಸ್ವಿಯಾದವು.ಒಡಿಸ್ಸಿ ನೃತ್ಯ, ದಶಾವತಾರ ನೃತ್ಯ,ಹಲವು ತಂಡಗಳ ಚಿತ್ರ ಕಲಾವಿದರು ವೇದಿಕೆಯಲ್ಲಿ ರೇಖಾ ಚಿತ್ರವೂ ಸೇರಿದಂತೆ ತಮ್ಮ ಚಿತ್ರ ಕಲೆಯ ಪ್ರದರ್ಶನ ನೀಡಿದ್ದು , ಒಂದೇ ಹಾಡಿಗೆ ಭರತನಾಟ್ಯ ಮತ್ತು ಮೋಹಿನಿಯಾಟ್ಟಂ ಜಂಟಿ ಪ್ರದರ್ಶನ ನೀಡಿದ್ದು, ಯಕ್ಷಗಾನ ಚೌಕಿಯಿಂದ ಬಣ್ಣ ಕಟ್ಟಿ ಕುಣಿದು ಕೊನೆಯಲ್ಲಿ ಹಣಕ್ಕಾಗಿ ಧಣಿಯೆದುರು ಕೈ ಚಾಚಬೇಕಾದ ಯಕ್ಷಗಾನ ಕಲಾವಿದರ ಪರಿಸ್ಥಿತಿ ಬಗೆಗೆ ಕಾಳಜಿ ತೋರಿಸಿದ್ದು, ಅಮ್ಮನ ಹಾಡಿನ ಸೋಲೋ ನೃತ್ಯ, ಕರಾಟೆ ಪ್ರದರ್ಶನ, ಹೇ ನವಿಲೇ ಹೆಣ್ಣವಿಲೇ ಎನ್ನುವ ಗೀತೆಯ ಗಾಯನ, ಅಮ್ಮನ ತ್ಯಾಗದ ಕಿರು ಪ್ರಹಸನ, ಮೀನುಗಾರ ಮಹಿಳೆಯರ ನಿತ್ಯದ ಬವಣೆ ಬಿಂಬಿಸುವ ಪ್ರಹಸನಗಳು ಗಮನ ಸೆಳೆದವು. ಕೋಮು ಸಾಮರಸ್ಯ ಬಿಂಬಿಸುವ ಮೈಮ್ ಶೋ, ಭಜನಾ ಕುಣಿತ, ರ್ಯಾಪ್ ಸಾಂಗ್ ಎಲ್ಲವೂ ವಿದ್ಯಾರ್ಥಿಗಳ ವಿಭಿನ್ನ ಆಸಕ್ತಿಗಳಿಗೆ ಕನ್ನಡಿ ಹಿಡಿದವು.