ಉಳ್ಳಾಲ: ಫಾಸ್ಟಾಗ್ ಕಡ್ಡಾಯ ಅಳವಡಿಕೆ ಹಾಗೂ ಫಾಸ್ಟಾಗ್ ರಹಿತ ವಾಹನಗಳಿಗೆ ದುಪ್ಪಟ್ಟು ದರ ವಸೂಲು ಸಹಿತ ಸ್ಥಳೀಯರಿಗೆ ಟೋಲ್ ಕಡ್ಡಾಯವನ್ನು ವಿರೋಧಿಸಿ ತಲಪಾಡಿ ಗ್ರಾಮಸೌಧದಲ್ಲಿ ಬುಧವಾರ ನಡೆದ ಸಭೆಯಲ್ಲಿ ತಲಪಾಡಿ ಗ್ರಾಮದ ಜನರಿಗೆ ಟೋಲ್ ವಿನಾಯಿತಿ ನೀಡುವ ವರೆಗೆ ಉಗ್ರ ಹೋರಾಟ ನಡೆಸಲು ತೀರ್ಮಾನಿಸಿದ್ದು, ಫೆ. 18ರಂದು ಬೆಳಗ್ಗೆ 9 ಗಂಟೆಗೆ ತಲಪಾಡಿ ಟೋಲ್ ಫ್ಲಾಝಾದ ಎದುರು ಪ್ರಭಟನೆಗೆ ನಿರ್ಧರಿ ಸಲಾಯಿತು.
ಈ ಸಂದರ್ಭ ತಲಪಾಡಿ ಟೋಲ್‌ಗೇಟ್ ಹೋರಾಟ ಸಮಿತಿ ಅಸ್ತಿತ್ವಕ್ಕೆ ತರಲಾ ಯಿತು. ಇದಕ್ಕೆ 11 ಮಂದಿ ಕಾರ್ಯಕಾರಿ ಸದಸ್ಯರನ್ನು ಆರಿಸಲಾಯಿತು.
ಸ್ಥಳೀಯರಿಗೆ ಟೋಲ್ ವಿನಾಯಿತಿ ಯನ್ನು ಕಡಿತಗೊಳಿಸಿದ ವಿಚಾರದಲ್ಲಿ ಮಾತನಾಡಿದ ಗಡಿನಾಡು ರಕ್ಷಣ ವೇದಿಕೆ ಅಧ್ಯಕ್ಷ ಸಿದ್ದಿಕ್, ತಲಪಾಡಿ ಟೋಲ್ ಆರಂಭದಿಂದ ನಿರಂತರ ಹೋರಾಟದ ಫಲವಾಗಿ ಸ್ಥಳೀಯರಿಗೆ ಟೋಲ್ ವಿನಾಯಿತಿ ದೊರಕಿತ್ತು. ಆದರೆ ನೂತನ ಆದೇಶದಿಂದ ಸ್ಥಳೀಯರು ದುಪ್ಪಟ್ಟು ಹಣಪಾವತಿ ಮಾಡುವ ಸ್ಥಿತಿ ನಿರ್ಮಾಣವಾಗಿದ್ದು, ಯಾವುದೇ ಕಾರಣಕ್ಕೆ ಸ್ಥಳೀಯರು ಟೋಲ್ ಪಾವತಿ ಮಾಡುವ ಸ್ಥಿ§ತಿಯಲ್ಲಿಲ್ಲ. ದಿನ ಸಾಮಗ್ರಿಗಳಿಗೆ ದರ ಏರಿಕೆ ಒಂದಡೆಯಾದರೆ ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಕಡ್ಡಾಯ ವಿಧಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಟೋಲ್‌ನಿಂದ ವಿನಾಯಿತಿ ನೀಡುವವರೆಗೆ ನಿರಂತರ ಹೋರಾಟ ನಡೆಸಲಾಗುವುದು. ಇದರ ಆರಂಭದ ಭಾಗವಾಗಿ ಗುರುವಾರ ನಡೆಯುವ ಪ್ರತಿಭಟನೆಗೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದರು.
ತಾ.ಪಂ. ಸದಸ್ಯರಾದ ಸಿದ್ದಿಕ್ ತಲ ಪಾಡಿ, ಸುರೇಖಾ ಚಂದ್ರಹಾಸ್, ಇಸ್ಮಾಯಿಲ್ ಕೆ.ಸಿ.ರೋಡ್, ಡಿವೈಎಫ್‌ಐ ಉಳ್ಳಾಲ ವಲಯ ಅಧ್ಯಕ್ಷ ಅಶ್ರಫ್ ಕೆ.ಸಿ. ರೋಡ್, ರೋಹಿತ್, ವಿನು ಶೆಟ್ಟಿ, ವೈಭವ ಶೆಟ್ಟಿ, ಜಗದೀಶ್, ಮಂಜಣ್ಣ, ನವೀನ, ಸಫìರಾಜ್, ಸಂತೋಷ್ ಕಡೆಮೊಗೆರು ಉಪಸ್ಥಿತರಿದ್ದರು.
ದುಪ್ಪಟ್ಟು ದರ ಕೈಬಿಡಿ
ಟೋಲ್ ಸಮೀಪದ ಐದು ಕಿ.ಮೀ. ವ್ಯಾಪ್ತಿಯ ಜನರಿಗೆ ಹಿಂದೆ ಜಾರಿಯಲ್ಲಿದ್ದ ಉಚಿತ ಪಾಸ್ ನೀಡಬೇಕು. ದುಪ್ಪಟ್ಟು ದರ ಕೈ ಬಿಡಬೇಕು. ಹಿಂದೆ ಇದ್ದ ರೀತಿಯಲ್ಲಿ ಮಂಗಳೂರು ತಲಪಾಡಿ ಬಸ್ ಮೇಲಿನ ತಲಪಾಡಿಯವರೆಗೆ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಲಾಯಿತು.