Advertisement

ಅಪ್ಪನ ಸಲಹೆಗೆ ತಲೆದೂಗಿದ ಮಗ

11:26 AM Mar 13, 2017 | |

ಯುವನ್‌ ಶಂಕರ್‌ ರಾಜ ತಮಿಳಿನಲ್ಲಿ ಬೇಡಿಕೆಯ ಸಂಗೀತ ನಿರ್ದೇಶಕ. ಇಲ್ಲಿವರೆಗೆ 100ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂದಹಾಗೆ, ಯುವನ್‌ ಶಂಕರ್‌ ರಾಜ, ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ಪುತ್ರ. ಯುವನ್‌ಗೂ ತನ್ನ ತಂದೆಯಂತೆ ಹೆಸರು ಮಾಡಬೇಕು, ವಿಭಿನ್ನ ಹಾಡುಗಳನ್ನು ಕೊಡಬೇಕು, ಎಲ್ಲಾ ಭಾಷೆಯ ಚಿತ್ರರಂಗಗಳಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇದೆಯಂತೆ. ಅದೇ ಕಾರಣಕ್ಕಾಗಿ ಈಗ ಯುವನ್‌ ಶಂಕರ್‌ ರಾಜ ಕನ್ನಡಕ್ಕೆ ಬಂದಿದ್ದಾರೆ.

Advertisement

“ಗೌಡ್ರು ಹೋಟೆಲ್‌’ ಚಿತ್ರಕ್ಕೆ ಯುವನ್‌ ಸಂಗೀತ ನೀಡುತ್ತಿದ್ದಾರೆ. “ನನಗೆ ಈ ಹಿಂದೆಯೂ ಕನ್ನಡದಿಂದ ಅನೇಕ ಆಫ‌ರ್‌ಗಳು ಬಂದಿದ್ದವು. ಆದರೆ ಆಗ ನಾನು ಒಪ್ಪಿಕೊಂಡ ಕಮಿಟ್‌ಮೆಂಟ್‌ಗಳನ್ನು ಮುಗಿಸಿಕೊಡಬೇಕಿತ್ತು. ಹಾಗಾಗಿ, ಈ ಕಡೆ ಬರಲು ಸಾಧ್ಯವಾಗಿಲ್ಲ. ನಮ್ಮ ತಂದೆಯವರು ಕೂಡಾ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಕೆಲಸ ಮಾಡಿದ್ದಾರೆ. ಅದೇ ತರಹ ನನಗೂ ಎಲ್ಲಾ ಭಾಷೆಗಳಲ್ಲಿ ಕೆಲಸ ಮಾಡುವ ಆಸೆ ಇದೆ’ ಎನ್ನುತ್ತಾರೆ.

ಅಂದಹಾಗೆ, “ಗೌಡ್ರು ಹೋಟೆಲ್‌’ ಚಿತ್ರ ಮಲಯಾಳಂನ “ಉಸ್ತಾದ್‌ ಹೋಟೆಲ್‌’ ಚಿತ್ರದ ರೀಮೇಕ್‌. ಆದರೆ, ಯುವನ್‌ ಶಂಕರ್‌, ಇಲ್ಲಿ ಫ್ರೆಶ್‌ ಟ್ಯೂನ್‌ಗಳನ್ನು ನೀಡುತ್ತಿದ್ದಾರಂತೆ. “ನಾನು ಮೂಲ ಚಿತ್ರವನ್ನು ನೋಡಿಲ್ಲ. ಇಲ್ಲಿ ಫ್ರೆಶ್‌ ಟ್ಯೂನ್‌ಗಳನ್ನು ಕೊಡುತ್ತಿದ್ದೇನೆ. ಅಲ್ಲಿನ ಯಾವುದೇ ಟ್ಯೂನ್‌ಗಳನ್ನು ಬಳಸಿಕೊಳ್ಳುತ್ತಿಲ್ಲ. ಒಟ್ಟು ಆರು ಹಾಡುಗಳಿವೆ’ ಎಂದು “ಗೌಡ್ರು ಹೋಟೆಲ್‌’ ಚಿತ್ರದ ಬಗ್ಗೆ ಹೇಳುತ್ತಾರೆ ಯುವನ್‌. ಸಹಜವಾಗಿಯೇ ಅನೇಕರಿಗೆ ಒಂದು ಕುತೂಹಲವಿರುತ್ತದೆ. ತಂದೆ ದೊಡ್ಡ ಸಂಗೀತ ನಿರ್ದೇಶಕ.

