Advertisement
ತ್ರಿವಳಿ ತಲಾಖ್ ಅಥವಾ ತಲಾಖ್-ಇ-ಬಿದ್ದತ್ ಮತ್ತೆ ಗುಲ್ಲೆಬ್ಬಿಸುತ್ತಿದೆ. ಮುಸ್ಲಿಮ್ ಮಹಿಳೆಯರ ವೈವಾಹಿಕ ಸಂಕಷ್ಟ ನಿವಾರಣೆಯ ಉದ್ದೇಶದಿಂದ ಕೇಂದ್ರ ಸರಕಾರ ಸುಪ್ರೀಂ ಕೋರ್ಟಿನ ಆದೇಶಕ್ಕನುಗುಣವಾಗಿ ಮುಸ್ಲಿಮ್ ಮಹಿಳೆಯರ ವಿವಾಹ ಹಕ್ಕುಗಳ ಸಂರಕ್ಷಣಾ ಕಾಯಿದೆಯನ್ನು ರಚಿಸಿ ಲೋಕಸಭೆಯ ಅಂಗೀಕಾರ ಪಡೆದಿದೆ. ಆದರೆ ಈ ಕಾಯಿದೆಗೆ ರಾಜ್ಯಸಭೆಯ ಅನುಮೋದನೆ ಸಿಗಲಿಲ್ಲ. ಮಸೂದೆಯಲ್ಲಿ ಹಲವು ಅಸಂಗತಗಳಿವೆ ಹಾಗೂ ಪರಿಪೂರ್ಣವಾಗಿಲ್ಲ ಎಂದು ಹೇಳಿ ವಿಪಕ್ಷಗಳು ರಾಜ್ಯಸಭೆಯಲ್ಲಿ ಕಾಯಿದೆಯನ್ನು ತಡೆ ಹಿಡಿದಿವೆ. ಕಾಯಿದೆಯನ್ನು ಮುಸ್ಲಿಮ್ ಕಾನೂನು ತಜ್ಞರಿಂದ ಕೂಡಿರುವ ವಿಶೇಷ ಸಮಿತಿಯ ಪರಿಷ್ಕರಣೆಗೆ ಒಪ್ಪಿಸಬೇಕೆನ್ನುವುದು ವಿರೋಧ ಪಕ್ಷಗಳ ಆಗ್ರಹ. ಈ ಕಾಯಿದೆ ಪರಿಪೂರ್ಣವಲ್ಲ ಎನ್ನುವುದು ನಿಜ. ಕಾಯಿದೆಯಲ್ಲಿ ಹಲವು ಲೋಪಗಳು ಮತ್ತು ಅಸಂಗತಗಳು ಇದ್ದು, ಅವುಗಳ ಮೇಲೆ ಬೆಳಕು ಚೆಲ್ಲಲು ಇಲ್ಲಿ ಪ್ರಯತ್ನಿಸಲಾಗಿದೆ. ಮೇಲ್ನೋಟಕ್ಕೇ ಕಂಡುಬರುವ ಕೆಲವು ಅಸಂಗತಗಳು:
Related Articles
Advertisement
ಸವೊìàಚ್ಚ ನ್ಯಾಯಾಲಯ ತ್ರಿವಳಿ ತಲಾಖ್ ಅಸಿಂಧು ಎಂದು ಘೋಷಿಸಿದ ಅನಂತರ ಪ್ರತ್ಯೇಕ ಕಾಯಿದೆಯ ಅಗತ್ಯ ಇಲ್ಲ. ಮುಸ್ಲಿಮ್ ದಂಪತಿ ನಡುವೆ ವೈವಾಹಿಕ ವಿವಾದಗಳುಂಟಾದಾಗ ಅವುಗಳನ್ನು ನಿವಾರಿಸಲು ಕಾನೂನು ಬೇಕು. ಆದರೆ ಈ ಮಸೂದೆಯಲ್ಲಿ ಆ ಕುರಿತು ಪ್ರಸ್ತಾಪಿಸಿಲ್ಲ. ಮುಸ್ಲಿಮ್ ಮಹಿಳೆಯರ ಪ್ರಮುಖ ಆಕ್ಷೇಪವಿರುವುದು ಪುರುಷರ ಬಹುಪತ್ನಿತ್ವ ಮತ್ತು ಮಹಿಳೆಗೂ ಪುರುಷ ಸಮಾನವಾಗಿ ವಿವಾಹ ವಿಚ್ಛೇದನದ ಸ್ವಾತಂತ್ರ್ಯವಿಲ್ಲದಿರುವುದರ ಕುರಿತು. ಇಂತಹ ವಿವಾದ ಉಂಟಾದಾಗ ಇತ್ಯರ್ಥಪಡಿಸಲು ಸಮರ್ಪಕ ವ್ಯವಸ್ಥೆ ಕುರಿತು ಮಸೂದೆಯಲ್ಲಿ ಪ್ರಸ್ತಾವವಿಲ್ಲ.