ಮಗ ಕೂಡಾ ಅದೇ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವಾಗ ತಂದೆಯಿಂದ ಏನು ಸಲಹೆ ಸಿಗಬಹುದು ಎಂದು. ಇದೇ ಪ್ರಶ್ನೆಯನ್ನು ಯುವನ್‌ ಶಂಕರ್‌ ರಾಜ ಅವರಲ್ಲಿ ಕೇಳಿದರೆ, “ನೇರವಾಗಿ ಅವರು ಏನನ್ನೂ ಹೇಳುವುದಿಲ್ಲ. ಆದರೆ, ಕೆಲವು ಸಲಹೆಗಳನ್ನು ಕೊಡುತ್ತಾರೆ. ಮುಖ್ಯವಾಗಿ ಹಾಡುಗಳಲ್ಲಿ ನೆಗೆಟಿವ್‌ ಪದಗಳನ್ನು ಬಳಸಬೇಡ ಎಂದು. ಉದಾಹರಣೆಗೆ, “ನಿನ್ನ ನೋಡಿ ನಾನು ಸತ್ತೆ’, “ನಿನ್ನ ನೋಟ ನನ್ನನ್ನು ಸಾಯಿಸಿತು’ ಈ ತರಹದ ನೆಗೆಟಿವ್‌ ಪದಗಳನ್ನು ಬಳಸಬಾರದು.

ಚಿತ್ರ ನೋಡುವ ಪ್ರೇಕ್ಷಕನಿಗೆ ಪಾಸಿಟಿವ್‌ ವಿಷಯಗಳನ್ನು ಮಾತ್ರ ಕೊಡಬೇಕು’ ಎಂಬ ಸಲಹೆಯನ್ನು ಇಳಯರಾಜಾ ಅವರು ಯುವನ್‌ಗೆ ನೀಡುತ್ತಾರಂತೆ. ಯುವನ್‌, ಅವರ ತಂದೆ ಮಾಡಿರುವ ಕನ್ನಡದ ಅನೇಕ ಹಾಡುಗಳನ್ನು ಕೇಳಿದ್ದಾರಂತೆ. ಇನ್ನು ಯುವನ್‌ ಕೂಡಾ ಈಗ ಬಿಝಿ ಸಂಗೀತ ನಿರ್ದೇಶಕ. ಸದ್ಯ ಅವರ ಕೈಯಲ್ಲಿ 20ಕ್ಕೂ ಹೆಚ್ಚು ಸಿನಿಮಾಗಳಿವೆ. ಹೀಗಿರುವ ಯುವನ್‌, ತಂದೆಯ ಜೊತೆ ಕೆಲಸ ಮಾಡುತ್ತಿಲ್ಲ. ಬದಲಾಗಿ ಅವರೇನಾದರೂ ಹಾಡಲು ಕರೆದರೆ ಹೋಗುತ್ತಾರಂತೆ.

Advertisement

ಕನ್ನಡದಲ್ಲಿ ಮೊದಲ ಬಾರಿಗೆ ಸಂಗೀತ ನೀಡುತ್ತಿರುವ ಯುವನ್‌ಗೆ ಇಲ್ಲಿನ ಪ್ರೇಕ್ಷಕರ ಅಭಿರುಚಿ ಗೊತ್ತಾ ಎಂಬ ಪ್ರಶ್ನೆ ಬರುತ್ತದೆ. ಅದಕ್ಕೂ ಯುವನ್‌ ಉತ್ತರಿಸುತ್ತಾರೆ. “ಸಂಗೀತಕ್ಕೆ ಭಾಷೆ ಇಲ್ಲ. ಅದು ಭಾಷೆಯ ಗಡಿಯನ್ನು ದಾಟಿದ್ದು. ಇವತ್ತು ನಮ್ಮ ತಂದೆ ಈ ಮಟ್ಟಕ್ಕೆ ಬೆಳೆಯಲು ಅದೇ ಕಾರಣ. ಒಳ್ಳೆಯ ಟ್ಯೂನ್‌ಗಳನ್ನು ಕೊಡುವುದಷ್ಟೇ ಸಂಗೀತ ನಿರ್ದೇಶಕನ ಕೆಲಸ’ ಎನ್ನುತ್ತಾರೆ. ಅಂದಹಾಗೆ, ಯುವನ್‌ಗೆ ಬೆಂಗಳೂರು ವಾತಾವರಣ ತುಂಬಾ ಇಷ್ಟವಂತೆ. ಹಾಗಾಗಿ, ಇಲ್ಲಿ ಕಂಫೋಸಿಂಗ್‌ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next