ಅನೇಕ ಮುಸ್ಲಿಮ್ ಪುರುಷರು ಪತ್ನಿಯನ್ನು ವಿಚ್ಛೇದಿಸದೆ ಕೇವಲ ಪರಿತ್ಯಜಿಸಿ ಇನ್ನೊಬ್ಬಳ ಕೈಹಿಡಿದ ದೃಷ್ಟಾಂತಗಳಿವೆ. ಇಂತಹ ಪರಿತ್ಯಕ್ತ ಪತ್ನಿಯರ ಗತಿ ಏನೆಂಬುದನ್ನು ಈ ಮಸೂದೆಯಲ್ಲಿ ಸ್ಪಷ್ಟಪಡಿಸಿಲ್ಲ. ರೂಢಿಯಲ್ಲಿರುವ ಮುಸ್ಲಿಮ್ ವೈಯಕ್ತಿಕ ಕಾನೂನು ಪ್ರಕಾರ ಪುರುಷ ನಾಲ್ಕು ಪತ್ನಿಯರನ್ನು ಏಕಕಾಲದಲ್ಲಿ ಹೊಂದಿರಬಹುದು. ಪ್ರಸ್ತಾವಿತ ಮಸೂದೆಯ ಮೂಲ ಉದ್ದೇಶ ಮುಸ್ಲಿಮ್ ಮಹಿಳೆಯರ ಹಿತಾಸಕ್ತಿಗಳ ರಕ್ಷಣೆಯಾಗಿದ್ದರೂ ಮಸೂದೆಯಲ್ಲಿ ಬಹುಪತ್ನಿತ್ವದ ಪಿಡುಗಿನಿಂದ ರಕ್ಷಣೆ ನೀಡುವ ಅಂಶವಿಲ್ಲ. ಮಹಿಳೆಯರ ಪ್ರಮುಖ ಆಕ್ಷೇಪಣೆಯಿರುವುದು ಪುರುಷಗಿರುವ ತಮ್ಮ ಇಚ್ಛೆ ಬಂದಂತೆ ಯಾವಾಗ ಬೇಕಾದರೂ ಪತ್ನಿಯನ್ನು ತ್ಯಜಿಸಿ ಇನ್ನೊಬ್ಬಳ ಕೈಹಿಡಿಯುವ ಸ್ವಾತಂತ್ರ್ಯದ ಕುರಿತು. ಮಸೂದೆಯಲ್ಲಿ ಈ ಕುರಿತು ಉಲ್ಲೇಖವಿಲ್ಲ.
ಬಹುಪತ್ನಿವಲ್ಲಭರು ತಾರತಮ್ಯವಿಲ್ಲದಂತೆ ಎಲ್ಲ ಪತ್ನಿಯರಿಗೆ ಗೌರವಯುತ ಜೀವನ ನಿರ್ವಹಣಾ ವ್ಯವಸ್ಥೆ, ವೈದ್ಯಕೀಯ ಸೌಲಭ್ಯ, ವಾಸಯೋಗ್ಯ ವಸತಿಗಳನ್ನು ಒದಗಿಸುವ ಅವಶ್ಯವಿದೆ. ಪರಿತ್ಯಕ್ತೆಯರು ಈ ಸೌಲಭ್ಯಗಳನ್ನು ಪಡೆಯುವ ವಿಧಿವಿಧಾನಗಳನ್ನು ಮಸೂದೆಯಲ್ಲಿ ಅಳವಡಿಸುವ ಅಗತ್ಯವಿದೆ. ಈಗ ರೂಢಿಯಲ್ಲಿರುವ ವ್ಯವಸ್ಥೆ ಪ್ರಕಾರ ವೈವಾಹಿಕ ವಿವಾದಗಳನ್ನು ಸ್ಥಳೀಯ ಇಸ್ಲಾಮಿ ಕಾನೂನು ತಜ್ಞರೆನಿಸಿರುವ ಧಾರ್ಮಿಕ ಮುಲ್ಲಾರ ಸಮಕ್ಷಮ ಪಂಚಾಯತಿಯಲ್ಲಿ ಇತ್ಯರ್ಥಪಡಿಸಲಾಗುತ್ತದೆ. ಈ ಪಂಚಾಯತಿಯು ಹೆಚ್ಚಾಗಿ ಪುರುಷ ಕೇಂದ್ರಿತವಾಗಿದ್ದು ಪತ್ನಿಯರ ಅಳಲನ್ನು ಆಲಿಸಿ ನ್ಯಾಯ ಒದಗಿಸುವ ವ್ಯವಸ್ಥೆ ಇರುವುದಿಲ್ಲ.
ಕೆಲವು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ತ್ರಿವಳಿ ತಲಾಖ್ ನಿಷೇಧಿಸಲಾಗಿದೆ. ಪಾಕಿಸ್ಥಾನದಲ್ಲಿ ಗಂಡ ತಲಾಖ್ ಉಚ್ಚರಿಸಿದೊಡನೆಯೇ ವಿವಾಹ ವಿಚ್ಛೇದನವಾಗುವುದಿಲ್ಲ. ಕೌಟುಂಬಿಕ ವಿವಾದ ಇತ್ಯರ್ಥಪಡಿಸಲು ಸರಕಾರ ನೇಮಿಸುವ ವಿಶೇಷ ನ್ಯಾಯಸ್ಥಾನಕ್ಕೆ ವಿಚ್ಛೇದನದ ಅರ್ಜಿ ಸಲ್ಲಿಸಬೇಕು. ಅಂದಿನಿಂದ 30 ದಿನಗಳೊಳಗೆ ನ್ಯಾಯಸ್ಥಾನದ ಅಧ್ಯಕ್ಷ ವ್ಯಾಜ್ಯಕ್ಕೆ ಸಂಬಂಧಿಸಿ ಎರಡೂ ಪಕ್ಷಗಳ ಪ್ರತಿನಿಧಿಗಳಿಂದ ಕೂಡಿರುವ ಪಂಚಾಯತಿ ಸಭೆ ಜರುಗಿಸಬೇಕು. ಪಂಚಾಯತಿಯಲ್ಲಿ ಎರಡೂ ಪಕ್ಷಗಳ ಅಹವಾಲುಗಳನ್ನು ಆಲಿಸಿ ಪತಿ ಪತ್ನಿಯರನ್ನು ಒಂದುಗೂಡಿಸುವ ಪ್ರಯತ್ನ ಮಾಡಲು ಅವಕಾಶವಿದೆ. ಅಥವಾ ಪತ್ನಿಗೆ ಯೋಗ್ಯ ಪರಿಹಾರ, ರಕ್ಷಣೆ ಇತ್ಯಾದಿಗಳನ್ನು ಒದಗಿಸುವ ನಿರ್ದೇಶನವನ್ನೂ ನೀಡಬಹುದು. ಇತರ ಇಸ್ಲಾಮಿಕ್ ರಾಷ್ಟ್ರಗಳಲ್ಲೂ ಈ ವಿಧದ ಕಾನೂನು ವ್ಯವಸ್ಥೆ ಇದೆ. ಲೋಪದೋಷಗಳನ್ನು ನಿವಾರಿಸಿ ಅದನ್ನು ಸಮಗ್ರ ಮಸೂದೆಯನ್ನಾಗಿ ಮಾಡಲು ಪ್ರಸ್ತುತ ಮಂಡಿಸಿರುವ ಮಸೂದೆಯನ್ನು ಹಿಂಪಡೆದು ಮುಸ್ಲಿಮ್ ಕಾನೂನು ತಜ್ಞರಿಂದ ಕೂಡಿರುವ ವಿಶೇಷ ಸಮಿತಿಯ ಮೂಲಕ ಮುಸ್ಲಿಮ್ ವಿವಾಹಕ್ಕೆ ಸಂಬಂಧಿಸಿದ ಪರಿಪೂರ್ಣ ಮಸೂದೆ ರಚಿಸುವುದು ಸೂಕ್ತ. ವಿವಾಹ ಅಪೇಕ್ಷಿತ ಪುರುಷ ಮತ್ತು ಸ್ತ್ರೀಯ ವಯಸ್ಸು, ದೈಹಿಕ, ಮಾನಸಿಕ ಅರ್ಹತೆ ಇತ್ಯಾದಿ ಅಂಶಗಳು ಆ ಮಸೂದೆಯಲ್ಲಿರಬೇಕು. ಅಲ್ಲದೆ ವೈವಾಹಿಕ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ವಿಶೇಷ ನ್ಯಾಯಾಲಯಗಳ ಸ್ಥಾಪನೆ ಆಥವಾ ಇತರ ಪರ್ಯಾಯ ವ್ಯವಸ್ಥೆಯ ಕುರಿತು ಮಸೂದೆಯಲ್ಲಿ ಸ್ಪಷ್ಟ ಉಲ್ಲೇಖವಿರಬೇಕು. ರಾಜ್ಯಸಭೆಯ ಮುಂದಿರುವ ಮಸೂದೆಯನ್ನು ಅವಸರದಲ್ಲಿ ಸಿದ್ಧಪಡಿಸಿರುವಂತೆ ಕಾಣುತ್ತದೆ. ಈಗ ಜಾರಿಯಲ್ಲಿರುವ ಸಿವಿಲ್ ಮ್ಯಾರೇಜ್ ಕಾಯಿದೆ 1956ರ ಮಾದರಿಯಲ್ಲಿ ಮುಸ್ಲಿಮ್ ವಿವಾಹ ಕಾಯಿದೆಯನ್ನು ರಚಿಸಬಹುದು. ಸಿವಿಲ್ ಮ್ಯಾರೇಜ್ ಕಾಯಿದೆ ಹಿಂದೂ ಅಥವಾ ಯಾವುದೇ ಕೋಮಿನವರಿಗೆ ಮಾತ್ರ ಅನ್ವಯಿಸುವಂಥದ್ದಲ್ಲ. ಈ ಕಾಯಿದೆಯನ್ನು ಭಾರತದ ಎಲ್ಲ ಪ್ರಜೆಗಳು ಆಯ್ಕೆ ಮಾಡಿಕೊಳ್ಳಬಹುದು.
ಎ. ಪಿ. ಗೌರೀಶಂಕರ (ವಕೀಲರು)